ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಇಟಲಿ ಪ್ರವಾಸದಲ್ಲಿ ಮೋದಿ ಅವರು ಮೆಲೋನಿಗೆ ಕೇವಲ ಮೆಲೊಡಿ ಮಾತ್ರ ಕೊಡಲಿಲ್ಲ. ಅಸ್ಸಾಂನಲ್ಲಿ ತಯಾರಾಗುವ ‘ಮುಗಾ’ ರೇಷ್ಮೆ ಶಾಲು ಮತ್ತು ಮಣಿಪುರದಲ್ಲಿ ತಯಾರಾಗುವ ‘ಶಿರುಯಿ ಲಿಲಿ’ ರೇಷ್ಮೆ ಶಾಲನ್ನು ಕೂಡ ಕೊಟ್ಟಿದ್ದರು. ಆದರೆ ಅದರ ಬಗ್ಗೆ ಎಲ್ಲಿಯೂ ಹೆಚ್ಚು ಸುದ್ದಿ ಆಗಲಿಲ್ಲ. ಸುದ್ದಿ ಆದದ್ದು ಐವತ್ತು ರೂಪಾಯಿಯ ಮೆಲೊಡಿ ಚಾಕ್ಲೇಟ್ ಮಾತ್ರ.

ವಿದೇಶವಾಸಿ

ಅಲ್ಲಾ, ಐವತ್ತು ರೂಪಾಯಿಯ ಚಾಕ್ಲೆಟ್ ಪ್ಯಾಕೆಟ್ ಇಷ್ಟು ಸುದ್ದಿ ಮಾಡಬೇಕೆ? ಇದು ಪ್ರಶ್ನೆ ಕೇಳುವ ಸಮಯವಲ್ಲ. ಏಕೆಂದರೆ ಇದಕ್ಕೆ ಈಗಾಗಲೇ ಉತ್ತರ ಬಂದಾಗಿದೆ. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರವಾಸದಲ್ಲಿದ್ದಾಗ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯವರಿಗೆ ಭಾರತದ ಪಾರ್ಲೆ ಕಂಪನಿ ತಯಾರಿಸುವ ‘ಮೆಲೊಡಿ’ ಚಾಕಲೇಟ್‌ನ ಚಿಕ್ಕದೊಂದು ಪ್ಯಾಕೆಟ್ ಉಡುಗೊರೆಯನ್ನಾಗಿ ಕೊಟ್ಟರು.

ಅವರು ಚಾಕ್ಲೇಟ್ ಪ್ಯಾಕೆಟ್ ಒಂದನ್ನೇ ಉಡುಗೊರೆಯಾಗಿ ಕೊಟ್ಟಿರಲಿಲ್ಲ, ಇನ್ನೂ ಕೆಲವು ವಸ್ತು ಉಡುಗೊರೆ ನೀಡಿದ್ದರು. ಇಪ್ಪತ್ತು ಕೋಟಿ ಜನರ ಕಣ್ಣಿಗೆ ಅದ್ಯಾವುದೂ ಕಾಣಲಿಲ್ಲ, ಮೆಲೊಡಿ ಮಾತ್ರ ಕಂಡಿತು. ಏಕೆಂದರೆ ಇಬ್ಬರೂ ಪ್ರಧಾನಿಗಳು ಅದನ್ನು ತಮ್ಮ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ‌

ಮೆಲೊನಿಯವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನ್ನು ನಿನ್ನೆಯವರೆಗೆ 20 ಕೋಟಿ ಜನ ವೀಕ್ಷಿಸಿದ್ದಾರೆ, ಎಕ್ಸ್‌ʼನಲ್ಲಿ ಒಂದು ಕೋಟಿ ಜನ ನೋಡಿದ್ದಾರೆ. ಈಗಂತೂ ಇನ್ಸ್ಟಾಗ್ರಾಮ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಪಡೆದ ಪೋಸ್ಟ್ ಎಂಬ ಪ್ರಚಾರವೂ ಇದಕ್ಕಿದೆ.‌

ಕೋಟಿಗಟ್ಟಲೆ ಜನ ಇದನ್ನು ನೋಡಿದ್ದೇ ತಡ, ಎಂದೂ ತಿನ್ನದವರೂ ಮೆಲೊಡಿ ಚಾಕಲೇಟ್ ಕೊಂಡು ತಿನ್ನಲು ಮುಂದಾದರು. ಅದರಿಂದಾಗಿ ಕೆಲವು ಅಂಗಡಿಗಳಲ್ಲಿ ಉಳಿದಿದ್ದ ಮೆಲೊಡಿ ಖಾಲಿಯಾದವು. ಬ್ಲಿಂಕ್‌ಇಟ್, ಜೆಪ್ಟೊನಂತಹ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮೆಲೊಡಿ ಚಾಕಲೇಟ್ ‘ಸದ್ಯ ಲಭ್ಯವಿಲ್ಲ’ ಎಂಬ ಉತ್ತರ ಬರಲಾರಂಬಿಸಿ ದವು.

