Aatmanirbhar Bharat: ಕ್ಷಿಪಣಿ, ಶೆಲ್ ಉತ್ಪಾದನೆಗೆ ಖಾಸಗಿ ವಲಯಕ್ಕೆ ಅವಕಾಶ
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕ್ಷಿಪಣಿ, ಶೆಲ್ ಉತ್ಪಾದನೆಯ ಅವಕಾಶವನ್ನು ಖಾಸಗಿ ವಲಯಕ್ಕೆ ತೆರೆಯಲಿದೆ. ಇದರಿಂದಾಗಿ ಇನ್ನು ಮುಂದಿನ ದೀರ್ಘಾವಧಿಯ ಯುದ್ಧ ಸಂದರ್ಭಗಳಲ್ಲಿ ಭಾರತಕ್ಕೆ ಮದ್ದುಗುಂಡುಗಳ ಕೊರತೆ ಆಗುವುದಿಲ್ಲ ಎನ್ನಲಾಗುತ್ತಿದೆ.

-

ನವದೆಹಲಿ: ಕ್ಷಿಪಣಿ (Missile), ಶೆಲ್ (Shell) ಉತ್ಪಾದನೆಯನ್ನು ಇನ್ನು ಭಾರತದಲ್ಲಿ ಖಾಸಗಿ ವಲಯದಲ್ಲೂ (private sector) ಮಾಡಲಾಗುತ್ತದೆ. ಯಾಕೆಂದರೆ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ (Aatmanirbhar Bharat) ಉತ್ತೇಜನ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ಕ್ಷಿಪಣಿ, ಫಿರಂಗಿ ಶೆಲ್, ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ತಯಾರಿಸಲು ಖಾಸಗಿ ವಲಯಕ್ಕೆ ಅವಕಾಶ ತೆರೆಯಲಾಗುತ್ತಿದೆ. ಭಾರತಕ್ಕೆ ದೀರ್ಘ ವ್ಯಾಪ್ತಿಯ ಸಾಂಪ್ರದಾಯಿಕ ಕ್ಷಿಪಣಿಗಳ ಅಗತ್ಯವಿರುವುದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡಲಾಗುತ್ತಿದೆ.
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡುವುದರಿಂದ ಇನ್ನು ಮುಂದಿನ ದೀರ್ಘಾವಧಿಯ ಯುದ್ಧ ಸಂದರ್ಭಗಳಲ್ಲಿ ಭಾರತಕ್ಕೆ ಮದ್ದುಗುಂಡುಗಳ ಕೊರತೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಭಾರತದ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಸ್ಟ್ಯಾಂಡ್ ಆಫ್ ಶಸ್ತ್ರಾಸ್ತ್ರಗಳು ಮತ್ತು ದೀರ್ಘ ವ್ಯಾಪ್ತಿಯ ಸಾಂಪ್ರದಾಯಿಕ ಕ್ಷಿಪಣಿಗಳು ತೋರಿರುವ ಸಾಮರ್ಥ್ಯವು ಭವಿಷ್ಯದಲ್ಲಿ ಮತ್ತಷ್ಟು ಪ್ರಯೋಜನಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಕ್ಷಿಪಣಿ ತಯಾರಿಕೆಯನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಸ್ಫೋಟಕ, ಮದ್ದುಗುಂಡುಗಳ ತಯಾರಿಕೆಯಲ್ಲಿ ತೊಡಗಿರುವ ಖಾಸಗಿ ಘಟಕವು ಮದ್ದುಗುಂಡು ಘಟಕ ಸ್ಥಾಪನೆಗೂ ಮೊದಲು ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿ ಮುನಿಷನ್ಸ್ ಇಂಡಿಯಾ ಲಿಮಿಟೆಡ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕೆಂಬ ಕಡ್ಡಾಯ ನಿಯಮವನ್ನು ತಗೆದುಹಾಕಲು ಕಂದಾಯ ಖರೀದಿ ಕೈಪಿಡಿಗೆ ತಿದ್ದುಪಡಿ ಮಾಡಲಾಗಿದೆ ಎನ್ನಲಾಗಿದೆ.
