ದೆಹಲಿ, ನ. 29: ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದ್ದು, ಇದರಲ್ಲಿ ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026 ಮತ್ತು ಕ್ಷೇತ್ರ ವಿಂಗಡಣೆ (ಎರಡನೆ) ಮಸೂದೆ, 2026 ಮಂಡನೆಯಾಗಲಿದೆ. ಮಸೂದೆ ಮಂಡನೆಯ ಸಮಯ ನಿಗದಿ ಬಿಜೆಪಿ ಅನುಕೂಲ ಒದಗಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷಗಳಲ್ಲಿ ಮೂಡಿರುವ ಬಿರುಕು ಪ್ಲಸ್ ಆಗಲಿದೆ. ಅದರಲ್ಲೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಭಿನ್ನಾಭಿಪ್ರಾಯ ಹೊಗೆಯಾಡುತ್ತಿದೆ. ಇದನ್ನೇ ಸದುಪಯೋಗಪಡಿಸಿಕೊಂಡ ಬಿಜೆಪಿ ಡಿಎಂಕೆ ಮತ್ತು ಎನ್ಸಿಪಿ (ಎಸ್ಪಿ)ಯಂತಹ ಪಕ್ಷಗಳಿಂದ ಬೆಂಬಲ ಪಡೆಯುವ ಮೂಲಕ, ಏಪ್ರಿಲ್ನಲ್ಲಿ ಸರ್ಕಾರದ ಕೈತಪ್ಪಿದ್ದ ಲೋಕಸಭೆಯ ಮೂರನೇ ಎರಡರಷ್ಟು ಬಹುಮತವನ್ನು ಮತ್ತೆ ಪಡೆಯಲು ಬಿಜೆಪಿ ಮುಂದಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮುನ್ನ ನೂತನ ಮಸೂದೆಯನ್ನು ಮಂಡಿಸುವುದು ಆ ಮೂಲಕ ಸಮಾಜವಾದಿ ಪಕ್ಷದ ಮೇಲೆ ಒತ್ತಡ ಹೇರುವುದು, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರಚಾರಗಳಿಂದ ರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯುವುದು ಹಾಗೂ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಜಾರಿಗೊಳಿಸಲು-ಹೀಗೆ ಬಿಜೆಪಿ ಒಂದೇ ಏಟಿನಲ್ಲಿ ಹಲವು ಉದ್ದೇಶಗಳನ್ನು ಈಡೇರಿಸಲು ಮುಂದಾಗಿದೆ ಎನ್ನಲಾಗಿದೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು, ಕಾಶ್ಮೀರದ ಉಲ್ಲೇಖ
ಕೇಂದ್ರಕ್ಕೆ ಯಾಕೆ ಈ ಮಸೂದೆ ಮುಖ್ಯ?
ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಬಿರುಕಿನ ಲಾಭ ಪಡೆಯುವುದು: 2026ರ ಏಪ್ರಿಲ್ನಲ್ಲಿ ಸರ್ಕಾರ ಮಂಡಿಸಿದ ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿದ್ದು, 54 ಮತಗಳ ಕೊರತೆಯನ್ನು ಎದುರಿಸಿತು. ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಉಂಟಾದ ಭಿನ್ನಾಭಿಪ್ರಾಯವನ್ನು ಬಳಸಿಕೊಂಡ ಬಿಜೆಪಿ, ಎಂ.ಕೆ. ಸ್ಟಾಲಿನ್ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿತು. ಡಿಎಂಕೆಯದ್ದು ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಏಕರೂಪವಾಗಿ ಹೆಚ್ಚಿಸುವುದು ಮತ್ತು 2051ರವರೆಗೆ ಅಂದರೆ 25 ವರ್ಷಗಳ ಕಾಲ ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಪ್ರಮುಖ ಬೇಡಿಕೆಯಾಗಿತ್ತು. ಇದನ್ನು ಕೇಂದ್ರ ಒಪ್ಪಿಕೊಂಡಿದೆ.
