ರಿಷಿಕೇಶ(ಉತ್ತರಾಖಂಡ), ನ.17: ಉತ್ತರಾಖಂಡದ ರಿಷಿಕೇಶ-ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ, ಗುಲಾರ್ ಬಳಿ ಮಂಗಳವಾರ ಬೆಳಿಗ್ಗೆ 34 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಸೇತುವೆಯಿಂದ ಸುಮಾರು 100 ಮೀಟರ್ ಕೆಳಗೆ ಹಳ್ಳವೊಂದಕ್ಕೆ ಬಿದ್ದ ಪರಿಣಾಮ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ. 'ವಿಶ್ವನಾಥ ಸೇವಾ' ಸಂಸ್ಥೆಗೆ ಸೇರಿದ ಈ ಬಸ್, ಹರಿದ್ವಾರದಿಂದ ಕರ್ಣಪ್ರಯಾಗಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ಥಳದಲ್ಲಿ ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳಗಿನ ಜಾವ ಕಂದಕಕ್ಕೆ ಬಸ್ ಬಿದ್ದ ಸದ್ದು ಕೇಳಿ ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಕಂದಕದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಮೇಲಕ್ಕೆತ್ತಿ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.
ಬಸ್ ಮುಂಜಾನೆ ಸುಮಾರು 3.30ರ ಸುಮಾರಿಗೆ ಹರಿದ್ವಾರದಿಂದ ಕರ್ಣಪ್ರಯಾಗದ ಕಡೆಗೆ ಹೊರಟಿತ್ತು. ಅಪಘಾತ ಸಂಭವಿಸಿದ ನಂತರ, ಬ್ಯಾಸಿ ಮತ್ತು ಧಲ್ವಾಲಾದಲ್ಲಿ ನಿಯೋಜನೆಗೊಂಡಿದ್ದ ರಾಜ್ಯ ವಿಪತ್ತು ಸ್ಪಂದನಾ ಪಡೆಯ (SDRF) ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡವು.
ಅಧಿಕಾರಿಗಳು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಗಾಯಗೊಂಡ ಪ್ರಯಾಣಿಕರಲ್ಲಿ ಜಾರ್ಖಂಡ್, ಬಿಹಾರ, ಉತ್ತರಾಖಂಡ, ಅಸ್ಸಾಂ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಜನರು ಸೇರಿದ್ದಾರೆ.
ವಿಡಿಯೋ ನೋಡಿ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬ್ಯಾಸಿ ಮತ್ತು ಧಲ್ವಾಲ್ ಪೋಸ್ಟ್‌ಗಳಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸ್ಥಳಕ್ಕೆ ಬಂದಿವೆ. ಕಮಾಂಡೆಂಟ್ ಅರ್ಪಣ್ ಯದುವಂಶಿ ಅವರ ನಿರ್ದೇಶನದ ಮೇರೆಗೆ ಹೆಚ್ಚುವರಿ ಎಸ್‌ಡಿಆರ್‌ಎಫ್ ಪಡೆಗಳನ್ನು ಸಹ ಸ್ಥಳಕ್ಕೆ ರವಾನಿಸಲಾಗಿದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿ ಕಂದಕದಲ್ಲಿ ಸಿಲುಕಿರುವ ಉಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತೆಹ್ರಿ ಜಿಲ್ಲಾಧಿಕಾರಿ ನಿತಿಕಾ ಖಂಡೇಲ್ವಾಲ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ಅವರು ತಕ್ಷಣವೇ ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕಂದಕದಿಂದ ಇಲ್ಲಿಯವರೆಗೆ ಸುಮಾರು 20 ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.