ದೆಹಲಿ, ನ. 11: ಅದು 1999ರ ಕಾಲಘಟ್ಟ. ಅಂದು ತಾವು ಎದುರಿಸಿದ ಆರಂಭಿಕ ರಾಜಕೀಯ ಜೀವನದ ಅತ್ಯಂತ ಅನಿಶ್ಚಿತ ಕ್ಷಣವೊಂದನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ. 1999ರಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಅವರು ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅಗತ್ಯ ಮ್ಯಾಜಿಕ್ ನಂಬರ್ ದೊರೆಯಲಿದೆ ಎನ್ನುವ ವಿಶ್ವಾಸ ಅವರಲ್ಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮೊದಲು ಭರವಸೆ ನೀಡಲಾಗಿದ್ದ ಬೆಂಬಲ ದೊರೆಯದೆ ಮುಜುಗರ ಅನುಭವಿಸುವಂತಾಯ್ತು ಎಂದು ತಮ್ಮ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ ಸೋನಿಯಾ ಗಾಂಧಿ ವಿವರಿಸಿದ್ದಾರೆ.
ಅಂದಿನ ಅನಿಶ್ಚಿತ ರಾಜಕೀಯ ಬೆಳವಣಿಗೆಯನ್ನು ನೆನಪಿಸಿಕೊಂಡ ಅವರು, ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದರೂ ಕೊನೆಗೆ ಅಗತ್ಯ ಮ್ಯಾಜಿಕ್ ನಂಬರ್ ದೊರೆಯದಿದ್ದ ಬಗ್ಗೆ ವಿವರಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪತನಗೊಂಡ ನಂತರ ಕಾಂಗ್ರೆಸ್ ಪರ್ಯಾಯ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ, ರಾಷ್ಟ್ರಪತಿಯನ್ನು ಭೇಟಿಯಾದ ಬಳಿಕ ಪತ್ರಕರ್ತರ ದೊಡ್ಡ ಗುಂಪನ್ನು ಎದುರಿಸಬೇಕಾದ ಒತ್ತಡದ ಬಗ್ಗೆ ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
ಎಐಎಡಿಎಂಕೆ (AIADMK) ಮುಖ್ಯಸ್ಥೆ ಜೆ. ಜಯಲಲಿತಾ ಬೆಂಬಲವನ್ನು ಹಿಂತೆಗೆದುಕೊಂಡ ನಂತರ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಕೇವಲ ಒಂದು ಮತದ ಅಂತರದಿಂದ ವಿಶ್ವಾಸಮತವನ್ನು ಕಳೆದುಕೊಂಡಿತ್ತು. ಆಗ ಅತಿದೊಡ್ಡ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪರ್ಯಾಯ ಸರ್ಕಾರವನ್ನು ರಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ಪ್ರಾದೇಶಿಕ ಪಕ್ಷಗಳು ಮತ್ತು ಎಡಪಕ್ಷಗಳೊಂದಿಗೆ ಮಾತುಕತೆ ನಡೆಸಲು ಮುಂದಾಯಿತು.
ಆರಂಭದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ 233 ಸಂಸದರ ಬೆಂಬಲವಿತ್ತು ಹಾಗೂ ಇನ್ನೂ ಹಲವರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಸೋನಿಯಾ ಬರೆದಿದ್ದಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದ್ದು, ಉಳಿದ ಸಂಸದರ ಬೆಂಬಲ ಪಡೆಯಬಹುದು ಎನ್ನುವ ವಿಶ್ವಾಸ ಅವರಲ್ಲಿತ್ತು. ಹೀಗಾಗಿ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ಮುಂದಾಗಿದ್ದರು.
ಮಾಧ್ಯಮಗಳನ್ನು ಎದುರಿಸಲು ರಾಷ್ಟ್ರಪತಿ ಭವನದ ಮುಂಭಾಗಕ್ಕೆ ನಡೆದುಹೋದ ಸಂದರ್ಭವನ್ನು ನೆನಪಿಸಿಕೊಂಡು ಹೀಗೆ ಬರೆದಿದ್ದಾರೆ: ನಾನು ಪತ್ರಕರ್ತರತ್ತ ನಡೆದುಹೋಗುತ್ತಿದ್ದಾಗ, ನನ್ನ ಎದೆ ಕುಸಿದಂತಾಯಿತು. ಅಷ್ಟೊಂದು ಸಂಖ್ಯೆಯ ಪತ್ರಕರ್ತರನ್ನು ಎದುರಿಸುತ್ತಿರುವ ಮೊದಲ ಅನುಭವ ಇದು ಎಂದಿದ್ದಾರೆ.
ಅಂದು ಆಗಿದ್ದೇನು?
