ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿಕೊಂಡಿರುವ ಸಿಯಾಚಿನ್‌ನಲ್ಲಿ (Siachen) ಹಿಮಪಾತ ಸಂಭವಿಸಿ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Siachen Avalanche). ಮೃತರಲ್ಲಿ ಇಬ್ಬರು ಅಗ್ನಿವೀರರು ಸೇರಿದ್ದಾರೆ. ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಸೈನಿಕರು ಮಹಾರ್ ರೆಜಿಮೆಂಟ್‌ನವರಾಗಿದ್ದು, ಗುಜರಾತ್, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಮೂಲದವರು. ಸುಮಾರು 5 ಗಂಟೆಗಳ ಕಾಲ ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಅವರು ಅದರಿಂದ ಹೊರಬರಲಾರದೆ ಮೃತಪಟ್ಟರು. ಆರ್ಮಿ ಕ್ಯಾಪ್ಟ್‌ನ್‌ನನ್ನು ರಕ್ಷಿಸಲಾಗಿದೆ.
ʼʼ12,000 ಅಡಿ ಎತ್ತರದ ಸಿಯಾಚಿನ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಹಿಮಪಾತ ಸಂಭವಿಸಿದ್ದು, ಇಬ್ಬರು ಅಗ್ನಿವೀರರು ಸೇರಿದಂತೆ ಮೂವರು ಸೈನಿಕರು ಮೃತಪಟ್ಟಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Avalanche Rescue: ಉತ್ತರಾಖಂಡ ಹಿಮಪಾತ; 46 ಕಾರ್ಮಿಕರ ರಕ್ಷಣೆ ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಹಿಂದೆಯೂ ನಡೆದಿತ್ತು
ಸಿಯಾಚಿನ್‌ನಲ್ಲಿ ಕೆಲವೊಮ್ಮೆ ತಾಪಮಾನವು -60 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ. 2021ರಲ್ಲಿ, ಸಿಯಾಚಿನ್‌ನ ಹನೀಫ್ ಉಪ ವಲಯದಲ್ಲಿ ಹಿಮಪಾತ ಸಂಭವಿಸಿ ಇಬ್ಬರು ಸೈನಿಕರು ಮೃತಪಟ್ಟಿದ್ದರು. 6 ಗಂಟೆಗಳ ಕಾರ್ಯಾಚರಣೆಯ ನಂತರ ಇತರ ಸೈನಿಕರು ಮತ್ತು ಪೋರ್ಟರ್‌ಗಳನ್ನು ರಕ್ಷಿಸಲಾಗಿತ್ತು.
2019ರಲ್ಲಿ ಸಂಭವಿಸಿದ ಮತ್ತೊಂದು ಭಾರಿ ಹಿಮಪಾತದಲ್ಲಿ ನಾಲ್ವರು ಸೈನಿಕರು ಮತ್ತು ಇಬ್ಬರು ಪೋರ್ಟರ್‌ಗಳು ಅಸುನೀಗಿದ್ದರು. 18,000 ಅಡಿ ಎತ್ತರದಲ್ಲಿರುವ ಪೋಸ್ಟ್ ಬಳಿ ಗಸ್ತು ತಿರುಗುತ್ತಿದ್ದ ಎಂಟು ಸೈನಿಕರ ಗುಂಪಿಗೆ ಈ ಹಿಮಪಾತ ಅಪ್ಪಳಿಸಿತ್ತು. 2022ರಲ್ಲಿ ಅರುಣಾಚಲ ಪ್ರದೇಶದ ಕಾಮೆಂಗ್ ಸೆಕ್ಟರ್‌ನಲ್ಲಿ ನಡೆದ ಹಿಮಪಾತದಲ್ಲಿ ಅತೀ ಹೆಚ್ಚು ಅಂದರೆ ಏಳು ಸೈನಿಕರು ಮೃತರಾಗಿದ್ದರು. ಆಗ ಹಿಮಪಾತದ ತೀವ್ರತೆ ಎಷ್ಟಿತ್ತೆಂದರೆ ಮೂರು ದಿನಗಳ ನಂತರ ಸೇನಾ ಸಿಬ್ಬಂದಿಯ ಮೃತದೇಹಗಳು ಪತ್ತೆಯಾಗಿತ್ತು.
2022ರಲ್ಲಿ ಸೇನೆಯು ಮೊದಲ ಬಾರಿಗೆ ಸ್ವೀಡನ್ ಕಂಪನಿಯಿಂದ 20 ಹಿಮಪಾತ ರಕ್ಷಣಾ ಸಾಮಗ್ರಿ ಖರೀದಿಸಿತು. ಕಾಶ್ಮೀರ ಮತ್ತು ಈಶಾನ್ಯದ ಇತರ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಮತ್ತು ಭೂಕುಸಿತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಮೃತಪಡುವುದರಿಂದ ಇದು ಅತ್ಯಗತ್ಯ ಎನಿಸಿಕೊಂಡಿದೆ.