ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಜನರಲ್ ಆಸ್ಪತ್ರೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ಘಟಕದ ಅಧ್ಯಕ್ಷ ಪವನ್ ಖೇರಾ ಮತ್ತಿತರರು ಶನಿವಾರ ಸಂಜೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ನಂತರ ವಿಮಾನ ಪತನಗೊಂಡ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
35-40 ಜನರ ಸ್ಥಿತಿ ಗಂಭೀರ
ಆಸ್ಪತ್ರೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ʼವಿಮಾನ ದುರಂತದಲ್ಲಿ ಗಾಯಗೊಂಡಿರುವವರ ಪೈಕಿ ಕೆಲವರನ್ನು ಭೇಟಿ ಮಾಡಿದೆವು. ಉಳಿದವರು ತೀರಾ ಸುಟ್ಟ ಪರಿಸ್ಥಿತಿಯಲ್ಲಿರುವ ಕಾರಣ, ಸೂಕ್ಷ್ಮ ಪರಿಸ್ಥಿತಿಯಲ್ಲಿ ಅವರನ್ನು ಭೇಟಿ ಮಾಡುವುದು ಬೇಡ ಎಂಬ ಸಲಹೆಯಿಂದಾಗಿ ಭೇಟಿ ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಗಾಯಾಳುಗಳ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದರುʼ ಎಂದು ಮಾಹಿತಿ ನೀಡಿದರು.
ಗಾಯಾಳುಗಳ ಪರಿಸ್ಥಿತಿ ಹೇಗಿದೆ ಎಂದು ಕೇಳಿದಾಗ, ʼನಾವು ಭೇಟಿ ಮಾಡಿದ ಕೆಲವರು ಚೇತರಿಕೆ ಹಂತದಲ್ಲಿದ್ದಾರೆ. ಸುಟ್ಟ ಗಾಯಾಳುಗಳ ಪೈಕಿ ಸುಮಾರು 35- 40 ಜನರ ಪರಿಸ್ಥಿತಿ ಗಂಭೀರವಾಗಿದೆʼ ಎಂದು ಪರಿಸ್ಥಿತಿ ವಿವರಿಸಿದರು.
ಈ ಸುದ್ದಿಯನ್ನೂ ಓದಿ | ವಿಮಾನ ದುರಂತ: ತಾಯಿಗಾಗಿ ಟಿಫನ್ ತಂದಿದ್ದ ಬಾಲಕ ಸಜೀವ ದಹನ; ಮಗನನ್ನು ಉಳಿಸಲು ಯತ್ನಿಸಿದ ತಾಯಿಯ ವಿಡಿಯೊ ವೈರಲ್