ಸರ್ಕಾರ ರಚನೆಯ ಬೆಂಬಲದ ಭರವಸೆ ಅಂತಿಮವಾಗಿ ಈಡೇರಲಿಲ್ಲ ಎಂದು ಸೋನಿಯಾ ಹೇಳಿದ್ದಾರೆ. ಪ್ರಧಾನಿಯಾಗಲು ಹಲವರು ಆಕಾಂಕ್ಷಿಗಳಾಗಿದ್ದರು. ಇದರಿಂದಾಗಿ ಸರ್ಕಾರ ರಚನೆಯ ಪ್ರಯತ್ನ ವಿಫಲವಾಯಿತು ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಉರುಳಿಸಲು ತಾವು ಅತಿಯಾದ ಆತುರ ತೋರಿದ್ದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. "ನಾನು ಬಲಪಂಥೀಯ ಸರ್ಕಾರವನ್ನು ಉರುಳಿಸುವ ಏಕೈಕ ಗುರಿಯತ್ತ ಗಮನಹರಿಸಿ, ಅತಿಯಾದ ಆತುರ ತೋರಿದ್ದೆ" ಎಂದು ಅವರು ಬರೆದಿದ್ದಾರೆ.
ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಅರ್ಜುನ್ ಸಿಂಗ್ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದರು. ಅವರ ಮಾತನ್ನು ಕೇಳಬೇಕಿತ್ತು ಎಂದು ಸೋನಿಯಾ ಹೇಳಿದ್ದಾರೆ. ಆದರೆ ತಾವು ಹೆಸರನ್ನು ಬಹಿರಂಗಪಡಿಸಲಿ ಇಚ್ಛಿಸದ ಮತ್ತೊಬ್ಬ ನಾಯಕನ ಮಾತನ್ನು ಕೇಳಿದ್ದಾಗಿ ಅವರು ತಿಳಿಸಿದ್ದಾರೆ.
ವಾಜಪೇಯಿ ಸರ್ಕಾರ ಪತನಗೊಳ್ಳಲು ಕಾಂಗ್ರೆಸ್ ಕಾರಣವಾಗಿತ್ತು ಎಂಬ ಅಭಿಪ್ರಾಯವನ್ನೂ ಅವರು ತಳ್ಳಿಹಾಕಿದ್ದಾರೆ. ಆದಾಗ್ಯೂ ಸಂಖ್ಯಾಬಲದ ಕುರಿತಾದ ತಮ್ಮ ಅಂದಾಜು ತಪ್ಪಾಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಘಟನೆಯ ನಂತರ ಸೋನಿಯಾ ಮತ್ತೊಂದು ಪ್ರಮುಖ ಆಂತರಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. 1999ರ ಮೇಯಲ್ಲಿ ಶರದ್ ಪವಾರ್ ಸೇರಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೂವರು ಸದಸ್ಯರಿಂದ ಅವರಿಗೆ ಒಂದು ಪತ್ರ ಬಂತು. ವಿದೇಶಿ ಮೂಲದ ವ್ಯಕ್ತಿಯೊಬ್ಬರು ಭಾರತದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬಹುದೇ ಎಂದು ಆ ಪತ್ರದಲ್ಲಿ ಪ್ರಶ್ನಿಸಲಾಗಿತ್ತು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯೊಂದರಲ್ಲಿ ಈ ವಿಷಯ ಮತ್ತೆ ಪ್ರಸ್ತಾಪವಾಯಿತು. ಆ ಸಂಘರ್ಷದ ಸಂದರ್ಭದಲ್ಲಿ ತಮಗೆ ತೀವ್ರ ಮಾನಸಿಕ ಒತ್ತಡ ಉಂಟಾಯಿತೆಂದೂ, ಕಣ್ಣೀರು ಹಾಕುತ್ತಲೇ ಸಭೆಯಿಂದ ಹೊರನಡೆದಿದ್ದಾಗಿ ಸೋನಿಯಾ ನೆನಪಿಸಿಕೊಳ್ಳುತ್ತಾರೆ. "ನಾನು ಅಧಿಕಾರ ಮತ್ತು ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳಲು ರಾಜಕೀಯಕ್ಕೆ ಬಂದಿರಲಿಲ್ಲ" ಎಂದು ಹೇಳಿದ್ದಾರೆ.
1999ರಲ್ಲಿ ಕಾಂಗ್ರೆಸ್ ಪರ್ಯಾಯ ಸರ್ಕಾರ ರಚಿಸಲು ನಡೆಸಿದ ಪ್ರಯತ್ನ ವಿಫಲವಾದ ನಂತರ ಹೊಸದಾಗಿ ಚುನಾವಣೆ ನಡೆಯಿತು. ವಾಜಪೇಯಿ ಅವರ ನಾಯಕತ್ವದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂತು. ಇದರಲ್ಲಿ 20 ಮಿತ್ರಪಕ್ಷಗಳಿದ್ದವು ಎನ್ನುವುದು ವಿಶೇಷ.