ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಜೆಪಿಗೆ ಗುಡ್‌ ಬೈ ಹೇಳಿದ ಅಣ್ಣಾಮಲೈ; ನಿತಿನ್‌ ನಬಿನ್‌ಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ʼಸಿಂಗಂʼ

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ತೊರೆದು ತಮ್ಮದೇ ಆದ ಹೊಸ ಆಂದೋಲನವನ್ನು ರೂಪಿಸಿಕೊಳ್ಳಲು ಬಯಸುವುದಾಗಿ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ)

ದೆಹಲಿ, ಜೂ. 2: ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ (Annamalai) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಅವರನ್ನು ಭೇಟಿಯಾದ ಅಣ್ಣಾಮಲೈ ಮಂಗಳವಾರ (ಜೂನ್‌ 2) ರಾಜೀನಾಮೆ ಪತ್ರ ಸಲ್ಲಿಸಿದರು. ಇಂದು ಸಂಜೆ ಅವರು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ. ಅಣ್ಣಾಮಲೈ ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಿದಾಗಿನಿಂದ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಅವರಿಗೆ ಬಿಜೆಪಿಯಲ್ಲಿ ಇನ್ನು ಭವಿಷ್ಯವಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಧ್ಯಕ್ಷ ನಿತಿನ್ ನಬಿನ್ ಮತ್ತು ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯಲ್ಲಿ ಅಣ್ಣಾಮಲೈ ಪಕ್ಷದಿಂದ ದೂರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಿಜೆಪಿ ತೊರೆದು ತಮ್ಮದೇ ಆದ ಹೊಸ ಆಂದೋಲನವನ್ನು ರೂಪಿಸಿಕೊಳ್ಳಲು ಬಯಸುವುದಾಗಿ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯೊಂದಿಗೆ ವೈಮನಸ್ಸು? ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರ ಅಣ್ಣಾಮಲೈ?

ಬಿಜೆಪಿ ನಾಯಕರು ಅಣ್ಣಾಮಲೈ ಅವರನ್ನು ತಮ್ಮ ಪಕ್ಷದಲ್ಲೇ ಇರಲು ಮನವೊಲಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಪಾತ್ರ ಕೊಡುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಮುಂದಿನ ಸೂಚನೆ ಬರುವವರೆಗೂ ಅಣ್ಣಾಮಲೈ ಅವರನ್ನು ದೆಹಲಿ ಬಿಡದಂತೆ ಕೇಳಿಕೊಳ್ಳಲಾಗಿದೆ.

ತಮಿಳುನಾಡಿನಲ್ಲಿ ರಾಜಕೀಯ ಸಂಚಲನ

ನಟ-ರಾಜಕಾರಣಿ ವಿಜಯ್ ಅವರು ಸಿನಿಮಾ ತೊರೆದು ತಮಿಳುನಾಡು ಮುಖ್ಯಮಂತ್ರಿಯಾಗಿ ಉತ್ತುಂಗಕ್ಕೇರಿದ ನಂತರ, ಅಣ್ಣಾಮಲೈ ಅವರು ಬಿಜೆಪಿಯಿಂದ ನಿರ್ಗಮಿಸುತ್ತಿರುವುದು ರಾಜ್ಯದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯನ್ನು ಸೂಚಿಸಿದೆ.

ನಟ ವಿಜಯ್ ರಾಜಕೀಯ ಶಕ್ತಿಯಾಗಿ ಉದಯಿಸಿದ ನಂತರ ತಮಿಳುನಾಡಿನ ರಾಜಕೀಯದಲ್ಲಿ ಅಪಾರ ಬದಲಾವಣೆಗಳನ್ನು ತಂದಿದೆ. ಇಂದಿನ ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ ವಿರುದ್ಧ ಹೋರಾಡಲು ಯಾವುದೇ ನಾಯಕ ಇಲ್ಲ. ದ್ರಾವಿಡ ಯುಗ ಮುಗಿದಿದೆ. ಭಾಷಾ ವಿಷಯಗಳ ಮೇಲೆ ಮಾತ್ರ ಕೇಂದ್ರೀಕೃತವಾದ ರಾಜಕೀಯ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ರಾಜ್ಯದ ರಾಜಕೀಯ ಬದಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿದೆ.

ಅಣ್ಣಾಮಲೈ ಮುಂದೇನು?

2020 ರಲ್ಲಿ ರಾಜಕೀಯಕ್ಕೆ ಸೇರಿ ತಮಿಳುನಾಡಿನಲ್ಲಿ ಅತ್ಯಂತ ಕಿರಿಯ ಬಿಜೆಪಿ ಮುಖ್ಯಸ್ಥರಾದ ಅಣ್ಣಾಮಲೈ, ಹೊಸ ಜನಾಂದೋಲನವನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಭವಿಷ್ಯದಲ್ಲಿ ಅದು ರಾಜಕೀಯ ಪಕ್ಷವಾಗಿ ರೂಪುಗೊಳ್ಳಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಈ ನಡೆಯನ್ನು ಅಣ್ಣಾಮಲೈ ಅವರು ದೃಢಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಮುಂದಿನ ಎರಡು ದಿನಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರಿನಿಂದ ಕಣಕ್ಕಿಳಿಯಲು ಅವರು ಯೋಜಿಸಿದ್ದರು. ಆದರೆ, ಬಿಜೆಪಿ ಅಲ್ಲಿ ಟಿಕೆಟ್ ನೀಡದ ಕಾರಣ ಹತಾಶಗೊಂಡಿದ್ದರು ಎನ್ನಲಾಗಿದೆ.

ಬಿಜೆಪಿಗೆ ಶಾಕ್‌

ಇತ್ತೀಚೆಗೆ ಸಿಬಿಎಸ್‌ಇ ತ್ರಿಭಾಷಾ ನೀತಿ ಸೇರಿ ಕೇಂದ್ರ ಸರಕಾರದ ನಿಲುವನ್ನು ಅಣ್ಣಾಮಲೈ ವಿರೋಧಿಸಿದ್ದರು. ಅಲ್ಲದೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಹೀಗಾಗಿ ಅವರ ಮುಂದಿನ ನಿಲುವು ಏನು ಎಂಬ ಪ್ರಶ್ನೆ ಉದ್ಭವಿಸಿದ್ದವು. ಬಿಜೆಪಿಯಲ್ಲಿ ಅಣ್ಣಾಮಲೈ ಅವರನ್ನು ಕಡಗಣನೆ ಮಾಡಲಾಗುತ್ತಿದೆ ಎಂಬ ಮಾತುಗಳ ನಡುವೆ ತಮ್ಮ ಹೊಸ ಆಂದೋಲನದ ಮೂಲಕ ಬಿಜೆಪಿಗೆ ಶಾಕ್ ಕೊಡಲು ಅಣ್ಣಾಮಲೈ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Ramesh Ballamoole

View all posts by this author