ಮುಂಬೈ, ಅ. 1: ಮಹಾರಾಷ್ಟ್ರದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ 8 ಮಂದಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ (Drowned). ರಾಯಗಢದ ದಿವೇಗರ್ ಸಮುದ್ರ ತೀರದಲ್ಲಿ (Diveagar Beach) ಈ ಘಟನೆ ನಡೆದಿದೆ. ʼʼಪುಣೆಯ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನೀರಿನಿಂದ ಎಲ್ಲರ ಮೃತದೇಹಗಳನ್ನು ಹೊರತೆಗೆಯಲಾಗಿದೆʼʼ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಕ್ಕಾಗಿ ಬಂದ ಇವರು ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ವಿದ್ಯಾರ್ಥಿಗಳು ಪುಣೆಯ ಆಲಂದಿಯಿಂದ ದಿವೇಗರ್ ಬೀಚ್‌ಗೆ ಬಂದಿದ್ದರು. ಶಾಲಾ ಪ್ರವಾಸದ ಭಾಗವಾಗಿ ಅವರು ಸಮುದ್ರ ತೀರಕ್ಕೆ ಆಗಮಿಸಿದ್ದರು. ಈ ವಿದ್ಯಾರ್ಥಿಗಳ ಗುಂಪು ಈಜಲು ಸಮುದ್ರಕ್ಕಿಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿರುವ ಸಾಧ್ಯತೆ ಇದೆ. ಸಮುದ್ರ ತೀರದಲ್ಲಿನ ಪ್ರಬಲ ನೀರಿನ ಸೆಳೆತವೇ ಇದಕ್ಕೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.
ರಾಯಗಢದಲ್ಲಿ 8 ವಿದ್ಯಾರ್ಥಿಗಳ ಸಾವು:
ದುರಂತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಸ್ಥಳೀಯಾಡಳಿತ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ, ಕಡಲ ತೀರದ ಉದ್ದಕ್ಕೂ ಶೋಧ ಮತ್ತು ರಕ್ಷಣಾ ಕಾರ್ಯ ಕೈಗೊಂಡರು.
ಹಬ್ಬದ ದಿನವೇ ದುರಂತ, ಕೆರೆಯಲ್ಲಿ ಮುಳುಗಿ ಮೂವರ ಸಾವು
ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಎಲ್ಲ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪುಣೆ ಜಿಲ್ಲೆಯ ಅಲಂದಿಯಲ್ಲಿರುವ ಖಾಸಗಿ ತರಬೇತಿ ತರಗತಿಯೊಂದಕ್ಕೆ ಸೇರಿದ 42 ವಿದ್ಯಾರ್ಥಿಗಳ ಗುಂಪು ಪ್ರವಾಸಕ್ಕಾಗಿ ಬಂದಿತ್ತು ಎನ್ನಲಾಗಿದೆ. ಮೃತರು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು.
ʼʼಮುಂಬೈಯಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ದಿವೇಗರ್ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪ್ರವಾಸ ಬಂದಿದ್ದ ಅವರು ಈಜಲು ಸಮುದ್ರಕ್ಕೆ ಇಳಿದಾಗ ದುರಂತ ಸಂಭವಿಸಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
25 ಹುಡುಗರು, 17 ಹುಡುಗಿಯರು ಮತ್ತು 6 ಶಿಕ್ಷಕರನ್ನೊಳಗೊಂಡ 48 ಜನರ ಗುಂಪೊಂದು ಸಂಜೆ 5:30ರ ಸುಮಾರಿಗೆ ಕಡಲತೀರಕ್ಕೆ ಪ್ರವಾಸಕ್ಕೆ ಆಗಮಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈಜಲು ಸಮುದ್ರಕ್ಕೆ ಇಳಿದ 8 ವಿದ್ಯಾರ್ಥಿಗಳು ನೀರಿನ ಆಳ ಮತ್ತು ಪ್ರವಾಹದ ವೇಗಕ್ಕೆ ಸಿಲುಕಿ ಕೊಚ್ಚಿಹೋದರು ಎಂದು ಅವರು ಹೇಳಿದ್ದಾರೆ. ತಕ್ಷಣ ಸ್ಪಂದಿಸಿದ ಭಾವು ಮಾರುತಿ ಸಾಳುಂಖೆ ಮಹಾಕಾಳಿ ವಾಟರ್ ಸ್ಪೋರ್ಟ್ಸ್‌ನ ಮಾಲಕ ಭಾವು ಸಾಳುಂಖೆ ಮತ್ತು ಅವರ ತಂಡವು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತು. ತಂಡವು ಸಮುದ್ರದಿಂದ 8 ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು.
ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ
ಮೃತರನ್ನು ತನ್ಮಯ್ ದತ್ತಾತ್ರೇ ವಾಹಿಲೆ, ಸುಮಿತ್ ಭರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸಂಕರ್, ರಾಜವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಂ ತುಕಾರಾಂ ಭಂಡ್ವಾಲ್ಕರ್ ಮತ್ತು ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.