ಇಂಡಿ ಒಕ್ಕೂಟದೊಳಗೆ ಹೆಚ್ಚುತ್ತಿದೆ ಬಿರುಕು: ಡಿಎಂಕೆ ಅಲ್ಲದೆ ಶರದ್ ಪವಾರ್ ಅವರ ಎನ್ಸಿಪಿ (ಎಸ್ಪಿ) ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷಗಳು ಪರಿಷ್ಕೃತ ಮಸೂದೆಗೆ ಬೆಂಬಲ ಸೂಚಿಸಿವೆ. ಇದು ವಿರೋಧ ಪಕ್ಷಗಳ ಇಂಡಿ ಮೈತ್ರಿಕೂಟದೊಳಗೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿದೆ.
ಹಿಂದಿನ ಸೋಲಿನ ತಪ್ಪು ಸರಿಪಡಿಸುವುದು: ವಿರೋಧ ಪಕ್ಷಗಳ ಮಧ್ಯೆ ಬಿರುಕು ಮೂಡಿರುವ ಸಂದರ್ಭದಲ್ಲೇ ಸಂಸತ್ತಿನ ಮುಂಗಾರು ಅಧಿವೇಶನವನ್ನು ಪುನರಾರಂಭಿಸುವ ಉದ್ದೇಶದಿಂದ ಬಿಜೆಪಿ ಉದ್ದೇಶಪೂರ್ವಕವಾಗಿಯೇ ಆಗಸ್ಟ್ನಲ್ಲಿ ಅಧಿಕೃತವಾಗಿ ಮುಕ್ತಾಯಗೊಳಿಸದೆ ಮುಂದುವರಿಸಿತ್ತು ಎಂದು ಕೆಲವು ವರದಿಗಳು ತಿಳಿಸಿವೆ. ಇದು ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ 360 ಮತಗಳ ಮಿತಿಯನ್ನು ಸುಲಭವಾಗಿ ದಾಟಲು ಎನ್ಡಿಎಗೆ ಅನುವು ಮಾಡಿಕೊಡಲಿದೆ ಎನ್ನಲಾಗಿದೆ.
ಉತ್ತರ ಪ್ರದೇಶ ಚುನಾವಣೆಯ ಮುನ್ನ ಸಮಾಜವಾದಿ ಪಕ್ಷದ ಮೇಲೆ ಒತ್ತಡ: ಈ ಬೆಳವಣಿಗೆಯು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಎಸ್ಪಿ ಮೇಲೆ ರಾಜಕೀಯವಾಗಿ ಒತ್ತಡ ಹೇರಲಿದೆ.
2029ರ ಮೊದಲು ಮಹಿಳಾ ಮೀಸಲಾತಿ ಜಾರಿ: ಕ್ಷೇತ್ರ ಮರುವಿಂಗಡಣೆಯನ್ನು 2026ರ ನಂತರದ ಜನಗಣತಿಯಿಂದ ಪ್ರತ್ಯೇಕಿಸಿ 2011ರ ಜನಗಣತಿಯ ಅಂಕಿಅಂಶಗಳನ್ನು ಆಧರಿಸಿ ಹಾಗೂ ಸ್ಥಾನಗಳ ಸಂಖ್ಯೆಯನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಮೂಲಕ, 2029ರ ಸಾರ್ವತ್ರಿಕ ಚುನಾವಣೆ ವೇಳೆಗೆ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಮುಂದಾಗಿದೆ. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ. ಮಹಿಳಾ ಮೀಸಲಾತಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು.
ಕ್ಷೇತ್ರ ಪುನರ್ವಿಂಗಡಣೆ: ಕರ್ನಾಟಕಕ್ಕೆ ಸಿಗಲಿದ್ದಾರೆ 336 ಶಾಸಕರು, 42 ಸಂಸದರು
ರಾಜಕೀಯ ಸ್ಥಿತ್ಯಂತರ: ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿ ವಿಶೇಷ ಅಧಿವೇಶನವನ್ನು ಕರೆದಿರುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರಚಾರಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸಲು ಅವಕಾಶ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.