ಇದನ್ನೂ ಓದಿ: Kiran Upadhyay Column: ಭಾರತದಲ್ಲಿ ಸೂಟ್‌ʼಕೇಸ್‌ ಸಮರದ ಕತೆ...

ನಾವು ಚಿಕ್ಕವರಿದ್ದಾಗ ಪಾರ್ಲೆ ಚಾಕಲೇಟ್‌ಗಳಲ್ಲಿ ಕೆಂಪು ಬಣ್ಣದ ರ‍್ಯಾಪರ್ ಹೊಂದಿದ ಕಿಸ್ಮಿ ಮತ್ತು ಕಪ್ಪು ಬಣ್ಣದ ರ‍್ಯಾಪರ್ʼಲ್ಲಿ ಬರುತ್ತಿದ್ದ ಮೆಲೋಡಿ ತುಂಬಾ ಇಷ್ಟವಾಗಿತ್ತು. ಅವೆರಡೂ ಇಂದಿಗೂ ನನಗೆ ಇಷ್ಟವೇ. ಭಾರತಕ್ಕೆ ಬಂದಾಗೆಲ್ಲ ಒಂದಲ್ಲ ಒಂದು ಚಾಕಲೇಟ್ ನನ್ನ ಕಾರಿನಲ್ಲಿ ಇದ್ದೇ ಇರುತ್ತದೆ.

ಇರಲಿ, ಇಟಲಿ ಪ್ರವಾಸದಲ್ಲಿ ಮೋದಿ ಅವರು ಮೆಲೋನಿಗೆ ಕೇವಲ ಮೆಲೊಡಿ ಮಾತ್ರ ಕೊಡಲಿಲ್ಲ. ಅಸ್ಸಾಂನಲ್ಲಿ ತಯಾರಾಗುವ ‘ಮುಗಾ’ ರೇಷ್ಮೆ ಶಾಲು ಮತ್ತು ಮಣಿಪುರದಲ್ಲಿ ತಯಾರಾಗುವ ‘ಶಿರುಯಿ ಲಿಲಿ’ ರೇಷ್ಮೆ ಶಾಲನ್ನು ಕೂಡ ಕೊಟ್ಟಿದ್ದರು. ಆದರೆ ಅದರ ಬಗ್ಗೆ ಎಲ್ಲಿಯೂ ಹೆಚ್ಚು ಸುದ್ದಿ ಆಗಲಿಲ್ಲ. ಸುದ್ದಿ ಆದದ್ದು ಐವತ್ತು ರೂಪಾಯಿಯ ಮೆಲೊಡಿ ಚಾಕ್ಲೇಟ್ ಮಾತ್ರ.

ಒಂದು ಚಾಕಲೇಟ್ ಪ್ಯಾಕೆಟ್ ಇಷ್ಟೊಂದು ಒಳ್ಳೆಯ ಮತ್ತು ಕೆಟ್ಟ ಮೀಮ್ಸ್, ರೀಲ್ಸ್‌ಗಳಿಗೆ ಆಹಾರವಾ ಗುತ್ತದೆಂದು ಯಾರೂ ಎಣಿಸಿರಲಿಕ್ಕಿಲ್ಲ. ಭಾರತದ ವಿಪಕ್ಷ‌ ನಾಯಕರು ಚಾಕ್ಲೆಟ್ ಕೊಟ್ಟಿದ್ದಕ್ಕಾಗಿ ಪ್ರಧಾನಿಯನ್ನು ‘ದ್ರೋಹಿ’ ಎಂದರು. ಪಾಪ ಅವರಿಗೆ ಇನ್ನೂ ರಾಷ್ಟ್ರಪತಿ ಮತ್ತು ಪ್ರಧಾನಿಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ.

