ಚೆನ್ನೈ, ಆ. 28: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್’ (Toxic Movie) ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದರೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಸಿನಿಮಾದಲ್ಲಿ ತೋರಿಸಲಾಗಿರುವ ಅತಿಯಾದ ಹಿಂಸೆ ಮತ್ತು ಮಹಿಳೆಯರ ಕುರಿತಾದ ಅಸಭ್ಯ ಚಿತ್ರಣಕ್ಕೆ ರಾಜಕಾರಣಿ ಕೆ. ಅಣ್ಣಾಮಲೈ (Annamalai) ಆಕ್ಷೇಪ ವ್ಯಕ್ತಪಡಿಸಿದ್ದು, ಸೆನ್ಸಾರ್ ಮಂಡಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿನಿಮಾಗಳಿಗೆ ವಯಸ್ಸಿನ ಆಧಾರದ ಮೇಲೆ ಪ್ರಮಾಣಪತ್ರ ನೀಡುವಲ್ಲಿ ಹಾಗೂ ಹಿಂಸೆಯನ್ನು ತಡೆಯುವಲ್ಲಿ ಸೆನ್ಸಾರ್ ಮಂಡಳಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂಸೆ ಮತ್ತು ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವ ಕಥಾವಸ್ತುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ʼʼಅಮೆರಿಕ ಅಥವಾ ಯುರೋಪ ದೇಶಗಳಲ್ಲಿ ಸೆನ್ಸಾರ್ ನಿಯಮಗಳು ಬಹಳ ಕಟ್ಟುನಿಟ್ಟಾಗಿವೆ. ಆದರೆ ಭಾರತದಲ್ಲಿ 14, 16 ಅಥವಾ 18 ವರ್ಷದ ವಯೋಮಿತಿಯ ಲೆಕ್ಕಾಚಾರವೇ ಇಲ್ಲದೆ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಎಷ್ಟೇ ಪ್ರಭಾವಿ ನಟರ ಸಿನಿಮಾಗಳಿದ್ದರು ಸೆನ್ಸಾರ್ ಮಂಡಳಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕುʼʼ ಎಂದು ಅವರು ಆಗ್ರಹಿಸಿದ್ದಾರೆ.
ʼಟಾಕ್ಸಿಕ್ʼ ಚಿತ್ರದ ವಿರುದ್ಧ ಅಣ್ಣಾಮಲೈ ಗರಂ:
‘ʼನಾವು ಒಂದೆಡೆ ಮಹಿಳಾ ಸಬಲೀಕರಣ ಮತ್ತು ಅತ್ಯಾಚಾರ ತಡೆ ಬಗ್ಗೆ ಮಾತನಾಡುತ್ತೇವೆ. ಮತ್ತೊಂದೆಡೆ ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಭೋಗದ ವಸ್ತುವನ್ನಾಗಿ ಮತ್ತು ವಲ್ಗರ್ ಆಗಿ ಪ್ರದರ್ಶಿಸುತ್ತೇವೆ. ‘ನನಗೆ ಪತ್ನಿಯೂ ಬೇಕು, ಅನೈತಿಕ ಸಂಬಂಧವೂ ಬೇಕು' ಎನ್ನುವ ರೀತಿಯ ಸಂದೇಶ ನೀಡುವ ಈ ರೀತಿಯ ಸಿನಿಮಾಗಳು ಸಮಾಜಕ್ಕೆ ಕಂಟಕʼ’ ಎಂದು ಅವರು ಖಂಡಿಸಿದ್ದಾರೆ. ‘ʼಎ ಪ್ರಮಾಣ ಪತ್ರ ಹೊಂದಿರುವ ಸಿನಿಮಾಗಳಿಗೆ ಅಪ್ರಾಪ್ತರನ್ನು ಚಿತ್ರಮಂದಿರಗಳ ಒಳಗೆ ಬಿಡಬಾರದು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲಕರು ಈ ನಿಯಮಗಳುನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಪರದೆಯ ಮೇಲಿನ ಅತಿಯಾದ ಹಿಂಸೆ ಮತ್ತು ಪುರುಷ ಪ್ರಧಾನ ಸಂಸ್ಕೃತಿಯು ಯುವ ಪೀಳಿಗೆಯನ್ನು ತಪ್ಪುದಾರಿಗೆ ಎಳೆಯುವ ಅಪಾಯವಿದೆʼ’ ಎಂದು ಅವರು ಎಚ್ಚರಿಸಿದ್ದಾರೆ.
