ದಿಸ್‌ಪುರ, ಮಾ. 5: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಅಸ್ಸಾಂನಲ್ಲಿ ವಾಯು ಪಡೆಯ ಸುಖೋಯ್ ಎಸ್‌ಯು 30 MKI (Sukhoi Su-30 MKI) ಫೈಟರ್ ಜೆಟ್ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದ್ದಕ್ಕಿದ್ದಂತೆ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ 30 MKI ಜೆಟ್‌ನ ರಾಡಾರ್ ಸಂಪರ್ಕದಿಂದ ಕಣ್ಮರೆಯಾಗಿದೆ ಎಂದು ಮೂಲಗಳು ತಿಳಿಸಿವೆ. ʼʼಅಸ್ಸಾಂನ ಜೋರ್ಹತ್‌ನಿಂದ ಹೊರಟಿದ್ದ ಜೆಟ್‌ನ ಸಂಪರ್ಕ ಸಂಜೆ 7.42ರ ಸುಮಾರಿಗೆ ಕಡಿತಗೊಂಡಿತುʼʼ ಎಂದು ವಾಯು ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೆಟ್ ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಲಾಗಿದೆ.
ಭಾರತೀಯ ವಾಯು ಪಡೆಯ ಅತಿ ಮುಖ್ಯ ಯುದ್ಧ ವಿಮಾನ ಎನಿಸಿಕೊಂಡಿರುವ Su-30 MKI ಥ್ರಸ್ಟ್ ವೆಕ್ಟರಿಂಗ್ ಮತ್ತು ಸುಧಾರಿತ ಏವಿಯಾನಿಕ್ಸ್ ಒಳಗೊಂಡಿದೆ. Su-30 MKI ವ್ಯಾಪಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ದೀರ್ಘ-ಶ್ರೇಣಿಯ, ಗಾಳಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ಬ್ರಹ್ಮೋಸ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಲು ಸಫಲವಾಗಿದೆ.
ವಾಯು ಪಡೆಯ ಎಕ್ಸ್ ಪೋಸ್ಟ್:
ಸುಮಾರು ಎರಡು ದಶಕಗಳ ಹಿಂದೆ ಅವಳಿ-ಎಂಜಿನ್‌ನ Su-30 MKI ಅನ್ನು ವಾಯು ಪಡೆಗೆ ಪರಿಚಯಿಸಲಾಯಿತು. ಪ್ರಸ್ತುತ ಈ ರೀತಿಯ 272 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಈ Su-30 MKI ಅನ್ನು ಮೊದಲು ಅಭಿವೃದ್ಧಿಪಡಿಸಿದ್ದು ರಷ್ಯಾ.
ವಿಶೇಷತೆ
ಸುಖೋಯ್ ಎಸ್‌ಯು 30 MKI 2 ಆಸನಗಳ ಯುದ್ಧ ವಿಮಾನವಾಗಿದ್ದು, ಭಾರತ ಮತ್ತು ರಷ್ಯಾ ರಕ್ಷಣಾ ಒಪ್ಪಂದದ ಭಾಗವಾಗಿ ನಿರ್ಮಿಸಲಾಗುತ್ತಿದೆ. ಭಾರತೀಯ ವಾಯುಪಡೆಗಾಗಿ ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ (HAL) ದೇಶದಲ್ಲೇ ನಿರ್ಮಿಸುತ್ತಿದೆ. ಇದು ಎಲ್ಲ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ ಜತೆಗೆ ದೀರ್ಘ ಶ್ರೇಣಿಯ ಯುದ್ಧ ವಿಮಾನವಾಗಿದೆ.
2017ರಲ್ಲಿಯೂ ಅಸ್ಸಾಂನಲ್ಲಿ ಸುಖೋಯ್ ಎಸ್‌ಯು 30 ಯುದ್ಧ ವಿಮಾನ ನಾಪತ್ತೆಯಾಗಿತ್ತು. ನಾಪತ್ತೆಯಾಗಿ 3 ದಿನಗಳ ಬಳಿಕ ತೇಜ್‌ಪುರದಿಂದ ಸುಮಾರು 60 ಕಿ.ಮೀ. ದೂರದ ದಟ್ಟ ಕಾಡಿನಲ್ಲಿ ಈ ಯುದ್ಧ ವಿಮಾನದ ಅವಶೇಷ ಪತ್ತೆಯಾಗಿತ್ತು.
2024ರ ಜೂನ್‌ನಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸುಖೋಯ್ ಎಸ್‌ಯು 30 MKI ನಾಪತ್ತೆಯಾಗಿತ್ತು. ಬಳಿಕ ವಿಮಾನವು ನಿಫಾದ್ ತಹಸಿಲ್‌ನ ಶಿರಸ್ಗಾಂವ್ ಗ್ರಾಮದ ಬಳಿ ಪತನಗೊಂಡಿತ್ತು. ಅದೃಷ್ಟವಶಾತ್ ಪೈಲಟ್ ಮತ್ತು ಕೋ-ಪೈಲಟ್ ಪಾರಾಗಿದ್ದರು.