ಕರ್ನಾಟಕದ ಕೆಲಸಕ್ಕೆ ಬಾರದ, ಚುನಾವಣೆ ಗೆಲ್ಲಲಾಗದ ನಾಯಕರೊಬ್ಬರು ‘ಎಪ್ಪತ್ತೈದು ವರ್ಷದ ಮುದಿಯ ಸಣ್ಣ ವಯಸ್ಸಿನ ಪ್ರಧಾನಿಯೊಂದಿಗೆ ಚಾಕಲೇಟ್ ಹಂಚಿಕೊಳ್ಳುವು ದನ್ನು ನೋಡಿದರೆ ಯಾವ ಅರ್ಥ ಬರುತ್ತದೆ ಎಂದು ಆಲೋಚನೆ ಮಾಡಿ’ ಎಂದು ಹೇಳಿದರು. ಅವರ ಮಾತನ್ನು ಕೇಳಿದ ನಂತರ, ಜವಾಹರಲಾಲ್ ನೆಹರು ಮಕ್ಕಳಿಗೆ ಚಾಕ್ಲೇಟ್ ಮತ್ತು ಗುಲಾಬಿ ಹೂವು ನೀಡುತ್ತಿದ್ದುದರ ಹಿಂದೆಯೂ ಬೇರೆ ವಿಚಾರಗಳು ಇದ್ದಿರಬಹುದೇ ಎನ್ನುವ ವಿಚಾರ ಈಗ ಬರುತ್ತಿದೆ.

ಎಷ್ಟೇ ವಯಸ್ಸಾದರೂ ಕತ್ತೆ ಕತ್ತೆಯೇ, ಎಂದಿಗೂ ಕುದುರೆಯಾಗಲು ಸಾಧ್ಯವಿಲ್ಲ ಎಂಬ ಮಾತಿಗೆ ಇವರು ಉದಾಹರಣೆಯಾದರೇ ವಿನಃ ಮತ್ತೇನಲ್ಲ. ಏಕೆಂದರೆ ಇವರಿಗೆಲ್ಲ ಇದರ ಪೂರ್ವಾಪರವೇ ಗೊತ್ತಿದ್ದಂತಿಲ್ಲ. ಈ ‘ಮೆಲೊಡಿ’ ಎಂಬ ಪದ ಹುಟ್ಟಿಕೊಂಡದ್ದು ಕೂಡ ನಿನ್ನೆ ಮೊನ್ನೆಯಲ್ಲ.

melody

2023ರ ಡಿಸೆಂಬರ್‌ನಲ್ಲಿ ಜಾರ್ಜಿಯಾ ಮೆಲೋನಿಯವರು ದುಬೈನಲ್ಲಿ ನಡೆದ ಸಿಒಪಿ 28 ಸಮ್ಮೇಳನದ ಸಂದರ್ಭದಲ್ಲಿ ಮೋದಿಯವರೊಂದಿಗೆ ತೆಗೆದುಕೊಂಡ ಒಂದು ಸೆಲ್ಫಿ ಚಿತ್ರವನ್ನು ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ Good friends at COP 28 # Melodi ಎಂದು‌ ಹಂಚಿಕೊಂಡಿದ್ದರು.

ಮೆಲೋನಿಯಿಂದ ಆಯ್ದುಕೊಂಡ Mel ಮತ್ತು ಮೋದಿಯಿಂದ ಆಯ್ದುಕೊಂಡ odi ಎರಡನ್ನೂ ಸೇರಿಸಿ ಸೃಜಿಸಿದ ಶಬ್ದ Melodi. ಎಷ್ಟೋ ಬಾರಿ ನಾವು ಮನೆಯವರ, ಮಕ್ಕಳ ಹೆಸರಿನಲ್ಲಿರುವ ಪದಗಳನ್ನು ಆಯ್ದು ಒಂದು ಪದವನ್ನು ರೂಪಿಸಿ, ಅದನ್ನು ಮನೆಗೆ, ಸಂಸ್ಥೆಗೆ ಇಟ್ಟುಕೊಂಡಿದ್ದನ್ನು ನೋಡುತ್ತೇವೆ. ಅದರಲ್ಲಿ ತಪ್ಪೇನೂ ಇಲ್ಲ. ಹಾಗೆಯೇ ಮೆಲೋನಿ ಕೂಡ ಒಂದು ಪದವನ್ನು ಸೃಷ್ಟಿಸಿದರು.

