ರಾಯ್‌ಪುರ, ನ. 11: ಛತ್ತೀಸ್‌ಗಢದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಕನಿಷ್ಠ 6 ಮಾವೋವಾದಿಗಳನ್ನು (Maoists) ಹತ್ಯೆಗೈದಿವೆ (Encounter In Chhattisgarh). ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ (ನವೆಂಬರ್ 11) ನಡೆದ ಈ ಎನ್‌ಕೌಂಟರ್ ಬಳಿಕ ಪೊಲೀಸರು ಮಾವೋವಾದಿಗಳ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಐಎನ್‌ಎಸ್‌ಎಎಸ್ ರೈಫಲ್, ಸ್ಟೆನ್ ಗನ್, .303 ರೈಫಲ್, ಸ್ಫೋಟಕ ವಸ್ತುಗಳು ಸೇರಿವೆ. ಜತೆಗೆ ಸ್ಥಳದಲ್ಲಿ ಮಾಮೋವಾದ ಸಿದ್ಧಾಂತಕ್ಕೆ ಸಂಬಂಧಿಸಿದ ಸಾಹಿತ್ಯವೂ ಲಭ್ಯವಾಗಿದೆ.
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಎನ್‌ಕೌಂಟರ್ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ದಟ್ಟ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬಿಜಾಪುರ ಮತ್ತು ದಂತೇವಾಡದ ಜಿಲ್ಲಾ ಮೀಸಲು ಪಡೆ (DRG) ಮತ್ತು ವಿಶೇಷ ಕಾರ್ಯಪಡೆ (SIT)ಯ ಜಂಟಿ ತಂಡವು ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಮಾವೋವಾದಿಗಳು ಗುಂಡು ಹಾರಿಸಿದರು. ಬಳಿಕ ಎನ್‌ಕೌಂಟರ್ ನಡೆಯಿತು.
ಈ ಸುದ್ದಿಯನ್ನೂ ಓದಿ: IED Blast: ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಫೋಟ; ಯೋಧ ಹುತಾತ್ಮ
ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿತೇಂದ್ರ ಯಾದವ್ ಈ ಬಗ್ಗೆ ಮಾಹಿತಿ ನೀಡಿ, ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಬೆಳಗ್ಗೆ ಆರಂಭವಾದ ಗುಂಡಿನ ಚಕಮಕಿ ಹಲವು ಗಂಟೆಗಳ ಕಾಲ ಮುಂದುವರಿತು ಎಂದಿದ್ದಾರೆ. "ನವೆಂಬರ್ 11ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಿಜಾಪುರ, ದಂತೇವಾಡದ ಡಿಆರ್‌ಜಿ ಮತ್ತು ಎಸ್‌ಟಿಎಫ್‌ನ ಜಂಟಿ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ಪ್ರಾರಂಭವಾಯಿತು. ಇಲ್ಲಿಯವರೆಗೆ 6 ಮಾವೋವಾದಿಗಳ ಮೃತದೇಹಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾವೋವಾದಿ ಸಾಹಿತ್ಯವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ವಿವರಿಸಿದ್ದಾರೆ.
ಹತ್ತಿರದ ಕಾಡುಗಳಲ್ಲಿ ಅಡಗಿರಬಹುದಾದ ಇತರ ಮಾವೋವಾದಿಗಳನನು ಮಟ್ಟ ಹಾಕಲು ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ತಾರ್ ರೇಂಜ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ. ಈ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳಿಗೆ ದೊರೆತ ಬಹುದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ.
"ಇಂದಿನ ಎನ್‌ಕೌಂಟರ್‌ನಲ್ಲಿ 6 ಕಟ್ಟಾ ಮಾವೋವಾದಿಗಳನ್ನು ಹೊಡೆದುರುಳಿಸಿದ್ದು ಮಹತ್ವದ ಬೆಳವಣಿಗೆ. ಮಾವೋವಾದಿ ಸಂಘಟನೆಯು ಸೂಕ್ತ ನಾಯಕನಿಲ್ಲದ ಹೋರಾಡುತ್ತಿದೆ. ಈ ನಿರ್ಣಾಯಕ ವೇಳೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಸಿಕ್ಕಿದೆ" ಎಂದು ಸುಂದರರಾಜ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಅಡಗಿಕೊಂಡಿರುವ ಮಾವೋವಾದಿಗಳನ್ನು ಪತ್ತೆಹಚ್ಚಲು ಡಿಆರ್‌ಜಿ, ಎಸ್‌ಟಿಎಫ್, ಬಸ್ತಾರ್ ಫೈಟರ್ಸ್, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಛತ್ತೀಸ್‌ಗಢ ಸಶಸ್ತ್ರ ಪಡೆ (CAF) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. "ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ, ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ನಿಖರ ಸ್ಥಳ, ಪಡೆಯ ಬಲ ಮತ್ತಿತರ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ. ಮೃತ ಮಾವೋವಾದಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ.
ಈ ಸುದ್ದಿಯನ್ನೂ ಓದಿ: Maoist Couple arrested: ತಲೆಗೆ 13 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ದಂಪತಿ ಅರೆಸ್ಟ್
ಇತ್ತೀಚಿನ ದಿನಗಳಲ್ಲಿ ಬಸ್ತಾರ್ ಪ್ರದೇಶದಾದ್ಯಂತ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ, ದಂತೇವಾಡ ಮತ್ತು ನಾರಾಯಣಪುರ ಜಿಲ್ಲೆಗಳ ಮಾವೋವಾದಿ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.