ಈ ಮೂಲಕ ಇನ್ನು ಮುಂದೆ ಖಾಸಗಿ ವಲಯಕ್ಕೆ 105 ಎಂಎಂ, 130 ಎಂಎಂ, 150 ಎಂಎಂ ಫಿರಂಗಿ ಶೆಲ್‌ಗಳು, ಪಿನಾಕಾ ಕ್ಷಿಪಣಿಗಳು, 1000 ಪೌಂಡ್ ಬಾಂಬ್‌ಗಳು, ಮಾರ್ಟರ್ ಬಾಂಬ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಮಧ್ಯಮ ಮತ್ತು ಸಣ್ಣ ಕ್ಯಾಲಿಬರ್ ಮದ್ದುಗುಂಡುಗಳನ್ನು ತಯಾರಿಸಲು ಅನುಮತಿ ನೀಡಬಹುದಾಗಿದೆ.
ಸದ್ಯ ಭಾರತೀಯ ಸಶಸ್ತ್ರ ಪಡೆಗಳಿಗೆ ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನಂತಹ ಸಂಸ್ಥೆಗಳು ಹೆಚ್ಚಿನ ಮದ್ದುಗುಂಡುಗಳನ್ನು ಪೂರೈಸಲು ಸಾಧ್ಯವಾಗದೇ ಇರುವುದರಿಂದ ಇದನ್ನು ಖಾಸಗಿ ವಲಯಕ್ಕೆ ತೆರೆಯುವ ಉದ್ದೇಶವನ್ನು ರಕ್ಷಣಾ ಸಚಿವಾಲಯ ಹೊಂದಿದೆ. ಇದಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಪತ್ರವನ್ನೂ ಕೂಡ ಬರೆದಿದೆ ಎಂದು ವರದಿಯಾಗಿದೆ.
ಇನ್ನು ಕ್ಷಿಪಣಿ ತಯಾರಿಕೆಗೂ ಖಾಸಗಿ ವಲಯಕ್ಕೆ ಅವಕಾಶ ನೀಡುವುದಾಗಿ ಹೇಳಲಾಗುತ್ತಿದೆ. ಸದ್ಯ ಡಿಆರ್‌ಡಿಒ ಅಡಿಯಲ್ಲಿ ಬಿಡಿಎಲ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಏಕೈಕ ಕ್ಷಿಪಣಿ ತಯಾರಿ ಸಂಸ್ಥೆಯಾಗಿದೆ.
ಇದನ್ನೂ ಓದಿ: Cougn Syrup: ಮಕ್ಕಳ ಸಾವು ಹಿನ್ನೆಲೆ: ರಾಜ್ಯದಲ್ಲಿ ಅಲರ್ಟ್, ಕಾಫ್ ಸಿರಪ್ ಮಾದರಿಗಳ ಸಂಗ್ರಹ
ದೀರ್ಘವಧಿಯ ಯುದ್ಧ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮದ್ದುಗುಂಡುಗಳ ಕೊರತೆಯನ್ನು ಅನುಭವಿಸಬಾರದು ಮತ್ತು ವಿದೇಶಿ ಮಾರಾಟಗಾರರ ಮೇಲೆ ಹೆಚ್ಚು ಅವಲಂಬಿತರಾಗಬಾರದು ಎನ್ನವ ಉದ್ದೇಶದಿಂದ ರಕ್ಷಣಾ ಸಚಿವಾಲಯವು ಕ್ಷಿಪಣಿ ಮತ್ತು ಯುದ್ಧಸಾಮಗ್ರಿ ವಲಯ ಎರಡನ್ನೂ ಖಾಸಗಿ ವಲಯಕ್ಕೆ ಮುಕ್ತಗೊಳಿಸುತ್ತಿದೆ ಎನ್ನಲಾಗಿದೆ.