2024ರ ಜಿ7 ಶೃಂಗದಲ್ಲಿ ಭೇಟಿ ಆದಾಗಲೂ ಅದೇ ಹ್ಯಾಶ್‌ಟ್ಯಾಗ್‌ನೊಂದಿಗೆ ಚಿತ್ರ ಅನಿಸಿಕೆ ಗಳನ್ನು ಹಂಚಿಕೊಂಡರು. ಪ್ರತಿ ಬಾರಿಯೂ ಅವರು ಮೋದಿಯವರನ್ನು ಭೇಟಿಯಾದಾಗ ಮೆಲೊಡಿ ಹ್ಯಾಶ್ ಟ್ಯಾಗ್‌ನಲ್ಲಿಯೇ ಅನಿಸಿಕೆ ಹಂಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೆಲವರು ಇದನ್ನು ಟ್ರೋಲ್ ಮಾಡುವ ಹಂತಕ್ಕೆ ತಲುಪಿದರು. ಟ್ರೋಲ್ ಮಾಡುವ ಮುನ್ನ ಹಿಂದೆ ಮುಂದೆ ವಿಚಾರ ಮಾಡುವ ವ್ಯವಧಾನವನ್ನೂ ತೋರಿಸಲಿಲ್ಲ. ಇಲ್ಲಿ ಪ್ರಮುಖ ವಾಗಿರುವುದು ಇಬ್ಬರು ವ್ಯಕ್ತಿಗಳು ಮತ್ತು ಒಂದು ವಸ್ತು. ಮೆಲೋನಿ, ಮೋದಿ ಮತ್ತು ಮೆಲೊಡಿ ಚಾಕಲೆಟ್. ಈ ಮೂರರಲ್ಲಿ ಯಾರೂ‌ ಸುಖದ ಸುಪ್ಪತ್ತಿಗೆಯಿಂದ ಎದ್ದು ಬಂದವರಲ್ಲ.

ಜಾರ್ಜಿಯಾ ಮೆಲೋನಿ ಜೀವನ ಒಂದು ಸ್ಪೂರ್ತಿದಾಯಕ ಕಥೆ. ಇಂದು ಇಟಲಿ ಪ್ರಧಾನಿ ಯಾಗಿರುವ ಜಾರ್ಜಿಯಾ, ರಾಜಕೀಯ ಪರಿವಾರದಿಂದ ಬಂದವರಲ್ಲ. ಅವರು ಹುಟ್ಟುವು ದಕ್ಕಿಂತ ಮೊದಲೇ ಅವರ ತಾಯಿ ಈ ಮಗುವನ್ನು ಹಡೆಯಬಾರದೆಂದು ಆಸ್ಪತ್ರೆಗೆ ಹೋಗಿ ದ್ದರು. ಆಸ್ಪತ್ರೆಯಲ್ಲಾದ ಮನಃ ಪರಿವರ್ತನೆಯಿಂದಾಗಿ ಜಾರ್ಜಿಯಾರನ್ನು ಹಡೆದರು. ಜಾರ್ಜಿಯಾ ಹುಟ್ಟಿ ಒಂದು ವರ್ಷದೊಳಗೆ ಅವರ ತಂದೆ ತಾಯಿಯ ವಿಚ್ಛೇದನ ವಾಯಿತು. ಒಳ್ಳೆಯ ಬದುಕು, ಒಳ್ಳೆಯ ಓದು ಯಾವುದೂ ಅವರ ಅದೃಷ್ಟದಲ್ಲಿರಲಿಲ್ಲ.

ಹೊಟ್ಟೆಪಾಡಿಗಾಗಿ ಜಾರ್ಜಿಯಾ ಇಟಲಿಯ ಬೀದಿಯಲ್ಲಿ ಸಿಡಿಗಳನ್ನು ಮಾರಿದರು. ಮದುವೆ ಮನೆಯಲ್ಲಿ ಸಣ್ಣ-ಪುಟ್ಟ ವಸ್ತುಗಳನ್ನು ಮಾರಿದರು. ನಡುರಾತ್ರಿಯವರೆಗೆ ಬಾರ್‌ಗಳಲ್ಲಿ ಕೆಲಸ ಮಾಡಿದರು, ಮಕ್ಕಳನ್ನು ನೋಡಿಕೊಳ್ಳುವ ದಾದಿಯಾಗಿ ದುಡಿದರು. ಹದಿನೈದು ವರ್ಷದವರಿದ್ದಾಗಲೇ ರಾಜಕೀಯ ಪ್ರವೇಶಿಸಿದರು.

