ನವದೆಹಲಿ, ನ. 16: ಭಾರತದ ರಕ್ಷಣಾ ವಲಯಕ್ಕೆ ಕೇವಲ ಗಡಿ ಭದ್ರತಾ ಸವಾಲುಗಳು ಮಾತ್ರವಲ್ಲದೆ, ಡಿಜಿಟಲ್ ಯುಗದಲ್ಲಿ ಹನಿ ಟ್ರ್ಯಾಪ್, ಸೈಬರ್ ಬೇಹುಗಾರಿಕೆ, ಆರ್ಥಿಕ ಆಮಿಷಗಳು ಮತ್ತು ಆಂತರಿಕ ಬೆದರಿಕೆಗಳ ಅಪಾಯಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಪ್ ಮಾರ್ಷಲ್ (AIR) ಅಶುತೋಷ ದೀಕ್ಷಿತ್ ಎಚ್ಚರಿಕೆ ನೀಡಿದ್ದಾರೆ. ಸೈಬರ್, ಹನಿ ಟ್ರ್ಯಾಪ್ಗಳು ಮತ್ತು ಆಂತರಿಕ ಬೆದರಿಕೆಗಳು ಸೇರಿ ವಿವಿಧ ಮಾಧ್ಯಮಗಳ ಮೂಲಕ ಭಾರತದ ರಕ್ಷಣಾ ವಲಯವು ಬೇಹುಗಾರಿಕೆಯ ಅಪಾಯವನ್ನು ಎದುರಿಸುತ್ತಿದೆ ಎಂದು ಹೇಳಿದರು. ಈ ಸಮಸ್ಯೆಯು ಕೇವಲ ಹನಿ ಟ್ರ್ಯಾಪ್ಗಳಿಗಷ್ಟೇ ಸೀಮಿತವಾಗಿಲ್ಲದೆ, ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ತಾಂತ್ರಿಕ ಭದ್ರತಾ ಕ್ರಮಗಳು ಹಾಗೂ ಸಾಂಸ್ಥಿಕ ಕ್ರಮಗಳು ಎರಡೂ ಅತ್ಯಗತ್ಯವಾಗಿವೆ ಎಂದು ಅವರು ತಿಳಿಸಿದರು.
ನವದೆಹಲಿಯಲ್ಲಿ ನಡೆದ 'ಎಎನ್ಐ ರಾಷ್ಟ್ರೀಯ ಭದ್ರತಾ ಶೃಂಗಸಭೆ 3.0' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್ ಯುಗದಲ್ಲಿ ರಕ್ಷಣಾ ರಂಗ ಎದುರಿಸುತ್ತಿರುವ ನಾನಾ ರೀತಿಯ ಸವಾಲುಗಳು ಮತ್ತು ಆಂತರಿಕ ಬೆದರಿಕೆಗಳ ಕುರಿತು ವಿಸ್ತೃತವಾಗಿ ವಿವರಿಸಿದರು. ದೇಶದ ರಕ್ಷಣಾ ರಹಸ್ಯಗಳನ್ನು ಕದಿಯಲು ಮತ್ತು ಸಿಬ್ಬಂದಿಯನ್ನು ಗುರಿಯಾಗಿಸಲು ವಿದೇಶಿ ಗುಪ್ತಚರ ಸಂಸ್ಥೆಗಳು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿವೆ ಎಂದು ತಿಳಿಸಿದರು.
