ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಂತ್ರಿಕ ದೋಷದಿಂದ ಕೇಬಲ್‌ ಕಾರ್‌ ಸ್ಥಗಿತ; ಆಗಸದಲ್ಲೇ 300 ಪ್ರವಾಸಿಗರು ಬಾಕಿ

Gulmarg Cable Car Snag: ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿನ ಕೇಬಲ್‌ ಕಾರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸುಮಾರು 300 ಪ್ರವಾಸಿಗರು ಆಗಸದಲ್ಲೇ ಬಾಕಿಯಾದ ಘಟನೆ ಸೋಮವಾರ ನಡೆದಿದೆ. ಕೂಡಲೇ ವಿವಿಧ ತಂಡಗಳು ಆಗಮಿಸಿ ಪ್ರವಾಸಿಗರು ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ ಆರಂಭಿಸಿವೆ.

ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ರಕ್ಷಣಾ ಕಾರ್ಯಾಚರಣೆ

ಶ್ರೀನಗರ, ಮೇ 25: ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿನ ಕೇಬಲ್‌ ಕಾರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸುಮಾರು 300 ಪ್ರವಾಸಿಗರು ಆಗಸದಲ್ಲೇ ಬಾಕಿಯಾದ ಘಟನೆ ಸೋಮವಾರ (ಮೇ 25) ನಡೆದಿದೆ (Gulmarg Cable Car Snag). ಕೇಬಲ್‌ ಕಾರ್‌ ಚಲಿಸದೆ ಸಮಸ್ಯೆಯಾಗಿದ್ದು, ಕೂಡಲೇ ವಿವಿಧ ತಂಡಗಳು ಆಗಮಿಸಿ ಪ್ರವಾಸಿಗರು ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ ಆರಂಭಿಸಿವೆ. ಸೇನೆ, ಪೊಲೀಸ್‌ ಮತ್ತು ಸ್ಥಳೀಯಾಡಳಿತ ಸ್ಥಳಕ್ಕೆ ಧಾವಿಸಿದ್ದು, ಸಮರೋಪಾದಿಯಲ್ಲಿ ಪ್ರವಾಸಿಗರನ್ನು ರಕ್ಷಿಸಲಾಗುತ್ತಿದೆ.

ʼʼಗೊಂಡೊಲಾ ಎಂದು ಕರೆಯಲ್ಪಡುವ ಕೇಬಲ್ ಕಾರ್ ಸೇವೆಯು ತಾಂತ್ರಿಕ ದೋಷದಿಂದಾಗಿ ಹಠಾತ್ತನೆ ಸ್ಥಗಿತಗೊಂಡಿತು. ಇದರಿಂದಾಗಿ ಪ್ರವಾಸಿಗರು ಕ್ಯಾಬಿನ್‌ಗಳೊಳಗೆ ಸಿಲುಕಿಕೊಂಡರು. ಇದು ಕೆಲ ಹೊತ್ತು ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ.

ವೈರಲ್‌ ವಿಡಿಯೊ ಇಲ್ಲಿದೆ:



ನೆರವಿಗೆ ಧಾವಿಸಿದ ವಿವಿಧ ತಂಡ

ವಿವಿಧ ಕಡೆಗಳಿಂದ ಆಗಮಿಸಿದ ಸುಮಾರು 300ರಷ್ಟು ಪ್ರವಾಸಿಗರು ಕೇಬಲ್‌ ಕಾರ್‌ನಲ್ಲಿ ಸಿಲುಕಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸೇನೆಯ 9 ರಾಜ್ ರಿಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತು. ತಂಗ್‌ಮಾರ್ಗ್‌ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ರಕ್ಷಣಾ ಪ್ರಯತ್ನಗಳ ಮೇಲ್ವಿಚಾರಣೆ ನಡೆಸಿದರು.

ಜಮ್ಮು- ಕಾಶ್ಮೀರದಲ್ಲಿ ಲಿಫ್ಟ್‌ ಕುಸಿತ, ಬೆಂಗಳೂರಿನ ಆರು ಮಂದಿಗೆ ಗಾಯ

ʼʼಗೊಂಡೊಲಾ ಅನಿರೀಕ್ಷಿತವಾಗಿ ನಿಂತಿದ್ದಲ್ಲದೆ ಮುಂದಕ್ಕೆ ಚಲಿಸದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಹಿಳೆಯರು, ಮಕ್ಕಳು ಸೇರಿ ಹಲವು ಪ್ರವಾಸಿಗರು ಭಯಭೀತರುವುದು ಕಂಡು ಬಂತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ʼʼತಾಂತ್ರಿಕ ದೋಷದಿಂದ ಕೇಬಲ್‌ ಕಾರ್‌ ಸ್ಥಗಿತಗೊಂಡಿದೆ ಎನ್ನುವುದು ಗೊತ್ತಾಗಿದೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಂತ್ರಿಕ ಪರಿಣಿತರು ಸಮಸ್ಯೆ ಪತ್ತೆ ಹಚ್ಚಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೂ, ಶೀಘ್ರದಲ್ಲೇ ಸೇವೆ ಪುನರಾರಂಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಒಮರ್‌ ಅಬ್ದುಲ್ಲ ಅವರ ಎಕ್ಸ್‌ ಪೋಸ್ಟ್:‌



ಮುಖ್ಯಮಂತ್ರಿ ಹೇಳಿದ್ದೇನು?

ಘಟನೆ ಬಗ್ಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲ ಮಾತನಾಡಿ, ʼʼಸದ್ಯ ಗುಲ್ಮಾರ್ಗ್‌ ಗೊಂಡೊಲಾ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸರ್ಕಾರ ಸೂಕ್ಷ್ಮವಾಗಿ ಪರಿಸ್ಥಿತಿ ಗಮನಿಸುತ್ತಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎನ್ನುವುದು ತಿಳಿದು ಬಂದಿದೆ. ತರಬೇತಿ ಪಡೆದ ಸಿಬ್ಬಂದಿಯಿಂದ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆತಂಕ ಪಡಬೇಕಾಗಿಲ್ಲʼʼ ಎಂದು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಇರಾನ್‌ಗೆ ನೀಡಿದ್ದ ದೇಣಿಗೆ ದುರುಪಯೋಗ ಶಂಕೆ; ಮಧ್ಯವರ್ತಿಗಳ ವಿರುದ್ಧ ತನಿಖೆ ಶುರು

ವಿಶ್ವದ ಅತಿ ಎತ್ತರದ ಕೇಬಲ್ ಕಾರ್ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾದ ಗುಲ್ಮಾರ್ಗ್ ಗೊಂಡೊಲಾ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಬೇಸಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author