ಸಾಕಷ್ಟು ಟೀಕೆಯನ್ನೂ ಎದುರಿಸಿದರು. ಆದರೆ ಧೃತಿಗೆಡದೆ ಮುಂದೆ ಅಡಿ ಇಟ್ಟರು. ಚುನಾ ವಣೆಯಲ್ಲಿ ಆರಿಸಿ ಬಂದರು. ಇಟಲಿಯ ಸಣ್ಣ ವಯಸ್ಸಿನ ಮಂತ್ರಿಯಾದರು, ಇಟಲಿಯ ಪ್ರಥಮ ಮಹಿಳಾ ಪ್ರಧಾನಿಯೂ ಆದರು. ಪುರುಷಪ್ರಧಾನ ರಾಜಕಾರಣದಲ್ಲಿ ಒಬ್ಬ ಮಹಿಳೆ ತನ್ನ ಇಚ್ಛಾಶಕ್ತಿಯಿಂದ ಹೇಗೆ ಒಂದು ದೇಶದ ಪ್ರಧಾನಿ ಪಟ್ಟಕ್ಕೆ ಏರಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಜಾರ್ಜಿಯಾ ಮೆಲೋನಿ.

ಇಂದಿಗೂ ಅವರು ತಮ್ಮ ಕಾರ್ಯ ಶೈಲಿಯಿಂದಾಗಿ, ನೇರ ನುಡಿಯಿಂದಾಗಿ ‘ಇಟಲಿಯ ಉಕ್ಕಿನ ಮಹಿಳೆ’ ಎಂಬ ಬಿರುದು ಪಡೆದು, ಜನರ ಮನಸ್ಸಿನಲ್ಲಿ ಸ್ಥಾಯಿಯಾದರು. ಅಂಥವರ ಬಗ್ಗೆ, ಪೂರ್ವಾಪರ ತಿಳಿಯದೆ, ಚುನಾವಣೆ ಗೆಲ್ಲಲಾಗದ, ವಯಸ್ಸಿನಲ್ಲಿ ಅವರಿಗಿಂತ ಹಿರಿಯರಾದ ರಾಜಕೀಯ ಮುಖಂಡರು ಮುತ್ಸದ್ದಿಗಳು ಎಂದು ತಮಗೆ ತಾವೇ ಬಿರುದು ಕೊಟ್ಟುಕೊಂಡವರು, ತುಚ್ಛವಾಗಿ ಮಾತನಾಡುವುದನ್ನು ಕೇಳಿದರೆ ಅಯ್ಯೋ ಅನಿಸುತ್ತದೆ.

ಇನ್ನು ಮೆಲೊಡಿ ವಿಷಯ. ಮೆಲೊಡಿ ಚಾಕ್ಲೇಟ್ ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ನಲವತ್ತಮೂರು ವರ್ಷವೇ ಬೇಕಾ ಯಿತು ಅನ್ನಿ. ಮೆಲೊಡಿ ಮತ್ತು ಅದನ್ನು ಉತ್ಪಾದಿಸುವ ಪಾರ್ಲೆಯ ಇತಿಹಾಸ ನೋಡುವುದಾದರೆ, ಪಾರ್ಲೆ ಇತಿಹಾಸ ಆರಂಭವಾದದ್ದು ಸುಮಾರು ನೂರು ವರ್ಷದ ಹಿಂದೆ. ಮೂಲತಃ ಗುಜರಾತಿನ ವಲ್ಸಾಡ್‌ನ ಮೋಹನ್ ಲಾಲ್ ದಯಾಳ್ ಚೌಹಾಣ್ ಸ್ವದೇಶಿ ಚಳುವಳಿಯಿಂದ ಸ್ಪೂರ್ತಿ ಪಡೆದು, ಮುಂಬೈನ ವಿಲೇಪಾರ್ಲೆಯಲ್ಲಿ ಪಾರ್ಲೆ ಸಂಸ್ಥೆಯನ್ನು ಸ್ಥಾಪಿಸಿದರು.

