ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್‌ ಗುಂಡು ಹಾರಿಸಲು ಅಮಿತ್‌ ಶಾ ಆದೇಶ ನೀಡಿದ್ದರುʼʼ: ಪುನರುಚ್ಚರಿಸಿದ ರಾಹುಲ್‌ ಗಾಂಧಿ, ಕ್ಷಮೆಯಾಚಿಸಲು ನಕಾರ

Rahul Gandhi: ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಗೃಹ ಸಚಿವ ಅಮಿತ್‌ ಶಾ ಆದೇಶ ನೀಡಿದ್ದರು ಎಂದು ರಾಹುಲ್‌ ಗಾಂಧಿ ಪುನರುಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ, ಆರ್‌ಎಸ್‌ಎಸ್‌ ಕ್ಷಮೆ ಕೋರಲು ನಿರಾಕರಿಸಿದ್ದಾರೆ.

ರಾಹುಲ್‌ ಗಾಂಧಿ (ಸಾಂದರ್ಭಿಕ ಚಿತ್ರ)

ದೆಹಲಿ, ಜು. 29: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಇದೀಗ ಸಂಸತ್‌ನಲ್ಲೂ ಪ್ರತಿಧ್ವನಿಸತೊಡಗಿದೆ. ಈಗಾಗಲೇ ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಯನ್ನು ಅಂಗೀಕರಿಸಲಾಗಿದ್ದರೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದ ನಿಂತಿಲ್ಲ. ಈ ಮಸೂದೆ ಚರ್ಚೆಯ ವೇಳೆ ಲೋಕಸಭೆಯಲ್ಲಿ ಬುಧವಾರ (ಜುಲೈ 29) ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi), ವಿದ್ಯಾರ್ಥಿಗಳ ವಿರುದ್ಧ ಬಲ ಪ್ರಯೋಗಕ್ಕೆ ಪೊಲೀಸರಿಗೆ ಗೃಹ ಸಚಿವ ಅಮಿತ್‌ ಶಾ (Amit Shah) ಅಧಿಕಾರ ನೀಡಿದ್ದರು ಎಂದು ಆರೋಪಿಸಿದ್ದರು. ಈ ಹೇಳಿಕೆಯನ್ನು ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ʼʼನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್‌ ಮಂತರನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಶೂಟ್‌ ಮಾಡಲು ಅಮಿತ್‌ ಶಾ ಆದೇಶ ಹೊರಡಿಸಿದ್ದರು. ದೇಶದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಅವರು ಸೂಚಿಸಿದ್ದರುʼʼ ಎಂದು ರಾಹುಲ್‌ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಕ್ಷಮೆಯಾಚಿಸಲು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮಧ್ಯ ಪ್ರವೇಶಿಸಿ, ಸೂಕ್ತ ದಾಖಲೆ ಇಲ್ಲದೆ ಸುಳ್ಳು ಆರೋಪ ಹೊರಿಸಬಾರದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಸುದ್ದಿಗೋ‍ಷ್ಠಿ ನಡೆಸಿದರು.

ರಾಹುಲ್‌ ಗಾಂಧಿ ಆರೋಪ:



ರಾಹುಲ್‌ ಗಾಂಧಿ ಹೇಳಿದ್ದೇನು?

ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಸಂಸದ ರಾಹುಲ್‌ ಗಾಂಧಿ, ʼʼಕ್ಷಮೆಯಾಚಿಸಿದರೆ ಭಾಷಣ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಬಳಿ ಎಂದಿಗೂ ಕ್ಷಮೆಯಾಚಿಸುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು. ʼʼವಿದ್ಯಾರ್ಥಿಗಳ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಆದರೆ ಅನೇಕ ಬಾರಿ ರಾಜನಾಥ್‌ ಸಿಂಗ್‌ ಮತ್ತು ಕಿರಣ್‌ ರಿಜಿಜು ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಕ್ಷಮೆಯಾಚಿಸಿದರೆ ಭಾಷಣ ಮುಂದುವರಿಸಬಹುದು ಎಂದು ಷರತ್ತು ವಿಧಿಸಿದರು. ಆದರೆ ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಲ್ಲಿ ಕ್ಷಮೆ ಕೋರುವುದಿಲ್ಲʼʼ ಎಂದರು.

