ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೊಮ್ಮೆ ಲಕ್ಕಿ ಚಾರ್ಮ್ ಎನಿಸಿಕೊಂಡಿದ್ದಾರೆ. ಕಳೆದ ವರ್ಷ 'ಪುಷ್ಪ 2' (Pushpa 2) ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಅವರು ಇದೀಗ ಬಾಲಿವುಡ್‌ನಲ್ಲೂ ತಮ್ಮ ಜೈತ್ರಯಾತ್ರೆಯನ್ನು ಮುಂದುವರಿಸಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಜತೆ ರಶ್ಮಿಕಾ ಮೊದಲ ಬಾರಿ ತೆರೆ ಹಂಚಿಕೊಂಡಿರುವ ಬಾಲಿವುಡ್‌ನ 'ಛಾವಾ' (Chhaava) ಚಿತ್ರ ಸದ್ಯ ಬಾಲಿವುಡ್‌ನಲ್ಲಿ ದೂಳೆಬ್ಬಿಸುತ್ತಿದೆ (Chhaava Box Office Collection). ಫೆ. 14ರಂದು ರಿಲೀಸ್ ಆಗಿರುವ ಈ ಐತಿಹಾಸಿಕ ಚಿತ್ರ 3 ದಿನಗಳಲ್ಲೇ 100 ಕೋಟಿ ರೂ. ಕ್ಲಬ್ ಸೇರಿದೆ. ಆ ಮೂಲಕ ಈ ವರ್ಷದ ಬಾಲಿವುಡ್‌ನ ಮೊದಲ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶದ ಈ ಚಿತ್ರ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನದ ಮೇಲೆ ಬೆಳಕು ಚೆಲ್ಲುತ್ತಿದ್ದು, ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆಯುತ್ತಿದೆ.
3 ದಿನಗಳ ಕಲೆಕ್ಷನ್ ಎಷ್ಟು?
ವರದಿಯೊಂದರ ಪ್ರಕಾರ ಮೊದಲ ಭಾನುವಾರ ಚಿತ್ರದ ಕಲೆಕ್ಷನ್ ಬರೋಬ್ಬರಿ 50 ಕೋಟಿ ರೂ. ರಿಲೀಸ್ ಆದ ಮೊದಲ ದಿನ 33 ಕೋಟಿ ರೂ. ಬಾಚಿಕೊಂಡಿದ್ದ 'ಛಾವಾ' ಚಿತ್ರದ ಕಲೆಕ್ಷನ್ 2ನೇ ದಿನ ಮತ್ತಷ್ಟು ಹೆಚ್ಚಾಗಿತ್ತು. ಶನಿವಾರ ಬೊಕ್ಕಸಕ್ಕೆ ಹರಿದು ಬಂದಿದ್ದು ಬರೋಬ್ಬರಿ 37 ಕೋಟಿ ರೂ. ಇನ್ನು 3ನೇ ದಿನವಾದ ಭಾನುವಾರ 49.63 ಕೋಟಿ ರೂ. ಗಳಿಸಿದೆ. ಈ ಮೂಲಕ 3 ದಿನಗಳಲ್ಲಿ 117.63 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ.
ಯಶಸ್ಸಿನ ಪಯನ ಮುಂದುವರಿಸಿದ ರಶ್ಮಿಕಾ
ಕಳೆದ ವರ್ಷ ತೆರೆಕಂಡ 'ಪುಷ್ಪ 2' ಚಿತ್ರ ಇದೀಗ ಜಾಗತಿಕವಾಗಿ 1,800 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ-ಸುಕುಮಾರ್ ಕಾಂಬಿನೇಷನ್‌ನ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಯಶಸ್ಸನ್ನು ಇದೀಗ ರಶ್ಮಿಕಾ ಮುಂದುವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Chhaava Collection: ಮತ್ತೊಂದು ದಾಖಲೆ ಬರೆದ ರಶ್ಮಿಕಾ; ವಿಕ್ಕಿ ಕೌಶಲ್ ಜತೆಗಿನ ʼಛಾವಾʼಕ್ಕೆ ಭರ್ಜರಿ ಓಪನಿಂಗ್
ಒಟಿಟಿಗೆ ಯಾವಾಗ?
ಇದೀಗ ʼಛಾವಾʼ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ದಾಖಲೆಯ ಮೊತ್ತಕ್ಕೆ ʼಛಾವಾʼದ ಡಿಜಿಟಲ್ ಹಕ್ಕು ಸೇಲಾಗಿದೆಯಂತೆ. ಸುಮಾರು 2 ತಿಂಗಳ ಬಳಿಕ ಇದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.
ಮರಾಠಿ ಲೇಖಕ ಶಿವಾಜಿ ಸಾವಂತ್ ಅವರ ʼಛಾವಾʼ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಸಂಭಾಜಿ ಮಹಾರಾಜ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಬ್ಬರಿಸಿದ್ದು, ಆಶುತೋಷ್ ರಾಣಾ, ಡಯಾನಾ ಪೆಂಟಿ, ದಿವ್ಯಾ ದತ್ತಾ, ವಿನೀತ್ ಕುಮಾರ್ ಸಿಂಗ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.