1929ರಲ್ಲಿ ಮುಂಬೈಗೆ ಬಂದ ಮೋಹನ್ ಲಾಲ್, ಮೊದಲು ದರ್ಜಿ ಕೆಲಸ ಮಾಡುತ್ತಿದ್ದರು. ಅದರಿಂದ ಲಾಭವಾಗದಿದ್ದಾಗ, ಆಹಾರದ ವ್ಯಾಪಾರಕ್ಕೆ ಕಾಲಿಟ್ಟರು. ಬ್ರೆಡ್, ಬನ್, ಟೋಸ್ಟ್ ಮತ್ತು ಬಿಸ್ಕೆಟ್ ತಯಾರಿಸುವ ಬೇಕರಿ ಆರಂಭಿಸಿದರು. ಅವರಿಗೆ ಐದು ಜನ ಗಂಡು ಮಕ್ಕಳು. ಎಲ್ಲರೂ ತಂದೆಯ ಅಂಗಡಿಯಲ್ಲಿ ಕೆಲಸ‌ ಮಾಡುತ್ತಿದ್ದರು.

1939ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಬಿಸ್ಕತ್ತು ಪೂರೈಸುವ ‘ಪಾರ್ಲೆ’ ಆರಂಭವಾಯಿತು. 1942ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ‘ಬ್ರಿಟಿಷ್ ಗ್ಲುಕೋಸ್ ಬಿಸ್ಕತ್ತುಗಳಿಗೆ ಪರ್ಯಾಯವಾಗಿ ಭಾರತೀಯ ಬಿಸ್ಕತ್ತುಗಳು’ ಎಂಬ ಜಾಹೀರಾತಿನೊಂದಿಗೆ ಪ್ರಚಾರ ಆರಂಭಿಸಿತು. ಕೆಲವು ವರ್ಷಗಳ ನಂತರ ಪಾರ್ಲೆ ಸಂಸ್ಥೆಯಲ್ಲಿ ಒಡಕುಂಟಾಯಿತು.

ಮೋಹನ್ ಲಾಲ್ ಅವರ ಕೊನೆಯ ಮಗ ಮೊದಲ ನಾಲ್ಕು ಮಕ್ಕಳಿಂದ ದೂರವಾದರು. ಮೊದಲ ನಾಲ್ಕು ಜನ ಪಾರ್ಲೆ-ಜಿ, ಮಿಲ್ಕ್ ಶಕ್ತಿ, ಕ್ರಾಕ್ ಜಾಕ್, ಮೊನಾಕೋ‌ ಇತ್ಯಾದಿ ಬಿಸ್ಕತ್ತುಗಳು, ಮ್ಯಾಂಗೋ ಬೈಟ್, ಪಾಪಿ, ‌ಮೆಲೊಡಿ, ಕಿಸ್ಮಿ, ಇತ್ಯಾದಿ ಟಾಫಿ, ಚಾಕಲೇಟ್ ತಯಾರಿಸುವ ಪಾರ್ಲೆ ಪ್ರಾಡಕ್ಟ್ ಸಂಸ್ಥೆಯನ್ನು ನೋಡಿಕೊಂಡರೆ, ಕೊನೆಯ ಮಗ, ಫ್ರೂಟಿ, ಹ್ಯಾಪಿ,‌ ಮುಂತಾದ ಪಾನೀಯಗಳನ್ನು ತಯಾರಿಸುವ ಪಾರ್ಲೆ ಆಗ್ರೋ ಮತ್ತು ಕುಡಿಯುವ ನೀರನ್ನು ತಯಾರಿಸುವ ಪಾರ್ಲೆ ಬಿಸ್ಲೇರಿ ಸಂಸ್ಥೆಯ ಒಡೆಯರಾದರು. ಆದರೆ ಪಾರ್ಲೆ ಸಂಸ್ಥೆ ಮೆಲೊಡಿ ಚಾಕ್ಲೆಟ್ ಆರಂಭಿಸಿದ್ದು 1983ರಲ್ಲಿ. ಆಗ ಅದನ್ನು ಯಾರೂ ಕೊಂಡು ಕೊಳ್ಳುತ್ತಿರಲಿಲ್ಲ.

ಅದೇ ಸಮಯಕ್ಕೆ ಕ್ಯಾಡ್ಬರಿಯವರ ಎಕ್ಲೇರ್ಸ್ ಕೂಡ ಮಾರುಕಟ್ಟೆಗೆ ಬಂದಿತ್ತು. ಕಾಲ ಹೇಗಿತ್ತು ಎಂದರೆ, ಅಂಗಡಿಯವರು ಪಾರ್ಲೆ ಬಿಸ್ಕತ್ತು ಬೇಕು ಎಂದರೆ ಕಂಪನಿಯವರು ಮೆಲೊಡಿ ತೆಗೆದುಕೊಂಡರೆ ಮಾತ್ರ ಬಿಸ್ಕತ್ತು ನೀಡುತ್ತೇವೆ ಎಂಬಂತಿತ್ತು. ಆಗ ಹುಟ್ಟಿ ಕೊಂಡದ್ದು ಪ್ರಚಂಡ ಜಾಹೀರಾತು.

