ನವದೆಹಲಿ, ಏ.8: ಆರೆಸ್ಸೆಸ್, ಬಿಜೆಪಿ ವಿಷ ಸರ್ಪ. ಅದನ್ನು ಕೊಲ್ಲಿ ಎಂದೆಲ್ಲಾ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಭಾಷಣಗೈದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಧ್ಯೇಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ದೆಹಲಿಯಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ಖರ್ಗೆಯವರು ಹಿರಿಯ ರಾಜಕಾರಣಿಯಾಗಿ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಅತ್ಯಂತ ಬಾಲಿಶತನದಿಂದ ಕೂಡಿದೆ ಎಂದು ಖಂಡಿಸಿದರು.
ಗುಜರಾತಿಗರು ಅನಕ್ಷರಸ್ಥರು, ಆರೆಸ್ಸೆಸ್, ಬಿಜೆಪಿಯವರು ವಿಷ ಸರ್ಪವಿದ್ದಂತೆ ಅವರನ್ನು ಕೊಲ್ಲಿ ಎಂದೆಲ್ಲಾ ಪ್ರಚೋದನಕಾರಿ ಭಾಷಣ ಮಾಡಿರುವುದು ಪ್ರಜಾಪ್ರಭುತ್ವದ ದುರಂತ. ಒಬ್ಬ ಸಭ್ಯ ಮತ್ತು ಹಿರಿಯ ನಾಯಕರಿಂದ ಬರುವಂಥ ಮಾತಲ್ಲ ಇದು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು ಜೋಶಿ.
ರಾಹುಲ್ ಗಾಂಧಿ ಸಹವಾಸದಿಂದ ಹೀಗೆ... ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಕಾಲೇಜು ಕ್ಯಾಂಪಸ್ ದಿನಗಳಿಂದಲೂ ಬಲ್ಲೆ. ಹೀಗೆಲ್ಲಾ ವರ್ತಿಸಿದವರಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸಹವಾಸದಿಂದ ಹೀಗೆಲ್ಲಾ ಅಪ್ರಬುದ್ಧ, ಅಸಮಂಜಸ, ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.
ರಾಹುಲ್ ಗಾಂಧಿ ಗಂಭೀರ ರಾಜಕಾರಣಿಯಲ್ಲ. ಅವರೊಂದಿಗೆ ಬೆರೆತು ಖರ್ಗೆ ಅವರೂ ರಾಹುಲ್ ರಂತೆ ವರ್ತಿಸುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಹೇಳಿದ ಜೋಶಿ, ರಾಜಕೀಯದಲ್ಲಿ ಸೈದ್ಧಾಂತಿಕ ವಿರೋಧವಿರಬೇಕೆ ಹೊರತು ವೈಯಕ್ತಿಕ ದ್ವೇಷವಾಗಲಿ, ಹಿಂಸೆಗೆ ಪ್ರಚೋದನೆಯಾಗಲಿ ಇರಬಾರದು ಎಂದರು.
ಕೆಳಮಟ್ಟದ ರಾಜಕೀಯ
ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ, ವಿಪಕ್ಷದ ಒಬ್ಬ ಹಿರಿಯ ನಾಯಕರಾಗಿ ಹತ್ಯೆಗೆ ಕರೆ ನೀಡುವ ಮಟ್ಟಕ್ಕೆ ಇಳಿದಿರುವುದು ಕೆಳಮಟ್ಟದ ರಾಜಕೀಯವನ್ನು ತೋರಿಸುತ್ತದೆ. ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಮೂಡಿಸುವುದು ಕಾಂಗ್ರೆಸ್‌ನ ಹಳೆಯ ಚಾಳಿ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಖರ್ಗೆಯವರ ಇತ್ತೀಚಿನ ಮಾತುಗಳಲ್ಲಿ ಹಿರಿತನವಿಲ್ಲ, ಬದಲಾಗಿ ದ್ವೇಷ ತುಂಬಿದೆ. ದೇಶದ ಹಿತಾಸಕ್ತಿಗಾಗಿ ದುಡಿಯುತ್ತಿರುವ ಆರ್‌ಎಸ್ಎಸ್ ಮತ್ತು ಬಿಜೆಪಿ ವಿಚಾರಧಾರೆಗಳನ್ನು ಎದುರಿಸಲು ಶಕ್ತಿ ಇಲ್ಲದೆ ಖರ್ಗೆಯವರು ಹೀಗೆ ಹಿಂಸೆಯ ಮಾರ್ಗ ಅನುಸರಿಸಲು ಪ್ರಚೋದನೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.
ಕಾಂಗ್ರೆಸ್ಸಿಗೆ ಎಲ್ಲಿ ವೋಟ್ ಬೀಳುವುದಿಲ್ಲವೋ ಆ ಕ್ಷೇತ್ರದ ಮತದಾರರು ಅನಕ್ಷರಸ್ಥರಾಗುತ್ತಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಅವರಂಥ ಮಹನೀಯರನ್ನು ನೀಡಿದ ಗುಜರಾತ್‌ನ ಜನರನ್ನು ಅನಕ್ಷರಸ್ಥರು ಎಂದು ಖರ್ಗೆ ಜರಿದಿದ್ದಾರೆ. ಹಾಗಾದರೆ ಉತ್ತರ ಪ್ರದೇಶ, ಹರಿಯಾಣ, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದ ಜನರೂ ಅನಕ್ಷರಸ್ಥರೇ? ಉತ್ತರಿಸಲಿ ಎಂದು ಹೇಳಿದರು.
Hubballi Love Jihad case: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣದ ಸಮಗ್ರ ತನಿಖೆಗೆ ಪ್ರಲ್ಹಾದ್ ಜೋಶಿ ಆಗ್ರಹ
ಸೋಲುವ ಭೀತಿಯಲ್ಲಿ ವಿವಾದ ಹೇಳಿಕೆ
ಕಾಂಗ್ರೆಸ್ ಇಂತಹ ಹೇಳಿಕೆ ನೀಡುತ್ತ ವಿವಿಧ ಸಮುದಾಯಗಳ ನಡುವೆ ವಿಷ ಬಿತ್ತುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆ ಹಿಂಸೆಗೆ ಪ್ರಚೋದನೆ ನೀಡುವುದು ಅಕ್ಷಮ್ಯ ಅಪರಾಧ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ವಿವಾದಾತ್ಮಕ ಹೇಳಿಕೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.