ಬೆಂಗಳೂರು: ಸದ್ಯ ದೇಶಾದ್ಯಂತ ʼಕಾಂತಾರʼ ಹವಾ ಹಬ್ಬಿದೆ. ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼಕಾಂತಾರ: ಚಾಪ್ಟರ್ 1' (Kantara: Chapter 1) ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಸೆಪ್ಟೆಂಬರ್ 22ರಂದು ಟ್ರೈಲರ್ ಹೊರತಂದು ಚಿತ್ರದ ಝಲಕ್ ತೋರಿಸಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡು ರಿಲೀಸ್ ಮಾಡಿದೆ. ಶಿವನನ್ನು ಆರಾಧಿಸುವ ಈ ʼಬ್ರಹ್ಮಲಶʼ ಹಾಡಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿ. ಅಜನೀಶ್ ಲೋಕನಾಥ್ (B. Ajaneesh Loknath) ಸಂಗೀತ ನಿರ್ದೇಶನದ ಈ ಹಾಡು ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ರಿಲೀಸ್ ಆಗಿದೆ. ಮಲಯಾಳಂ ಹೊರತುಪಡಿಸಿ ಕನ್ನಡ ಸಹಿತ ಉಳಿದೆಲ್ಲ ಭಾಷೆಗಳಲ್ಲಿ ಅಭಿ ವಿ. (Singer Abby V) ಹಾಡಿದ್ದು, ಅವರ ಭಾವಪೂರ್ಣ ಧ್ವನಿಗೆ ಕೇಳುಗರು ಫಿದಾ ಆಗಿದ್ದಾರೆ. ಹಾಗಾದರೆ ಯಾರು ಈ ಅಭಿ ವಿ? ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.
ʼಕಾಂತಾರʼ ಚಿತ್ರದಲ್ಲಿ ʼವರಾಹ ರೂಪಂʼ ಹಾಡು ಭಾರಿ ಜನಪ್ರಿಯವಾಗಿತ್ತು. ಸಂಗೀತಕ್ಕೆ ದೈವೀಕತೆಯ ಮಾಂತ್ರಿಕ ಸ್ಪರ್ಶ ಸಿಕ್ಕ ಆ ಹಾಡು ಇಂದಿಗೂ ಹಲವರ ಫೆವರೇಟ್ ಎನಿಸಿಕೊಂಡಿದೆ. ಇದೀಗ ʼಕಾಂತಾರ: ಚಾಪ್ಟರ್ 1 ' ಚಿತ್ರದ ʼಬ್ರಹ್ಮಕಲಶʼ ಹಾಡು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ. ಸಂಪೂರ್ಣ ಶರಣಾಗಿ ಶಿವನ ಬಳಿಗೆ ಬಂದು ನೀನೇ ಕಾಪಾಡು ಎಂದು ಹೇಳುವ ಭಕ್ತನ ಮನದಾಳ ಈ ಹಾಡಿನಲ್ಲಿದ್ದು, ಅಭಿ ಭಕ್ತಿ ಪರವಶರಾಗಿ ಧ್ವನಿ ನೀಡಿದ್ದಾರೆ. ತುಳು ಮತ್ತು ಕನ್ನಡ ಮಿಶ್ರಿತವಾಗಿರುವ ಈ ಹಾಡಿಗೆ ಶಶಿರಾಜ್ ಕಾವೂರ್ ಅವರ ಸಾಹಿತ್ಯವಿದೆ. ಅಭಿ ವಿ. ಅವರ ಅದ್ಭುತ ಧ್ವನಿ ಹಾಡಿನ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸಿದೆ. ವಿಶೇಷ ಎಂದರೆ ಅಭಿ ವಿ. ಕನ್ನಡಿಗರಲ್ಲ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಈ ಯುವ ಗಾಯಕ ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

ʼಕಾಂತಾರ: ಚಾಪ್ಟರ್ 1' ಚಿತ್ರದ ಹಾಡು ಇಲ್ಲಿದೆ:
ಕೆನಡಾ ಸಿಂಗರ್
ಅಭಿ ವಿ. ಅವರ ನಿಜವಾದ ಹೆಸರು ಅಭಿಷೇಕ್ ವೆಂಕಟ್. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಕುಟುಂಬದಲ್ಲಿ ಜನಿಸಿದ ಅಬ್ಬಿ ಬಾಲ್ಯದಲ್ಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಅವರ ತಂದೆ ವೆಂಕಟ್ ಕೂಡ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಟೊರೆಂಟೊದಲ್ಲಿ ಹುಟ್ಟಿ ಬೆಳೆದ ಅಭಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಅಭಿ ಆಗಾಗ ತಮ್ಮ ಹಾಡಿನ ವಿಡಿಯೊ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರು ತಮ್ಮ ತಂದೆಯೊಂದಿಗೆ ಸೇರಿ ಹಾಡಿರುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ವಿವಿಧ ದೇಶಗಳಲ್ಲಿ ಅಭಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
73 ರಾಗಾಸ್ ವಿಥ್ ಅಭಿ ವಿ. (73 Ragas with Abby V)
2019ರಲ್ಲಿ ಭಾರತಕ್ಕೆ ಬಂದಿದ್ದ ಅಭಿ ಇಲ್ಲಿನ ಸಂಗೀತ, ರಾಗಗಳಿಗೆ ಮನಸೋತು ಕೆನಡಾಕ್ಕೆ ತೆರಳಿದ ಬಳಿಕ ಹೊಸದೊಂದು ಸಾಹಸಕ್ಕೆ ಕೈ ಹಾಕಿದರು. ಶಾಸ್ತ್ರೀಯ ಸಂಗೀತದ 73 ರಾಗಾಗಳನ್ನು 13 ನಿಮಿಷಗಳಲ್ಲಿ ಪರಿಚಯಿಸಿದರು. ಈ ವಿಡಿಯೊ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ.
ಕಳೆದ ವರ್ಷ ತೆರೆಕಂಡ ಕಮಲ್ ಹಾಸನ್ ನಟನೆಯ ʼಇಂಡಿಯನ್ 2' ಸಿನಿಮಾದ ʼನೀಲರೂಪಂʼ ಹಾಡಿಗೆ ಅಭಿ ಧ್ವನಿ ನೀಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನದ ಈ ಹಾಡು ಹಿಟ್ ಲಿಸ್ಟ್ ಸೇರಿದೆ. ಇದೀಗ ಅವರು ʼಕಾಂತಾರ: ಚಾಪ್ಟರ್ 1ʼ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇಂತಹದ್ದೊಂದು ಅವಕಾಶ ನೀಡಿದ್ದಕ್ಕೆ ಅವರು ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಹಾಡನ್ನು ʼವರಾಹ ರೂಪಂ 2ʼ ಎಂದೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಸದ್ಯ ಟ್ರೈಲರ್‌ನಂತೆ ಹಾಡು ಕೂಡ ಕುತೂಹಲ ಕೆರಳಿಸಿದೆ.