ಹೊಸದಿಲ್ಲಿ: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ದೇಶದ 2ನೇ ಅತಿ ದೊಡ್ಡ ವಿಮಾನ ಅಪಘಾತ ನಡೆದಿದ್ದು, ಏರ್ ಇಂಡಿಯಾದ (Air India) ಡ್ರೀಮ್‌ಲೈನರ್ ವಿಮಾನ ಪತನವಾಗಿ 270ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಮಧ್ಯೆ ಮಂಗಳವಾರ (ಜೂ. 17) ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏರ್ ಇಂಡಿಯಾ 7 ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ (Flights Cancelled). ಇದರಲ್ಲಿ ಬಹುತೇಕ 787-8 ಡ್ರೀಮ್‌ಲೈನರ್‌ನ ವಿಮಾನಗಳು ಎನ್ನುವುದು ಗಮನಾರ್ಹ. ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
AI 915 (ದಿಲ್ಲಿ-ದುಬೈ), AI 153 (ದಿಲ್ಲಿ-ವಿಯೆನ್ನಾ), AI 143 (ದಿಲ್ಲಿ-ಪ್ಯಾರಿಸ್), AI 159 (ಅಹಮದಾಬಾದ್-ಲಂಡನ್) ಮತ್ತು AI 170 (ಲಂಡನ್-ಅಮೃತಸರ), AI133 (ಬೆಂಗಳೂರು-ಲಂಡನ್), AI179 (ಮುಂಬೈ-ಸ್ಯಾನ್ ಫ್ರಾನ್ಸಿಸ್ಕೋ)- ಇವು ರದ್ದಾದ ವಿಮಾನ ಸೇವೆಗಳು. ಇವುಗಳ ಜತೆಗೆ ಹಾಂಗ್‌ಕಾಂಗ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದ AI 315 ಡ್ರೀಮ್‌ಲೈನರ್‌ನಲ್ಲೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಪೈಲಟ್ ಅಲ್ಲಿಯೇ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಮಾತ್ರವಲ್ಲ ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಏರ್ ಇಂಡಿಯಾ ವಿಮಾನ AI 180 ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವ 12.45ಕ್ಕೆ ಸಮಯಕ್ಕೆ ಸರಿಯಾಗಿ ಬಂದಿಳಿಯಿತು. ಆದರೆ ಎಡ ಎಂಜಿನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ವಿಳಂಬವಾಯಿತು.
ಅಲ್ಲದೆ ಫ್ರಾಂಕ್‌ಫರ್ಟ್ ಮತ್ತು ಲಂಡನ್‌ನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹಾರಾಟ ನಡೆಸುತ್ತಿದ್ದ ಲುಫ್ಥಾನ್ಸ ಮತ್ತು ಬ್ರಿಟಿಷ್ ಏರ್‌ವೇಸ್ ನಿರ್ವಹಿಸುತ್ತಿದ್ದ ಎರಡು ಡ್ರೀಮ್‌ಲೈನರ್‌ಗಳು ತಪಾಸಣೆಯ ಕಾರಣಕ್ಕೆ ಮತ್ತೆ ಮೂಲ ನಿಲ್ದಾಣಕ್ಕೆ ಮರಳಿದವು.
ಈ ಸುದ್ದಿಯನ್ನೂ ಓದಿ: Flight Issues: ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ಕೊಲ್ಕತ್ತಾದಲ್ಲಿ ಲ್ಯಾಂಡಿಂಗ್
ಏರ್ ಇಂಡಿಯಾ ಹೇಳಿದ್ದೇನು?
ವಿಮಾನ ಹಾರಾಟದ ಪೂರ್ವ ತಪಾಸಣೆಯ ಸಮಯದಲ್ಲಿ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ದಿಲ್ಲಿ-ಪ್ಯಾರಿಸ್‌ಗೆ ತೆರಳಬೇಕಾಗಿದ್ದ AI 143 ಸೇವೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಏರ್ ಇಂಡಿಯಾ ಹೇಳಿದೆ.
ಜೂ. 12ರಂದು ಏನಾಗಿತ್ತು?
ಜೂ. 12ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ AI 171 ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣದಿಂದ 2 ಕಿ.ಮೀ. ಅಂತರದಲ್ಲಿರುವ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಬಿದ್ದು ಭಯಾನಕ ಬೆಂಕಿಯ ಉಂಡೆಯಾಗಿ ಬದಲಾಯಿತು. ಅದಕ್ಕೂ ಮೊದಲು ವಿಮಾನವನ್ನು ನಿಯಂತ್ರಿಸಲು ಪೈಲಟ್ ಹೆಣಗುತ್ತಿರುವ ವಿಡಿಯೊ ವೈರಲ್ ಆಗಿದೆ.
ಅಪಘಾತಕ್ಕೀಡಾದ ವಿಮಾನದಲ್ಲಿ 230 ಮಂದಿ ಪ್ರಯಾಣಿಕರು, 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಇದ್ದರು. ಈ ಪೈಕಿ 241 ಮಂದಿ ಮೃತಪಟ್ಟಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ ಇದೀಗ ಎಲ್ಲ ವಿಮಾನಗಳನ್ನು ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸೂಚನೆ ನೀಡಿದೆ.