Maoist Couple arrested: ತಲೆಗೆ 13 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ದಂಪತಿ ಅರೆಸ್ಟ್
ಕಟ್ಟಡ ನಿರ್ಮಾಣ ಕಾರ್ಮಿಕರಂತೆ ನಟಿಸುತ್ತಿದ್ದ ಮಾವೋವಾದಿ ದಂಪತಿಯನ್ನು ಛತ್ತೀಸ್‌ಗಢ ರಾಜ್ಯ ತನಿಖಾ ಸಂಸ್ಥೆ (SIA) ಬಂಧಿಸಿದೆ. ಈ ದಂಪತಿಯ ಬಂಧನಕ್ಕೆ 13 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟು ಮಾಡಿದೆ. ಯಾಕೆಂದರೆ ಶಂಕಿತ ಮಾವೋವಾದಿ ಕಾರ್ಯಕರ್ತರು ಸ್ಥಳೀಯರ ನಡುವೆಯೇ ಇದ್ದದ್ದು ಯಾರಿಗೂ ತಿಳಿದಿರಲಿಲ್ಲ.

-

ರಾಯ್‌ಪುರ: ಕಟ್ಟಡ ನಿರ್ಮಾಣ ಕಾರ್ಮಿಕರಂತೆ ನಟಿಸುತ್ತಿದ್ದ ಮಾವೋವಾದಿ ದಂಪತಿಯನ್ನು (Maoist couple) ಛತ್ತೀಸ್‌ಗಢ (Chhattisgarh) ರಾಜ್ಯ ತನಿಖಾ ಸಂಸ್ಥೆ (State Investigation Agency) ಬಂಧಿಸಿದೆ. ಈ ದಂಪತಿಯ ಬಂಧನಕ್ಕೆ 13 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮಾವೋವಾದಿ ದಂಪತಿಯನ್ನು ರಾಯ್‌ಪುರದಲ್ಲಿ (Raipur) ಬಂಧಿಸಲಾಗಿದ್ದು, ಇವರು ಹಲವು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಬಂಧನವು ನಗರದಲ್ಲಿ ಗುಪ್ತ ನಕ್ಸಲ್ ಜಾಲವನ್ನು ಬಹಿರಂಗಪಡಿಸಿದ್ದು ಸ್ಥಳೀಯರಿಗೆ ಆಘಾತವನ್ನು ಉಂಟು ಮಾಡಿದೆ.
ಜಗ್ಗು ಕುರ್ಸಮ್ ಅಲಿಯಾಸ್ ರವಿ ಅಲಿಯಾಸ್ ರಮೇಶ್ (28) ಮತ್ತು ಆತನ ಪತ್ನಿ ಕಮಲಾ ಕುರ್ಸಮ್ (27) ಅನ್ನು ಚಂಗೋರಭಟ್ಟಾದಲ್ಲಿ ಕಳೆದ ಮಂಗಳವಾರ ಬಂಧಿಸಲಾಗಿದೆ. ಈ ಶಂಕಿತ ಮಾವೋವಾದಿ ಕಾರ್ಯಕರ್ತರು ಸ್ಥಳೀಯರ ನಡುವೆಯೇ ಇದ್ದು, ನಿರ್ಮಾಣ ಕಾರ್ಮಿಕರಂತೆ ನಟಿಸುತ್ತಿದ್ದರು. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು. ಇವರು ರಹಸ್ಯವಾಗಿ ತಮ್ಮ ಭೂಗತ ಜಾಲವನ್ನು ನಿರ್ವಹಿಸುತ್ತಿದ್ದರು. ಇವರಿಬ್ಬರೂ ರಾಯ್‌ಪುರ, ಭಿಲಾಯಿ ಮತ್ತು ದುರ್ಗದಾದ್ಯಂತ ಮನೆಗಳನ್ನು ಬದಲಾಯಿಸುತ್ತಿದ್ದರು. ಜಗ್ಗುವಿನ ಬಂಧನಕ್ಕೆ 8 ಲಕ್ಷ ರೂ. ಮತ್ತು ಕಮಲಳಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ದಾಳಿಯ ಸಮಯದಲ್ಲಿ ತನಿಖಾಧಿಕಾರಿಗಳು ಇವರ ಬಳಿ ಇದ್ದ 10 ಗ್ರಾಂ ಚಿನ್ನದ ಬಿಸ್ಕತ್ತು, 1.14 ಲಕ್ಷ ರೂ. ನಗದು, ಎರಡು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಹಿರಿಯ ನಕ್ಸಲ್ ನಾಯಕರಿಗೆ ಔಷಧ, ಇತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮಾವೋವಾದಿ ದಂಪತಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅವರು ಕೆಲಸಕ್ಕೆ ಬೇಗನೆ ಹೊರಟು ಸಂಜೆ ತಡವಾಗಿ ಹಿಂದಿರುಗುತ್ತಿದ್ದರು. ನಾವು ಅವರ ಮನೆಗೆ ಭೇಟಿ ನೀಡುವವರನ್ನು ಎಂದಿಗೂ ನೋಡಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. 11ನೇ ವಯಸ್ಸಿನಲ್ಲಿ ಜಗ್ಗು ಕುರ್ಸಮ್ ಮಾವೋವಾದಿ ಗುಂಪಿಗೆ ಸೇರಿದ್ದು, 2014ರಲ್ಲಿ ಕಮಲಾಳನ್ನು ಭೇಟಿಯಾಗಿದ್ದ. ಬಳಿಕ ಇಬ್ಬರು ಪ್ರೀತಿಸಿ ಮದುವೆಯಾದರು.
ಇದನ್ನೂ ಓದಿ: AFSPA: ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಆರು ತಿಂಗಳ ಕಾಲ ವಿಸ್ತರಣೆ
ರಾಜ್ಯ ರಾಜಧಾನಿಯಲ್ಲಿ ಮಾವೋವಾದಿಗಳು ಸಿಕ್ಕಿಬಿದ್ದಿರುವುದು ಇದು ಮೊದಲೇನಲ್ಲ. 2005ರಲ್ಲಿ ಕೇಂದ್ರ ಪೊಲಿಟ್‌ಬ್ಯೂರೋ ಸದಸ್ಯೆ ನಾರಾಯಣ್ ಸನ್ಯಾಲ್ ನನ್ನು ಬಂಧಿಸಲಾಗಿದ್ದು, 2008ರಲ್ಲಿ ಉನ್ನತ ಮಹಿಳಾ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಜಗ್ಗು ದಂಪತಿ ಹಿರಿಯ ಮಾವೋವಾದಿ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.