ಲಖನೌ, ಅ. 19: ದೀಪಾವಳಿ ಮುನ್ನಾ ದಿನವೇ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ, ಪವಿತ್ರ ಸರಯೂ ನದಿ ದಡದಲ್ಲಿ ಸ್ವರ್ಗ ಸದೃಶ ವಾತಾವರಣ ನಿರ್ಮಾಣವಾಗಿದೆ. ಭಾನುವಾರ (ಅ. 19) ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರ 9ನೇ ಆವೃತ್ತಿಯ ದೀಪೋತ್ಸವ (Ayodhya Deepotsav 2025) ಆಚರಿಸಿ ಹೊಸ ವಿಶ್ವ ದಾಖಲೆ ಬರೆದಿದೆ. ಅಯೋಧ್ಯೆಯ 56 ಘಾಟ್‌ಗಳಲ್ಲಿ ಬರೋಬ್ಬರಿ 26 ಲಕ್ಷದ 17 ಸಾವಿರದ 215 ಹಣತೆ ಬೆಳಗುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಲಾಗಿದೆ (Guinness World Record). ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ 2 ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಸ್ವೀಕರಿಸಿದರು.
ಏಕಕಾಲದಲ್ಲಿ ಅತಿ ಹೆಚ್ಚು ಜನರು ದೀಪದಾರತಿ ಮಾಡಿದ್ದಾರೆ. ಅಲ್ಲದೆ ಅಯೋಧ್ಯೆ ಜಿಲ್ಲಾಡಳಿತದ ಪ್ರವಾಸೋದ್ಯಮ ಇಲಾಖೆಯು 26,17,215 ದೀಪಗಳನ್ನು ಹಚ್ಚುವ ಮೂಲಕ ಅತೀ ಹೆಚ್ಚು ಎಣ್ಣೆಯ ದೀಪ ಬೆಳಗಿಸಿದೆ. ಈ ಬಗ್ಗೆ 2 ದಾಖಲೆಯ ಪ್ರಮಾಣ ಪತ್ರ ಯೋಗಿ ಆದಿತ್ಯನಾಥ್ ಅವರಿಗೆ ನೀಡಲಾಗಿದೆ. ಡ್ರೋನ್ ಸಹಾಯದಿಂದ ದೀಪಗಳನ್ನು ಲೆಕ್ಕ ಹಾಕಲಾಗಿದೆ.

ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಘೋಷಣೆ:
ಈ ಸುದ್ದಿಯನ್ನೂ ಓದಿ: Ayodhya Diwali 2025: ಅಯೋಧ್ಯೆಯಲ್ಲಿ ಬೆಳಗಲಿದೆ 25 ಲಕ್ಷ ಹಣತೆ, ಮತ್ತೊಂದು ಗಿನ್ನೆಸ್ ದಾಖಲೆ ಸಜ್ಜು!
2,128 ಅರ್ಚಕರಿಂದ ಸರಯೂ ಆರತಿ
ಇದೇ ವೇಳೆ 2,128 ಅರ್ಚಕರು ಸರಯೂ ನದಿ ದಂಡೆಯಲ್ಲಿ ಆರತಿ ಬೆಳಗಿದರು. ಈ ವೇಳೆ ಮೊಳಗಿದ ಮಂತ್ರಘೋಷ, ಸಂಗೀತ ದೈವಿಕ ವಾತಾವಣ ಸೃಷ್ಟಿಸಿತು. ಭಕ್ತರು ಹೊಸದೊಂದು ಲೋಕಕ್ಕೆ ಕಾಲಿಟ್ಟಂತೆ ಪುಳಕಿತರಾದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದೀಪೋತ್ಸವ ಹೊಸದೊಂದು ದಾಖಲೆ ಬರೆಯುವ ಜತೆಗೆ ಜಾಗತಿಕವಾಗಿ ಗಮನ ಸೆಳೆದಿದೆ.
ಅಯೋಧ್ಯೆ ದೀಪೋತ್ಸವದ ವಿಹಂಗಮ ನೋಟ:
ರಥ ಯಾತ್ರೆ
ಸಂಜೆಯಿಂದಲೇ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯ ವೇಷ ಧರಿಸಿದ ಕಲಾವಿದರೊಂದಿಗೆ ಪುಷ್ಪಕ ವಿಮಾನ ಮಾದರಿಯಂತೆ ವಿನ್ಯಾಸಗೊಳಿಸಿದ ವಾಹನದಲ್ಲಿ ಮೆರವಣಿಗೆ ಸಾಗಿದರು. ಈ ವೇಳೆ ನೆರೆದಿದ್ದ ಸಾವಿರಾರು ಮಂದಿ ರಾಮನಾಮ ಜಪಿಸಿದರು.
ವಿಭಾಗೀಯ ಆಯುಕ್ತ ರಾಜೇಶ್ ಕುಮಾರ್ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಯಿತು. ಸುರಕ್ಷತೆಗಾಗಿ ಘಾಟ್‌ಗಳಾದ್ಯಂತ ಪೊಲೀಸ್ ಪಡೆಗಗಳನ್ನು ನಿಯೋಜಿಸಲಾಯಿತು. 5 ದೇಶಗಳ ಕಲಾವಿದರು ವಿಶೇಷ ರಾಮಲೀಲಾ ಪ್ರದರ್ಶನದಲ್ಲಿ ಭಾಗವಹಿಸಿದರು.
ಅಯೋಧ್ಯೆಯಲ್ಲಿ ಏಕಕಾಲಕ್ಕೆ ಬೆಳಗಿದ ದೀಪಗಳು:
ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಸಾವಿರಾರು ಸ್ವಯಂಸೇವಕರು ಸರಯೂ ನದಿಯ ಉದ್ದಕ್ಕೂ ಇರುವ ಘಾಟ್‌ಗಳ ದೀಪಗಳನ್ನು ಜೋಡಿಸಿದರು. 33,000ಕ್ಕೂ ಹೆಚ್ಚು ಮಂದಿ ಈ ಕಾರ್ಯದಲ್ಲಿ ಭಾಗವಹಿಸುವವರು.
ಆರತಿ ಬೆಳಗಿದ ಅರ್ಚಕರು:
ಅದ್ಧೂರಿ ಆಚರಣೆಗಳಿಗೆ ಮುಂಚಿತವಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಅಯೋಧ್ಯೆಯ ನಿಶಾದ್ ಬಸ್ತಿ ಮತ್ತು ದೇವಕಲಿ ಕೊಳೆಗೇರಿಗೆ ಭೇಟಿ ನೀಡಿದರು. ಈ ವೇಳೆ ಅವರು ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ದೀಪಗಳನ್ನು ಬೆಳಗಿಸಿ, ಸಿಹಿತಿಂಡಿ ವಿತರಿಸಿದರು.
ಯೋಗಿ ಆದಿತ್ಯನಾಥ್ ಹನುಮಾನ್‌ಗಢಿ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಿದರು. ಈ ವೇಳೆ ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ದೇವರ ಆಶೀರ್ವಾದವನ್ನು ಕೋರಿದರು ಎಂದು ಮೂಲಗಳು ತಿಳಿಸಿವೆ.