ಶ್ರೀನಗರ, ನ. 21: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಮೋಸ್ಟ್ ವಾಂಟೆಡ್ ಉಗ್ರ, ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್ (Lateef Bhat) ಸೇರಿ ಇಬ್ಬರು ಭಯೋತ್ಪಾಕರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಮಾಡಿದ್ದರು. ಅದಾದ ಬಳಿಕ ಗಡಿಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಇದೀಗ ಭಾರತದ ಒಳ ನುಸುಳಿದ 20 ವರ್ಷದ ಪಾಕಿಸ್ತಾನ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ʼʼಜಮ್ಮುವಿನ ಆರ್.ಎಸ್. ಪುರ ಸೆಕ್ಟರ್ನ ಸಾಯಿ ಕಲನ್ನಲ್ಲಿರುವ ಅಂತಾರಾಷ್ಟ್ರೀಯ ಗಡಿಯ ಮೂಲಕ ನುಗ್ಗಿದ ಪಾಕ್ ಯುವಕನನ್ನು ಬಿಎಸ್ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಯುವಕ ಪಾಕಿಸ್ತಾನದ ಪಂಜಾಬ್ ಪ್ರದೇಶದ ಲಯಾಹ್ ನಿವಾಸಿ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಸಾಯಿ ಕಲನ್ ಮೋರ್ಹ್ನ ಹರಪೀರ್ ಸೇತುವೆ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದರು. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ವ್ಯಕ್ತಿಯ ಬಂಧನ:
ಬಂಧಿತನನ್ನು ಪಾಕಿಸ್ತಾನದ ಲಯಾಹ್ ಜಿಲ್ಲೆಯ ಜರನ್ವಾಲಾ ಬಸ್ತಿ ಗೋಕಲ್ ನಿವಾಸಿ ಇಮ್ದಾದ್ ಹುಸೇನ್ ಪುತ್ರ ಅವೈಸ್ ರಾಝ ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಆತ ನಿರಂತರವಾಗಿ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಒಮ್ಮೆ ತಾನು ದಾರಿ ತಪ್ಪಿದೆ ಎಂದು ಹೇಳಿದರೆ, ಮತ್ತೊಮ್ಮೆ ಅರಿಯದೆ ಗಡಿ ದಾಟಿದೆ ಎಂದು ಹೇಳುತ್ತಿದ್ದಾನೆ. ಅಲ್ಲದೆ ತಾನು ಬಂದ ದಾರಿ ಮತ್ತು ತನ್ನ ಉದ್ದೇಶದ ಬಗ್ಗೆ ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿದ್ದಾನೆ. ಹೀಗಾಗಿ ಆತನ ನಡೆ ಸಂಶಯ ಹುಟ್ಟು ಹಾಕಿದ್ದು, ತನಿಖೆ ಚುರುಕುಗೊಳಿಸಲಾಗಿದೆ.
ಈ ಗಡಿ ದಾಟುವಿಕೆಯು ಅಚಾನಕ್ಕಾಗಿ ನಡೆದದ್ದೇ, ಗಡಿ ಭದ್ರತೆಯ ಸನ್ನದ್ಧತೆಯನ್ನು ಪರೀಕ್ಷಿಸಲು ಉದ್ದೇಶಪೂರ್ವಕವಾಗಿ ಮಾಡಿದ್ದೇ ಅಥವಾ ಇದು ಒಳನುಸುಳುವಿಕೆ ಅಥವಾ ಕಳ್ಳಸಾಗಣೆಯ ದೊಡ್ಡ ಸಂಚಿನ ಭಾಗವೇ ಎಂಬುದನ್ನು ತನಿಖಾ ಅಧಿಕಾರಿಗಳು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹಿಂದೆಯೂ ನಡೆದಿತ್ತು
ಆರ್.ಎಸ್. ಪುರ ಸೆಕ್ಟರ್ನಲ್ಲಿ ಗಡಿ ದಾಟುವಿಕೆ ಕೆಲವು ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಸೆಪ್ಟೆಂಬರ್ 11ರಂದು ಕಥುವಾದಲ್ಲಿ 60-65 ವರ್ಷದ ಪಾಕಿಸ್ತಾನ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸೆಪ್ಟೆಂಬರ್ 8, 3ರಂದು ಕೂಡ ಒಳನುಸುಳಿದ ಪಾಕ್ ಪ್ರಜೆಗಳನ್ನು ಬಿಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಅದಲ್ಲೂ ಮೊದಲು ಮಾರ್ಚ್ನಲ್ಲಿ ಇಂತಹದ್ದೇ ಘಟನೆ ಸಂಭವಿಸಿತ್ತು. ಸದ್ಯ ಈ ಒಳನುಸುಳುವಿಕೆ ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದ್ದು, ಕಣ್ಗಾವಲು ಹೆಚ್ಚಿಸಲಾಗಿದೆ. ಸದ್ಯ ಭಯೋತ್ಪದಕರೊಂದಿಗೆ ಅವರಿಗೆ ಯಾವುದಾದರೂ ರೀತಿಯಲ್ಲಿ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಲತೀಫ್ ಭಟ್ ಹತ್ಯೆ ಮೂಲಕ ಸದ್ಯ ಭದ್ರತಾ ಪಡೆಗಳಿಗೆ ಉಗ್ರರ ವಿರುದ್ಧದ ಹೋರಾಟದಲ್ಲಿ ಮಹತ್ವದ ಜಯ ಲಭಿಸಿದ್ದು, ಕಣಿವೆ ರಾಜ್ಯವನ್ನು ಹಿಂಸೆಯಿಂದ ಮುಕ್ತಗೊಳಿಸಲಿರುವ ಪ್ರಮುಖ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ. ಅಲ್ಲದೆ ಇದಕ್ಕೆ ಉಗ್ರರು ಸೇಡು ತೀರುವ ಸಾಧ್ಯತೆ ಇರುವುದರಿಂದ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.