‘ಮೆಲೊಡಿ ಇತ್ನಿ ಚಾಕ ಲೇಟಿ ಕೈಸೆ ಬನಿ ಹೈ?’, ‘ಮೆಲೊಡಿ ಇತ್ನಿ ಚಾಕಲೇಟಿ ಕ್ಯೂ ಹೈ?’ (ಮೆಲೊಡಿ ಯಾಕೆ ಇಷ್ಟು ಚಾಕಲೇಟಿ?) ಅದಕ್ಕೆ, ‘ಮೆಲೊಡಿ ಖಾವೋ ಖುದ್ ಜಾನ್ ಜಾವೋ’ (ಮೆಲೊಡಿ ತಿನ್ನಿ ಸ್ವತಃ ತಿಳಿದುಕೊಳ್ಳಿ) ಎಂಬ ಉತ್ತರ. ಕೊನೆಯಲ್ಲಿ ‘ಮೆಲೊಡಿ ಹೈ ಚಾಕಲೇಟಿ’ ಎಂಬ ಟ್ಯಾಗ್ ಲೈನ್. ಈ ಜಾಹೀರಾತು ಸಾಕಷ್ಟು ಜನಪ್ರಿಯವಾಯಿತು.

ಇನ್ನು ಪ್ರಧಾನಿ ಮೋದಿಯವರ ಶ್ರಮ ಕುರಿತು ಎಲ್ಲರಿಗೂ ತಿಳಿದಿರುವುದರಿಂದ ಹೇಳಬೇಕಾದ ಅವಶ್ಯಕತೆ ಇಲ್ಲ. ಗಮನಿಸಬೇಕಾದದ್ದು, 26 ವರ್ಷದ ನಂತರ ಭಾರತದ ಪ್ರಧಾನಿ ದ್ವಿಪಕ್ಷೀಯ ಮಾತುಕತೆಗಾಗಿ ಮೊನ್ನೆ ಇಟಲಿಗೆ ಹೋಗಿದ್ದರು. ಆ ಸಂದರ್ಭದಲ್ಲಿ, ಎರಡು ದೇಶಗಳ ಸಂಬಂಧಕ್ಕೆ ‘ವಿಶೇಷ ಕಾರ್ಯತಂತ್ರದ ಪಾಲುದಾರರು’ ಎಂಬ ದರ್ಜೆ ನೀಡಲಾಯಿತು.

ಇದರಿಂದ 2025ರಿಂದ 2029ರವರೆಗೆ ಎರಡು ದೇಶದ ನಡುವೆ ಸಂಬಂಧದ ಭದ್ರಸೇತು ನಿರ್ಮಾಣವಾಗುತ್ತದೆ. ಯುರೋಪಿಯನ್ ಯೂನಿಯನ್‌ನಲ್ಲಿ ಇಟಲಿ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಭಾರತದಿಂದ ಆರಂಭವಾಗುವ ಐಎಂಇಸಿ (ಇಂಡಿಯಾ ಮಿಡಲ್ ಈ ಯೂರೋಪಿಯನ್ ಕಾರಿಡಾರ್) ಯುಎಇ, ಸೌದಿ ಅರೇಬಿಯಾ, ಜಾರ್ಡನ್, ಗ್ರೀಸ್ ಇತ್ಯಾದಿ ದೇಶಗಳನ್ನು ಹಾದು ಇಟಲಿಗೆ ಹೋಗಿ ನಿಲ್ಲುತ್ತದೆ. ಮೊನ್ನೆ ಈ ಕಾರಿಡಾರ್ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಪ್ರಮುಖ ಮಾತುಕತೆಗಳಾಗಿವೆ.

ರಷ್ಯಾ-ಯುಕ್ರೇನ್ ಯುದ್ಧ, ಇರಾನ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಈ ಸಂದರ್ಭದಲ್ಲಿ ಕೆಲವು ಉದ್ಯಮಗಳಿಗೆ ಬೇಕಾದ ಕಚ್ಚಾ ವಸ್ತುಗಳು, ಚರ್ಮ, ಫ್ಯಾಶನ್‌ಗೆ ಬಳಸುವ ವಸ್ತುಗಳು ಇತ್ಯಾದಿಗಳ ಮಹಿವಾಟಿನ ಬಗ್ಗೆ ಚರ್ಚೆಯಾಗಿದೆ.

