ದೆಹಲಿ, ನ. 11: ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಅಮೂಲ್ ಮತ್ತೊಂದು ಹೊಡೆತ ನೀಡಿದೆ. ಹಾಲಿನ ಬೆಲೆ ಹೆಚ್ಚಿಸಿದ್ದು, ಪರಿಷ್ಕೃತ ದರ ನವೆಂಬರ್ 12ರಿಂದಲೇ ಜಾರಿಗೆ ಬರಲಿದೆ. ಶೇಕಡಾ 4–5ರಷ್ಟು ಬೆಲೆ ಹೆಚ್ಚಿಸಲಾಗಿದೆ ಎಂದು ಅಮೂಲ್ ತಿಳಿಸಿದ್ದು, ಆ ಮೂಲಕ ಲೀಟರ್ ಹಾಲು 2-4 ರೂಪಾಯಿ ದುಬಾರಿಯಾಗಲಿದೆ. ಈಗಾಗಲೇ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿರುವ ಮಧ್ಯೆ ಈ ನಿರ್ಧಾರ ಹೊರ ಬಿದ್ದಿದೆ.
ಅಮೂಲ್ ಎಲ್ಲ ಮಾದರಿಯ ಹಾಲಿನ ಬೆಲೆ ಹೆಚ್ಚಿಸಿದೆ. ಭಾರತದಾದ್ಯಂತ ತನ್ನ ತಾಜಾ ಪೌಚ್ ಹಾಲಿನ ಬೆಲೆಯಲ್ಲಿ ಶೇಕಡಾ 4–5 ಹೆಚ್ಚಳವನ್ನು ಘೋಷಿಸಿದ್ದು, ಇದು ನವೆಂಬರ್ 12ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಅಮೂಲ್ ತಾಜಾ ಟೋನ್ಡ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದ್ದು, ಅಮೂಲ್ ಗೋಲ್ಡ್ ಹಾಲು ಲೀಟರ್‌ಗೆ 4 ರೂ. ದುಬಾರಿಯಾಗಲಿದೆ.
ಅಮೂಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಜಾನುವಾರು ಮೇವು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಇಂಧನ ಸೇರಿ ಸಂಸ್ಕರಣಾ ವೆಚ್ಚಗಳು ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ಹೇಳಿದೆ.