ರಾಹುಲ್ ಗಾಂಧಿ ಹೇಳಿಕೆಗೆ ಲೋಕಸಭೆಯಲ್ಲಿ ಕೋಲಾಹಲ; ಆಡಳಿತ ಪಕ್ಷದಿಂದ ತೀವ್ರ ವಿರೋಧ

ಪ್ರತಿಪಕ್ಷದ ನಾಯಕನಾಗಿ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಪ್ರಸ್ತಾವಿಸುವುದು ತಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿಚಾರದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಕ್ರಮವು ಸ್ವೀಕಾರಾರ್ಹವಲ್ಲ ಎಂದೂ ಹೇಳಿದರು. ಹೋರಾಟಗಾರರ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಯಿತು ಮತ್ತು ಓರ್ವ ವಿದ್ಯಾರ್ಥಿಯ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಆರೋಪಿಸಿದರು.

"ನಾನು ಏಮ್ಸ್ ವೈದ್ಯಕೀಯ ಪ್ರಮಾಣಪತ್ರವನ್ನು ನೋಡಿದ್ದೇನೆ. ಅದರಲ್ಲಿ ಅವನಿಗೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂಬುದು ದೃಢವಾಗಿದೆ. ಪ್ರತಿಭಟನಾಕಾರರ ಮೇಲೆ, ಅದರಲ್ಲೂ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ವಿರುದ್ಧವೂ ಕ್ರಮ ಕೈಗೊಳ್ಳುವಾಗ ಪೊಲೀಸರು ಶಾಕ್ ಲಾಠಿ ಮತ್ತು ಮೊಳೆಗಳಿಂದ ಮಾಡಿದ ಲಾಠಿ ಬಳಸಿದ್ದಾರೆ. ಸಂಸತ್ ಭವನದಲ್ಲಿದ್ದಾಗ ಅಮಿತ್ ಶಾ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡುವುದನ್ನು ನಾನು ನೋಡಿದ್ದೇನೆ" ಎಂದು ಅವರು ಆರೋಪಿಸಿದರು.

ಪ್ರಲ್ಹಾದ ಜೋಶಿ ವಿರುದ್ಧ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ

ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಹೇಳಿದ್ದೇನು?

ಲೋಕಸಭೆಯಲ್ಲಿ ರಾಹುಲ್‌ ಗಾಂಧಿ, "ಶಿಕ್ಷಣ ಸಚಿವಾಲಯವನ್ನು ಸಚಿವರು ನಡೆಸುತ್ತಿಲ್ಲ, ಆರ್‌ಎಸ್‌ಎಸ್ ನಡೆಸುತ್ತಿದೆ. ವಿದ್ಯಾರ್ಥಿಗಳು ಜ್ಞಾನ ಮತ್ತು ಸತ್ಯವನ್ನು ಅರಿಯದಂತೆ ತಡೆಯಲಾಗುತ್ತಿದೆ. ತಮ್ಮದೇ ಇತಿಹಾಸದ ಕಲ್ಪನೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ" ಎಂದು ಹೇಳಿದ್ದರು. ವಿದ್ಯಾರ್ಥಿಗಳ ಮೇಲೆ ನಡೆದ ಬಲಪ್ರಯೋಗಕ್ಕೆ ಅನುಮತಿ ನೀಡುವ ಅಧಿಕಾರ ಗೃಹ ಸಚಿವರಿಗಷ್ಟೇ ಇದೆ ಎಂದು ಪುನರುಚ್ಚರಿಸಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author