ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಕಾರು ಸ್ಫೋಟ ಪ್ರಕರಣ; ಇಬ್ಬರ ಬಂಧನ: ಆಸ್ಪತ್ರೆಗೆ ಅಮಿತ್‌ ಶಾ ಭೇಟಿ

ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೆ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಜನ ನಿಬಿಡ ಪ್ರದೇಶದಲ್ಲಿ ಈ ಸ್ಫೋಟ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಭಯೋತ್ಪಾದಕರ ಕೃತ್ಯದಂತೆ ಕಂಡು ಬಂದಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದರು.

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿ ಕಾರು ಸ್ಫೋಟದಿಂದ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದ ಅಮಿತ್‌ ಶಾ.

ದೆಹಲಿ, ನ. 10: ಸೋಮವಾರ (ನವೆಂಬರ್‌ 10) ಸಂಜೆ ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೆ ದೇಶವೇ ಬೆಚ್ಚಿ ಬಿದ್ದಿದ್ದು, 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ (Delhi Blast). ಜನ ನಿಬಿಡ ಪ್ರದೇಶದಲ್ಲಿ ಈ ಸ್ಫೋಟ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಭಯೋತ್ಪಾದಕರ ಕೃತ್ಯದಂತೆ ಕಂಡು ಬಂದಿದೆ. ಅಧಿಕಾರಿಗಳು ಕೂಡ ಇದನ್ನೇ ಶಂಕಿಸಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ (LNJP Hospital) ಭೇಟಿ ನೀಡಿದರು.

ಗಾಯಾಳುಗಳಿಗೆ ಧೈರ್ಯ ತುಂಬಿದ ಅಮಿತ್‌ ಶಾ ಅವರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಅವರೊಂದಿಗೆ ಪೊಲೀಸ್‌ ಕಮಿಷನರ್‌ ಸತೀಶ್‌ ಗೋಲ್ಚ, ಆರೋಗ್ಯ ಸಚಿವ ಪಂಕಜ್‌ ಕುಮಾರ್‌ ಸಿಂಗ್‌ ಇದ್ದರು. ಗಾಯಾಳುಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಅಮಿತ್‌ ಶಾ ಸೂಚಿಸಿದರು. ಸದ್ಯ ದೆಹಲಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ ಅಮಿತ್‌ ಶಾ:



ಈ ಸುದ್ದಿಯನ್ನೂ ಓದಿ: ದೆಹಲಿ ಕಾರು ಸ್ಫೋಟ; ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ-ಗೃಹ ಸಚಿವ ಅಮಿತ್‌ ಶಾ

ಅಮಿತ್‌ ಶಾ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ಅಮಿತ್‌ ಶಾ ವಿವಿಧ ತನಿಖಾ ಸಂಸ್ಥೆಗಳು ಘಟನೆಗೆ ಸಂಬಂಧಿಸಿ ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸುತ್ತಿವೆ ಎಂದರು. ʼʼಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೇ ಈ ಸ್ಫೋಟದಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕೆಲವು ಪಾದಚಾರಿಗಳು ಗಾಯಗೊಂಡಿದ್ದಾರೆ, ಹಲವು ವಾಹನಗಳು ಹಾನಿಗೊಳಗಾಗಿವೆʼʼ ಎಂದು ಹೇಳಿದರು.

ʼʼಸ್ಫೋಟದ ಮಾಹಿತಿ ಬಂದ ಹತ್ತೇ ನಿಮಿಷಗಳಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್‌ ಮತ್ತು ದೆಹಲಿ ಸ್ಪೆಷಲ್‌ ಸೆಲ್‌ನ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ. ಅಧಿಕಾರಿಗಳೊಂದಿಗೆ ನಾನು ಮಾತನಾಡಿದ್ದೇನೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳೂ ಸ್ಥಳಕ್ಕೆ ಆಗಮಿಸಿವೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿಯೂ ತನಿಖೆ ನಡೆಯಲಿದೆʼʼ ಎಂದು ವಿವರಿಸಿದರು.

ಇಬ್ಬರ ಬಂಧನ

ಘಟನೆಗೆ ಸಂಬಂಧಿಸಿದಂತೆ ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ಸಲ್ಮಾನ್ ಮತ್ತು ದೇವೇಂದರ್ ಎಂದು ಗುರುತಿಸಲಾದ ಇವರು ಸ್ಫೋಟಗೊಂಡ ಹುಂಡೈ ಐ20 ಕಾರಿನ ಮಾಲೀಕರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟಗೊಂಡ ಕಾರನ್ನು ಹರಿಯಾಣದ ನಿವಾಸಿ ಸಲ್ಮಾನ್‌ ಹೆಸರಿನಲ್ಲಿ ನೋಂದಾಯಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಸಲ್ಮಾನ್‌ ಸುಮಾರು ಒಂದೂವರೆ ವರ್ಷಗಳ ಹಿಂದೆ ಓಖ್ಲಾ (ದೆಹಲಿ) ನಿವಾಸಿ ದೇವೇಂದರ್ ಎಂಬ ವ್ಯಕ್ತಿಗೆ ಕಾರನ್ನು ಮಾರಾಟ ಮಾಡಿದ್ದರು. ನಾವು ಸಲ್ಮಾನ್ ಅವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. ದೇವೇಂದರ್‌ನನ್ನೂ ಸಹ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಸದ್ಯ ಇಬ್ಬರ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.