ʼʼಸಿನಿಮಾಕ್ಕೆ ‘ಟಾಕ್ಸಿಕ್’ ಎನ್ನುವ ಶೀರ್ಷಿಕೆ ಇಟ್ಟು, ಮಹಿಳೆಯರನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ ಎಂಬುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಿನಿಮಾಗಳು ರಿಲೀಸ್ ಆದ ಮೊದಲ ದಿನವೇ ನೂರಾರು ಕೋಟಿ ರುಪಾಯಿ ಗಳಿಕೆ ಮಾಡುತ್ತಿವೆ. ಇಂತಹ ಸಿನಿಮಾಗಳನ್ನು ಪ್ರತಿದಿನ ನಮ್ಮ ಮಕ್ಕಳು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿದರೆ, ಮಹಿಳೆಯರನ್ನು ಕಾಣುವ ರೀತಿ ಹಾಗೂ ಮಹಿಳೆಯರ ಸುರಕ್ಷತೆ ಎಲ್ಲಿಗೆ ತಲುಪಬಹುದು?ʼ’ ಎಂದು ಅವರು ಪ್ರಶ್ನಿಸಿದ್ದಾರೆ.
ʼʼನಾವು ಪ್ರತಿಯೊಂದು ಊರು, ಶಾಲಾ-ಕಾಲೇಜುಗಳಿಗೆ ಹೋಗಿ ಮಹಿಳಾ ಸುರಕ್ಷತೆ ಹಾಗೂ ರಕ್ಷಣೆ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತೇವೆ. ಆದರೆ ಸಿನಿಮಾಗಳಲ್ಲಿ ಪ್ರದರ್ಶಿಸುತ್ತಿರುವ ಈ ರೀತಿಯ ವಿಷಯಗಳು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಸಮಾಜದಲ್ಲಿ ಮಹಿಳೆಯರ ಗೌರವ ಮತ್ತು ಸ್ಥಾನಕ್ಕೆ ದಕ್ಕೆಯನ್ನುಂಟು ಮಾಡುತ್ತವೆ’ʼ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಶ್ ಹೇಳಿದ್ದೇನು?
ಹೈದರಾಬಾದ್‌ನಲ್ಲಿ ನಡೆದ ʼಟಾಕ್ಸಿಕ್ʼ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಯಶ್, ಸಿನಿಮಾದಲ್ಲಿ ಮಹಿಳೆಯರ ಚಿತ್ರಣದ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದರು. ʼʼಮಹಿಳೆಯರು ಸಮಾಜದಲ್ಲಿ ಎಲ್ಲ ರೀತಿಯ ಸನ್ನಿವೇಶಗಳನ್ನು ಎದುರಿಸುತ್ತಾರೆ. ತಮ್ಮ ಯೋಚನೆ, ದೃಷ್ಟಿಕೋನವನ್ನು ವ್ಯಕ್ತಪಡಿಸಲು ಹಾಗೂ ಈ ಸಮಾಜದಲ್ಲಿ ಯಶಸ್ವಿಯಾಗಲು ಅವರು ಪ್ರಯತ್ನಿಸುತ್ತಾರೆ. ಈ ಸಿನಿಮಾದಲ್ಲಿ ಮಹಿಳೆಯರಿಗಾಗಿ ಒಂದು ಧ್ವನಿಯಿದೆ. ಸಿನಿಮಾವನ್ನು ನೋಡಿ ಆನಂದಿಸಿ. ನೀವೆಲ್ಲರೂ ಖಂಡಿತವಾಗಿಯೂ ಆನಂದಿಸುತ್ತಿರಿʼ’ ಎಂದು ಹೇಳಿದ್ದರು.
ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿವೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಭಾರತದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ನಯನತಾರಾ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿದ್ದಾರೆ.