ದೆಹಲಿ, ಆ. 15: ʼʼ10 ವರ್ಷಗಳಲ್ಲಿ ದೇಶದ ಸಾಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಾಮಾಜಿಕ ಸೌಹಾರ್ದತಗೆ ತೀವ್ರ ಸ್ವರೂಪದ ಧಕ್ಕೆಯಾಗಿದೆʼʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಳವಳ ವ್ಯಕ್ತಪಡಿಸಿದರು. 80ನೇ ಸ್ವಾತಂತ್ರ್ಯ ದಿನಾಚರಣೆಯ (80th Independence Day) ಪ್ರಯುಕ್ತ ದೇಶದ ಜನತೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂದೇಶ ಹಂಚಿಕೊಂಡಿರುವ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ ನಮನ ಸಲ್ಲಿಸಿದ್ದಾರೆ.
ʼʼ79 ವರ್ಷಗಳಲ್ಲಿ ಭಾರತವು ಅಪಾರ ಸಾಧನೆ, ಹೋರಾಟ ಮತ್ತು ಹಲವು ಸಂಕಲ್ಪಗಳೊಂದಿಗೆ ಸುದೀರ್ಘ ಹಾದಿಯನ್ನು ಕ್ರಮಿಸಿದೆ ನಿಜ. ಆದರೆ, ಒಂದು ರಾಷ್ಟ್ರವಾಗಿ ನಮ್ಮ ಅನೇಕ ಕನಸುಗಳು ಮತ್ತು ಆಶೋತ್ತರಗಳು ಇನ್ನು ಈಡೇರಬೇಕಿದೆʼʼ ಎಂದು ಅವರು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಎಕ್ಸ್ ಪೋಸ್ಟ್:
ʼʼನಮಗೆ ಸ್ವಾತಂತ್ರ್ಯ ಎಂಬುದು ಕೇವಲ ಬ್ರಿಟಿಷರ ಆಡಳಿತದಿಂದ ಸಿಕ್ಕ ಮುಕ್ತಿಯಷ್ಟೇ ಆಗಿರಲಿಲ್ಲ. ಅದು ಸಮಾನತೆ, ಗೌರವ, ನ್ಯಾಯ ಮತ್ತು ಭಯವಿಲ್ಲದೆ ಮಾತನಾಡುವ ಸ್ವಾತಂತ್ರ್ಯʼʼ ಎಂದು ಹೇಳಿದರು. ಮುಂದುವರಿದು, ʼʼಈ ಮೌಲ್ಯಗಳೇ ಭಾರತದ ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಹಾಗೂ ಪ್ರತಿಯೊಬ್ಬ ಪ್ರಜೆಯ ಭದ್ರತಗೆ ಅತ್ಯಂತ ಬಲವಾದ ರಕ್ಷಣೆʼʼ ಎಂದು ಅವರು ಅಭಿಪ್ರಾಯಪಟ್ಟರು.
ʼʼಕಳೆದ ದಶಕದಲ್ಲಿ ನಮ್ಮ ಸಾಂವಿಧಾನಿಕ ಮೌಲ್ಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸ್ಥೆಗಳು ಹಾಗೂ ಸಾಮಾಜಿಕ ಸೌಹಾರ್ದಯು ತೀವ್ರ ಸವಾಲುಗಳನ್ನು ಎದುರಿಸಿವೆʼʼ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾನತೆಗೆ ಕರೆ ನೀಡಿದ ಅವರು, ‘ʼನಮ್ಮ ಯುವಜನತೆಗೆ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಅವಕಾಶಗಳು ಸಿಗಬೇಕು. ನಮ್ಮ ರೈತರ ಕಠಿಣ ಪರಿಶ್ರಮಕ್ಕೆ ಗೌರವ ಮತ್ತು ನ್ಯಾಯ ಸಿಗಬೇಕು. ನಮ್ಮ ಮಹಿಳೆಯರಿಗೆ ಭಾರತ ಭವಿಷ್ಯವನ್ನು ರೂಪಿಸುವಲ್ಲಿ ಸಮಾನತೆ, ಸಬಲೀಕರಣ ಮತ್ತು ಸಮಾನ ಧ್ವನಿ ಸಿಗಬೇಕು. ದಲಿತರಿಗೆ, ಆದಿವಾಸಿಗಳಿಗೆ, ಒಬಿಸಿಗಳಿಗೆ ಅಲ್ಪಸಂಖ್ಯಾತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಪೂರ್ಣ ಪ್ರಮಾಣದ ಸಮಾನತೆ ಮತ್ತು ನ್ಯಾಯ ಸಿಗಬೇಕುʼʼ ಎಂದರು.
ಕೊನೆಯಲ್ಲಿ ಈ ಸ್ವಾತಂತ್ರ್ಯ ದಿನದಂದು ದೇಶದ ಅತಿದೊಡ್ಡ ಸಂಕಲ್ಪವೇ ನಿರೀಕ್ಷೆ ಮತ್ತು ಭರವಸೆಯಾಗಿರಬೇಕು ಎಂದು ಹೇಳುವ ಮೂಲಕ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಮ್ತು ಅವಕಾಶಗಳನ್ನು ಒದಗಿಸುವ ಕರೆ ನೀಡಿದರು.