ಯುದ್ಧೋಪಕರಣಗಳನ್ನು ಖರೀದಿಸುತ್ತಿದ್ದ ಭಾರತ ಇನ್ನು ಮುಂದೆ ಕೇವಲ ಖರೀದುದಾರ ಆಗಿರದೆ, ಯುದ್ಧಕ್ಕೆ ಬೇಕಾಗುವ ಹೆಲಿಕಾಪ್ಟರ್‌ಗಳು, ಜಲ ಸೇನೆಯ ಉಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟಲಿಯೊಂದಿಗೆ ಸೇರಿ ಭಾರತದಲ್ಲಿಯೇ ವಿನ್ಯಾಸಗೊಳಿಸುವ ಮತ್ತು ಉತ್ಪಾದನೆ ಮಾಡುವ ಮಾತುಕತೆ ನಡೆದಿದೆ.

ಭಾರತ ಮತ್ತು ಇಟಲಿಯ ಸ್ಟಾರ್ಟ್ ಅಪ್ ಕಂಪನಿಗಳನ್ನು ಒಂದುಗೂಡಿಸುವ, ಎರಡು ದೇಶಗಳ ನಡುವಿನ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಟ್ಟಿಗೆ ಸೇರಿಸುವ, ‘ಇಂಡಿಯಾ ಇಟಲಿ ಇನ್ನೋವೇಟಿವ್ ಸೆಂಟರ್’ ನಿರ್ಮಿಸುವ ಕುರಿತು ಚರ್ಚೆಯಾಗಿದೆ. ಭಾರತದ ಸಂಶೋಧನಕಾರರಿಗೆ ಇಟಲಿಯ ಪ್ರಯೋಗಾಲಯದಲ್ಲಿ ನೇರ ಪ್ರವೇಶ ದೊರೆಯಲಿದೆ.

ಭಾರತದಲ್ಲಿ ಹೇರಳವಾಗಿ ದೊರೆಯುವ ಎಲೆಕ್ಟ್ರಾನಿಕ್ ಕಸದಿಂದ ಲಿಥಿಯಂ ಮತ್ತು ಕೋಬಾಲ್ಟ್ ನಂತಹ ಖನಿಜಗಳನ್ನು ಹೊರತೆಗೆ ಯುವ ಕುರಿತು ‌ವಿಚಾರ ವಿನಿಮಯ ನಡೆದಿದೆ. ಇಟಲಿಯಲ್ಲಿ ಹಿರಿಯ ನಾಗರಿಕರ ಸೇವೆ ಮಾಡಲು ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಅಥವಾ ದಾದಿಯರ ಕೊರತೆಯಿದೆ.

ಆ ಕೊರತೆಯನ್ನು ನೀಗಿಸಲು ಭಾರತದ ದಾದಿಯರನ್ನು ಇಟಲಿಗೆ ಕಳಿಸಿ ಕೊಡುವ ಒಪ್ಪಂದ ವಾಗಿದೆ. ಹೀಗೆ ಎರಡೂ ದೇಶಗಳ ನಡುವೆ 15 ಒಪ್ಪಂದಗಳಾಗಿದ್ದು, 2020ರ ವೇಳೆಗೆ 20 ಬಿಲಿಯನ್ ಯುರೋ ವ್ಯಾಪಾರ ವಹಿವಾಟು ಆಗಬಹುದು ಎಂದು ಅಂದಾಜಿಸ ಲಾಗಿದೆ.

ಆದರೆ ಮೆಲೊಡಿ ನೋಡುತ್ತ ಕುಂತವರ ಕಣ್ಣಿಗೆ ಇದ್ಯಾವುದೂ ಕಾಣಿಸಲೇ ಇಲ್ಲ ಎನ್ನುವುದು ಖೇದಕರ. ಕೊನೆಯದಾಗಿ, ಮೋದಿ ಮೆಲೋನಿಗೆ ಮೆಲೊಡಿ ಚಾಕಲೇಟ್ ಕೊಟ್ಟಿದ್ದೇ ಇಷ್ಟು ಸುದ್ದಿಯಾಯಿತು. ಇನ್ನು ಕಿಸ್ಮಿ ಚಾಕಲೇಟ್ ಕೊಟ್ಟಿದ್ದರೆ ಹುಚ್ಚರು ಏನು ಹೇಳುತ್ತಿದ್ದರೋ ಏನೋ...?

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author