ಬೇಹುಗಾರಿಕೆ ತಂತ್ರದ ಬಗ್ಗೆ ಅಶುತೋಷ ದೀಕ್ಷಿತ್ ಎಚ್ಚರಿಕೆ:
ಹನಿ ಟ್ರ್ಯಾಪ್ ಒಂದು ಭಾಗ ಮಾತ್ರ
ವಿದೇಶಿ ಶಕ್ತಿಗಳು ಮತ್ತು ವಿರೋಧಿ ದೇಶಗಳ ಗುಪ್ತಚರ ಸಂಸ್ಥೆಗಳು ರಕ್ಷಣಾ ಸಿಬ್ಬಂದಿಯನ್ನು ಬಲೆಗೆ ಬೀಳಿಸಲು ಬಳಸುವ ತಂತ್ರಗಳಲ್ಲಿ 'ಹನಿ ಟ್ರ್ಯಾಪ್' ಎಂಬುದು ಕೇವಲ ಒಂದು ಸಣ್ಣ ಭಾಗವಷ್ಟೇ ಎಂದು ವಾಯುಪಡೆ ಮುಖ್ಯಸ್ಥರು ಸ್ಪಷ್ಟಪಡಿಸಿದರು. ಇಂದಿನ ದಿನಗಳಲ್ಲಿ ಸೈಬರ್ ಮಾಧ್ಯಮಗಳ ಮೂಲಕ ಬೇಹುಗಾರಿಕೆ ನಡೆಸಲಾಗುತ್ತಿದ್ದು, ಇದರೊಂದಿಗೆ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ (MLM) ಮತ್ತು ಅಕ್ರಮ ಸಾಲದ ಆಪರೇಷನ್ಗಳಂತಹ ಆರ್ಥಿಕ ಆಮಿಷಗಳನ್ನೂ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಸಶಸ್ತ್ರ ಪಡೆಗಳ ಜತೆಗೆ ಸರ್ಕಾರಿ ರಕ್ಷಣಾ ಪ್ರಯೋಗಾಲಯಗಳು ಹಾಗೂ ಖಾಸಗಿ ರಕ್ಷಣಾ ಗುತ್ತಿಗೆದಾರರು ಮತ್ತು ಸಿಬ್ಬಂದಿ ಈ ವಿದೇಶಿ ಜಾಲಗಳ ಗುರಿಯಾಗುತ್ತಿದ್ದಾರೆ ಎಂದರು.
ಬೂದಿ ಮುಚ್ಚಿದ ಕೆಂಡ ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ನಾಗಾ ಸಮುದಾಯದ ನಾಲ್ವರ ಹತ್ಯೆ
ಗುರಿಯಾಗಿರುವ ಪ್ರಮುಖ ವಲಯಗಳು
ಕೇವಲ ಸಶಸ್ತ್ರ ಪಡೆಗಳ ಯೋಧರು ಅಥವಾ ಅಧಿಕಾರಿಗಳು ಮಾತ್ರವಲ್ಲದೆ, ಸರ್ಕಾರಿ ರಕ್ಷಣಾ ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಖಾಸಗಿ ರಕ್ಷಣಾ ಗುತ್ತಿಗೆದಾರರು ಕೂಡ ಈ ವಿದೇಶಿ ಗುಪ್ತಚರ ಜಾಲಗಳ ಪ್ರಮುಖ ಗುರಿಯಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತೀಯ ರಕ್ಷಣಾ ವ್ಯವಸ್ಥೆಯು ಈ ಎಲ್ಲ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸೈಬರ್ ದಾಳಿಗಳು ಮತ್ತು ಒಳಭಾಗದಿಂದ ಆಗಬಹುದಾದ ಸಂಭಾವ್ಯ ಅಪಾಯಗಳನ್ನು ತಡೆಯಲು ಕಟ್ಟುನಿಟ್ಟಾದ ತಾಂತ್ರಿಕ ಹಾಗೂ ಸಾಂಸ್ಥಿಕ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ದೇಶದ ಪ್ರಮುಖ ರಕ್ಷಣಾ ಸಂವಹನ ಜಾಲಗಳು ಸಾರ್ವಜನಿಕ ಇಂಟರ್ನೆಟ್ ಸಂಪರ್ಕದಿಂದ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ತಿಳಿಸಿದ ಅವರು, ರಕ್ಷಣಾ ವ್ಯವಸ್ಥೆಯ ಪ್ರತಿ ಚಟುವಟಿಕೆಯ ಮೇಲೂ ಹದ್ದಿನ ಕಣ್ಣು ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.