ಶ್ರೀನಗರ, ನ. 25: ಕನಿಷ್ಠ 65 ವಿದೇಶಿ ಉಗ್ರರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಲೂ ಸಕ್ರಿಯವಾಗಿದ್ದಾರೆ ಎನ್ನುವ ಬೆಚ್ಚಿಬೀಳಿಸುವ ಅಂಶ ಬೆಳಕಿಗೆ ಬಂದಿದೆ (65 foreign terrorists in Kashmir). ಈ ಪೈಕಿ 55 ಮಂದಿ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರು ಎಂದು ಇಂಟೆಲಿಜೆನ್ಸ್ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಮಧ್ಯೆ ಈ ವಿವರ ಹೊರ ಬಂದಿದೆ.
ಲತೀಫ್ ಭಟ್ ಹತ್ಯೆಯೊಂದಿಗೆ ಕಣಿವೆ ರಾಜ್ಯದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿದಿದ್ದು, ವಿದೇಶಿ ಭಯೋತ್ಪಾದಕರನ್ನು ಮಟ್ಟ ಹಾಕಲು ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಪಾಕಿಸ್ತಾನದಿಂದ ಹಲವು ಉಗ್ರರು ಗಡಿ ದಾಟಿ ಭಾರತಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಲು ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಪಾಕಿಸ್ತಾನದ ಉಗ್ರರದ್ದೇ ಸಿಂಹ ಪಾಲು
65 ವಿದೇಶಿ ಉಗ್ರರ ಪೈಕಿ ಪಾಕಿಸ್ತಾನದ್ದೇ ಸಿಂಹ ಪಾಲು. ಜೈಶ್ ಮತ್ತು ಲಷ್ಕರ್ ಸಂಘಟನೆಗೆ ಸೇರಿದ ಸುಮಾರು 55 ಉಗ್ರರು ರಾಜ್ಯಾದ್ಯಂತ ಬೀಡುಬಿಟ್ಟಿದ್ದಾರೆ. ಇನ್ನುಳಿದ 10 ಮಂದಿ ವಿವಿಧ ಉಗ್ರ ಸಂಘಟನೆಗಳ ಚಿಕ್ಕ-ಪುಟ್ಟ ಗುಂಪಿಗೆ ಸೇರಿದವರು ಎನ್ನಲಾಗಿದೆ. ಕೆಲವು ಸ್ಥಳೀಯರು ಉಗ್ರರೊಂದಿಗೆ ಕೈಜೋಡಿಸಿ ಅವರಿಗೆ ನೆರವಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಹೀಗಾಗಿ ಅವರ ಚಲನವಲನ ಪರಿಶೀಲಿಸಲಾಗುತ್ತಿದ್ದು ಸಾಕ್ಷ್ಯಾಧಾರಗಳೊಂದಿಗೆ ರೆಡ್ ಹ್ಯಾಂಡಾಗಿ ಬಂಧಿಸಲು ಕಾರ್ಯಾಚರಣೆ ಹಮ್ಮಿಕೊಂಡಿದೆ. ವ್ಯವಸ್ಥಿತ ಜಾಲವಾಗಿ ಉಗ್ರ ಸಂಘಟನೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಅನುಮಾನ ಮೂಡಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.
ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಇಬ್ಬರು ಉಗ್ರರ ಬಂಧನ
10,000 ಅಡಿ ಎತ್ತರದಲ್ಲಿ ಸೇನಾ ನೆಲೆ
ಉಗ್ರ ಧಮನಕ್ಕೆ ಪಣ ತೊಟ್ಟಿರುವ ಭದ್ರತಾ ಪಡೆ ಜಮ್ಮು-ಕಾಶ್ಮೀರದ ದುರ್ಗಮ ಪ್ರದೇಶಗಳಲ್ಲಿ, ಅರಣ್ಯಗಳಲ್ಲಿ 80 ತಾತ್ಕಾಲಿಕ ಆಪರೇಟಿಂಗ್ ಬೇಸ್ (TOBs) ನಿರ್ಮಿಸಿದೆ. ಅದರಲ್ಲೂ 10,000 ಅಡಿ ಎತ್ತರದ ಪರ್ವತದಲ್ಲೂ ಕಣ್ಗಾವಲು ಇರಿಸಿದೆ.
