ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೈಲು ಡಿಕ್ಕಿಯಾಗಿ ಒಂದೇ ಬೈಕ್‌ನಲ್ಲಿ ಸಾಗುತ್ತಿದ್ದ 5 ಮಂದಿ ಸಾವು; ನಿಯಮ ಉಲ್ಲಂಘಿಸಿದವರ ಪ್ರಾಣಪಕ್ಷಿಯೇ ಹೊರಟುಹೋಯ್ತು

Shahjahanpur Horror: ರೈಲು ಡಿಕ್ಕಿಯಾಗಿ ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಮಕ್ಕಳು ಸೇರಿ ಐವರು ಅಸುನೀಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದ್ದು, ದೇಶವೇ ಬೆಚ್ಚಿಬಿದ್ದಿದೆ.

ಸಾಂದರ್ಭಿಕ ಚಿತ್ರ.

ಲಖನೌ, ಡಿ. 24: ಪ್ರಯಾಣಿಕರ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದನ್ನು ತಪ್ಪದೆ ಪಾಲಿಸುವಂತೆ ಅಧಿಕಾರಿಗಳು ಪದೇ ಪದೆ ಹೇಳುತ್ತಲೇ ಬಂದಿದ್ದಾರೆ. ಆದರೆ ಈ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ. ಇದೀಗ ಸಂಚಾರ ನಿಯಮ ಉಲ್ಲಂಘಿಸಿದ ಪರಿಣಾಮ ಐವರು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ (Accident News). ರೈಲು ಡಿಕ್ಕಿಯಾಗಿ ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಮಕ್ಕಳು ಸೇರಿ ಐವರು ಅಸುನೀಗಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ದೇಶವೇ ಬೆಚ್ಚಿಬಿದ್ದಿದೆ.

ಐವರು ಸಂಚರಿಸುತ್ತಿದ್ದ ಬೈಕ್‌ ರೈಲ್ವೆ ಟ್ರ್ಯಾಕ್‌ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದ್ದು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ಘಟನೆ ಸಂಚಾರ ನಿಯಮದ ಪ್ರಾಧಾನ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದೆ.

ʼʼರೌಜಾ ಪೊಲೀಸ್ ಠಾಣೆ ವ್ಯಾಪ್ತಿಯ ರೌಜಾ ರೈಲ್ವೆ ನಿಲ್ದಾಣದ ಬಳಿ, ಪಾದಚಾರಿ ಮಾರ್ಗದ ಮೂಲಕ ಬೈಕ್‌ ರೈಲ್ವೆ ಟ್ರ್ಯಾಕ್‌ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ (SP) ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

ರೈಲು ಅಪಘಾತದ ಬಗ್ಗೆ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ:



"ಡಿಸೆಂಬರ್‌ 24ರ ಸಂಜೆ 6.30ರ ಸುಮಾರಿಗೆ ಲಖನೌ ಬದಿಯಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿದ್ದ ಎಲ್ಲ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರು" ಎಂದು ದ್ವಿವೇದಿ ಪಿಟಿಐ ಸುದ್ದಿಸಂಸ್ಥೆಗೆ ವಿವರಿಸಿದರು. ಮೃತರನ್ನು ಸೇತ್‌ಪಾಲ್‌ (40), ಆತನ ಪತ್ನಿ ಪೂಜಾ (38), ಅವರ 6, 4 ವರ್ಷದ ಇಬ್ಬರು ಮಕ್ಕಳು ಮತ್ತು ಸೇತ್‌ಪಾಲ್‌ ಅವರ ಸಂಬಂಧಿ ಹರಿ ಓಂ (45) ಎಂದು ಗುರುತಿಸಲಾಗಿದೆ. ಇವರು ಲಖಿಂಪುರ ಜಿಲ್ಲೆಯ ವಂಕ ಗ್ರಾಮದವರು.

ಒಂದೇ ಬೈಕ್‍ನಲ್ಲಿ ಐವರ ಸವಾರಿ; ವಿಡಿಯೊ ವೈರಲ್ ಬೆನ್ನಲ್ಲೇ ಪೊಲೀಸರಿಂದ 31,000 ರುಪಾಯಿ ದಂಡ

ಸಂತ್ರಸ್ತರು ತಮ್ಮ ಊರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ʼʼಸೇತ್‌ಪಾಲ್‌ ಅವರ ಕುಟುಂಬ ಹರಿ ಓಂ ಅವರ ನಿಗೋಹಿ ಗ್ರಾಮಕ್ಕೆ ತೆರಳಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆʼʼ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಪೋಸ್ಟ್‌ ಮಾರ್ಟಂಗೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆ ಬಳಿಕ ಸ್ವಲ್ಪ ಹೊತ್ತು ಅಸ್ತವ್ಯಸ್ತವಾಗಿದ್ದ ಸಂಚಾರ ವ್ಯವಸ್ಥೆಯನ್ನು ಸಾಮಾನ್ಯ ಸ್ಥಿತಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.