ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

80th Independence Day Special: 18ನೇ ವಯಸ್ಸಿನಲ್ಲೇ ನೇಣಿಗೇರಿದ ಯುವ ಕ್ರಾಂತಿಕಾರಿ; ಕಿರಿಯ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಸಾಹಸಗಾಥೆ ಇಲ್ಲಿದೆ

Khudiram Bose: ಅದೆಷ್ಟೋ ಮಹನೀಯರ ಹೋರಾಟ ತ್ಯಾಗದ ಫಲ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ. ಶತಮಾನಗಳ ಬ್ರಿಟಿಷ್‌ ಆಡಳಿತದಿಂದ ನಲುಗಿ ಹೋದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಹಲವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ಮಹಾನ್‌ ನಾಯಕರಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಖುದಿರಾಮ್ ಬೋಸ್. 18ನೇ ವಯಸ್ಸಿನಲ್ಲಿ ನೇಣಿಗೇರಿದ ಅವರ ರೋಮಾಂಚನಕಾರಿ ಸಾಹಸಗಾಥೆ ಇಲ್ಲಿದೆ.

ಖುದಿರಾಮ್ ಬೋಸ್ (ಸಂಗ್ರಹ ಚಿತ್ರ)

ದೆಹಲಿ, ಆ. 13: ಬಹುತೇಕ ಯುವಕರು ತಮ್ಮ 18ನೇ ವಯಸ್ಸಿನಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳುವ ಧಾವಂತದಲ್ಲಿರುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಪ್ರಾಣ ತ್ಯಾಗ ಮಾಡುವವರು ಅಪರೂಪ. ಅಂತಹವರ ಸಾಲಿಗೆ ಸೇರಿದವರು ಕ್ರಾಂತಿಕಾರಿ ಹೋರಾಟಗಾರ ಖುದಿರಾಮ್ ಬೋಸ್ (Khudiram Bose). ಸದ್ಯ ದೇಶ ಸ್ವಾತಂತ್ರ್ಯೋತ್ಸವದ ಸಿದ್ಧತೆಯಲ್ಲಿದ್ದು, ಈ ಸಂದರ್ಭದಲ್ಲಿ (80th Independence Day Special) 18ನೇ ವಯಸ್ಸಿನಲ್ಲಿ ನೇಣಿಗೇರಿದ ಭಾರತದ ಅತ್ಯಂತ ಕಿರಿಯ ಕ್ರಾಂತಿಕಾರಿ ಹೋರಾಟಗಾರ ಖುದಿರಾಮ್ ಬೋಸ್ ಸಾಹಸಗಾಥೆ ಇಲ್ಲಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಇತ್ತೀಚೆಗೆ ಖುದಿರಾಮ್ ಬೋಸ್‌ ಅವರ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ‘ʼಖುದಿರಾಮ್ ಭಾರತ ಮಾತೆಯ ವೀರ ಪುತ್ರ, ಅವರ ತ್ಯಾಗ ಹಾಗೂ ದೇಶದ ಮೇಲಿನ ಅಗಾಧ ಪ್ರೀತಿ ಎಲ್ಲ ದೇಶವಾಸಿಗಳಿಗೆ ಸ್ಪೂರ್ತಿ ನೀಡುತ್ತದೆʼʼ ಎಂದು ಪೋಸ್ಟ್‌ ಹಂಚಿಕೊಂಡಿದ್ದರು.

ಯೋಗಿ ಆದಿತ್ಯನಾಥ್‌ ಎಕ್ಸ್‌ ಪೋಸ್ಟ್‌:



ಖುದಿರಾಮ್ ಬೋಸ್ 1889ರ ಡಿಸೆಂಬರ್‌ 3ರಂದು ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದರು. ತಂದೆ ಲೋಕ್ಯನಾಥ ಬೋಸ್, ತಾಯಿ ಲಕ್ಷೀಪ್ರಿಯಾ ದೇವಿ. ಈ ದಂಪತಿ ಇಬ್ಬರು ಗಂಡು ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡಿದ್ದರು. ಮತ್ತೊಬ್ಬ ಮಗ ಜನಿಸಿದಾಗ ಆ ಮಗುವನ್ನು ಕಳೆದುಕೊಳ್ಳುತ್ತೇವೆ ಎಂಬ ಆತಂಕ ಅವರಲ್ಲಿತ್ತು. ಖುದಿರಾಮ್ ಅವರ ಅಕ್ಕ ಮೂರು ಹಿಡಿ ‘ಖುದಿ’ ಅಂದರೆ ನುಚ್ಚಕ್ಕಿಯನ್ನ ಕೊಟ್ಟು ನಿನ್ನ ತಂದಿದ್ದೇವೆ ಎಂದು ಹೇಳುತ್ತಿದ್ದರು. ಹೀಗಾಗಿ ಕೂದಿರಾಮ್ ಅವರಿಗೆ ಈ ಹೆಸರು ಬಂದಿತು.

ಭಾರತದ ಅಧಿಕೃತ ರಾಷ್ಟ್ರ ಧ್ವಜ ತಯಾರಾಗುವ ಏಕೈಕ ತಾಣ ಯಾವುದು ಗೊತ್ತೆ? ಇದು ಕರ್ನಾಟಕದಲ್ಲೇ ಇದೆ!

ಖುದಿರಾಮ ಬೋಸ್ ಯಾರು?