ಸೇನೆ, ಸಿಆರ್ಪಿಎಫ್ ಸಿಬ್ಬಂದಿ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಈ
ನೆಲೆಗಳಲ್ಲಿ ನಿಯೋಜಿಸಲಾಗಿದೆ. ಉಗ್ರರು ಕಾಡು ಸೇರಿ ದುರ್ಗಮ ಪ್ರದೇಶಗಳಲ್ಲಿ ಅಡಗುತಾಣ ನಿರ್ಮಿಸಿಕೊಂಡಿರುವುದರಿಂದ ಅವರ ಚಟುವಟಿಕೆ ಗಮನಿಸಲು ಈ ನೆಲೆಗಳು ನೆರವಾಗಲಿವೆ.
2025ರಲ್ಲಿ ಮೊದಲ ನೆಲೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಕಾರ್ಯತಂತ್ರವನ್ನು ಜಾರಿಗೆ ತರಲಾಗಿದೆ. ಮೊದಲ ನೆಲೆಯನ್ನು 2025ರ ಜುಲೈಯಲ್ಲಿ ಶ್ರೀನಗರದ ಫಕೀರ್ ಗುಜ್ರಿ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ನಂತರ ಕಣ್ಗಾವಲು ಬಲಪಡಿಸಲು, ಸೂಕ್ಷ್ಮವಾದ ಪರ್ವತ ಪ್ರದೇಶಗಳಾದ್ಯಂತ ಇದೇ ರೀತಿಯ ನೆಲೆಗಳನ್ನು ಸ್ಥಾಪಿಸಲಾಯಿತು.
ಅರಣ್ಯ, ಪರ್ವತ, ಗುಹೆಮತ್ತು ಧೋಕ್ ಎಂದು ಕರೆಯಲ್ಪಡುವ ಮಣ್ಣು ಹಾಗೂ ಕಲ್ಲುಗಳಿಂದ ನಿರ್ಮಿಸಿದ ಸಾಂಪ್ರದಾಯಿಕ ಆಶ್ರಯ ತಾಣಗಳಲ್ಲಿ ಹಲವು ಭಯೋತ್ಪಾದಕರು ಅಡಗಿರಬಹುದು ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಈ ಧೋಕ್ಗಳನ್ನು ಸಾಮಾನ್ಯವಾಗಿ ಬೇಸಗೆಯ ಸಮಯದಲ್ಲಿ ಕುರುಬರು ಬಳಸುತ್ತಾರೆ.
ಉಗ್ರರು ಸಾಂಪ್ರದಾಯಿಕ ಸಂವಹನ ಉಪಕರಣಗಳನ್ನು ಬಳಸದೇ ಇರುವುದು ಪತ್ತೆ ಕಾರ್ಯವನ್ನು ಮತ್ತಷ್ಟು ಜಟಿಲಗೊಳಿಸಿದೆ. ಹೀಗಾಗಿ ಸ್ಥಳೀಯರ ಸಹಕಾರದೊಂದಿಗೆ ಭದ್ರತಾ ಪಡೆಗಳು ಉಗ್ರರ ಚಲನವಲನ ಪತ್ತೆಗೆ ಮುಂದಾಗಿದೆ.
ಭಯೋತ್ಪಾಕದ ಸಂಘಟನೆ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಲಷ್ಕರ್ ಉಗ್ರ ಲತೀಫ್ ಭಟ್ ಎನ್ಕೌಂಟರ್
ಸ್ಥಳೀಯ ಉಗ್ರರಿಲ್ಲ
ಇತ್ತೀಚೆಗೆ ಎನ್ಕೌಂಟರ್ ಮೂಲಕ ಉಗ್ರ ಲತೀಫ್ನನ್ನು ಹೊಡೆದುರುಳಿಸಿದ ಸೇನೆ ಜಮ್ಮು ಕಾಶ್ಮೀರದಲ್ಲಿ ಇನ್ನು ಯಾವುದೇ ಸ್ಥಳೀಯ ಉಗ್ರರಿಲ್ಲ ಎಂದು ಘೋಷಿಸಿತು. 2 ವರ್ಷಗಳ ಅಂತರದಲ್ಲಿ ಸುಮಾರು 6ಕ್ಕೂ ಹೆಚ್ಚು ಸ್ಥಳೀಯ ಉಗ್ರರು ಹತರಾಗಿದ್ದು, ನೇಮಕಾತಿ ನಡೆಯದೇ ಇರುವುದು ಇದಕ್ಕೆ ಕಾರಣ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.