ಖುದಿರಾಮ್ ಬೋಸ್ ಓದಿದ್ದು 9ನೇ ತರಗತಿವರೆಗೆ ಮಾತ್ರ. 15ನೇ ವಯಸ್ಸಿಗೆ ‘ಅನುಶೀಲನಾ ಸಮಿತಿ’ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸೇರಿದರು. ಆಗ ಬ್ರಿಟಿಷ್ ನ್ಯಾಯಾದೀಶ ಡೌಗ್ಲಾಸ್ ಕಿಂಗ್ಸ್‌ಫೋರ್ಡ್ ಭಾರತೀಯ ಕ್ರಾಂತಿಕಾರಿಗಳಿಗೆ ಕಠಿಣ ಶಿಕ್ಷೆ ನೀಡುತ್ತಿದ್ದ. ದೇಶ ಪ್ರೇಮ ಮೈಗೂಡಿಸಿಕೊಂಡಿದ್ದ ಖುದಿರಾಮ್ ಬೋಸ್ ಹೇಗಾದರೂ ಮಾಡಿ ಡೆಗ್ಲಸ್ ಕಿಂಗ್ಸ್‌ನನ್ನು ಕೊಲ್ಲಲೇ ಬೇಕು ಎಂದು ನಿರ್ಧರಿಸಿದರು. ಸ್ನೇಹಿತ ಪ್ರಫುಲ್ಲ ಕುಮಾರ ಚೌಕಿ ಜತೆ ಸೇರಿ ಇದಕ್ಕಾಗಿ ಯೋಜನೆ ರೂಪಿಸಿದರು.

1908ರ ಏಪ್ರಿಲ್‌ ಬಿಹಾರದ ಮುಜಫರ್ ಪುರ್‌ದಲ್ಲಿ ಕುದುರೆ ಗಾಡಿಯಲ್ಲಿ ಡೌಗ್ಲಾಸ್ ಕಿಂಗ್ಸ್‌ಫೋರ್ಡ್ ಸಂಚರಿಸುತ್ತಿದ್ದಾನೆ ಎಂದು ತಿಳಿದು ಸ್ನೇಹಿತರಿಬ್ಬರು ಭಾವಿಸಿ ಬಾಂಬ್ ಎಸೆದರು. ಆದರೆ ಗಾಡಿಯಲ್ಲಿ ಡೆಗ್ಲಸ್ ಕಿಂಗ್ಸ್‌ ಇರಲಿಲ್ಲ. ಬದಲಾಗಿ ಅದರಲ್ಲಿ ಬ್ಯಾರಿಸ್ಟರ್ ಪ್ರಿಂಗಲ್ ಕೆನಡಿಯ ಪತ್ನಿ ಹಾಗೂ ಪುತ್ರಿ ಇದ್ದರು. ಬಾಂಬ್ ದಾಳಿಯಲ್ಲಿ ಅವರಿಬ್ಬರು ಮೃತಪಟ್ಟರು.

ಖುದಿರಾಮ್ ಬೋಸ್ ಅವರನ್ನು ಬಂಧಿಸಿದ್ದು ಹೇಗೆ?

ದಾಳಿಯ ನಂತರ ಖುದಿರಾಮ್ ಹಾಗೂ ಪ್ರಫುಲ್ಲ ಕುಮಾರ ಚೌಕಿ ಅಲ್ಲಿಂದ ತಕ್ಷಣವೇ ಓಡಿ ಹೋದರು. ತಪ್ಪಿಸಿಕೊಳ್ಳುವ ಭರದಲ್ಲಿ ಅವರಿಬ್ಬರು ಬೇರೆ ಬೇರೆಯಾದರು. ಪ್ರಫುಲ್ಲ ರೈಲು ನಿಲ್ದಾಣ ತಲುಪಿದಾಗ ಪೊಲೀಸರಿಗೆ ಅನುಮಾನ ಬಂತು. ಸಿಕ್ಕಿಬೀಳುವುದು ಖಚಿತವಾದಾಗ ಅವರು ಗುಂಡು ಹಾರಿಸಿಕೊಂಡು ಹುತಾತ್ಮರಾದರು. ಖುದಿರಾಮ್ ಸುಮಾರು 30 ಕಿಲೋ ಮಿಟರ್ ನಡೆದು ಸುಸ್ತಾದಾಗ ನೀರು ಕುಡಿಯುವ ವೇಳೆ ಪೋಲಿಸರಿಗೆ ಸಿಕ್ಕಿಬಿದ್ದರು. ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೋಯ್ಯುವಾಗಾಗ ‘ವಂದೇ ಮಾತರಂ’ ಎಂಬ ಘೋಷಣೆ ಕೂಗುತ್ತಲೇ ಇದ್ದರು.

ವಿಚಾರಣೆ ನಡೆಸಿದ ಬ್ರಿಟಿಷ್‌ ಸರ್ಕಾರ 1908ರ ಆಗಸ್ಟ್‌ 11ರಂದು 18ನೇ ವಯಸ್ಸಿನ ಖುದಿರಾಮ್ ಬೋಸ್ ಅವರನ್ನು ಗಲ್ಲಿಗೇರಿಸಿತು. ‘ಏಕ್ ಬಾರ್ ಬಿದಾಯ್ ದೇ ಮಾ, ಘುರೆ ಆಶಿ’ ಎಂಬ ಹಾಡು ಈಗಲೂ ಅವರ ತ್ಯಾಗವನ್ನು ನೆನಪಿಸುತ್ತದೆ.

ಖುದಿರಾಮ್ ಬೋಸ್ ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವ ಮೂಲಕ ಹಾಗೂ ಬಲಿದಾನದಿಂದ ಭಾರತ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author