ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

30 ಲಕ್ಷ ಹಣತೆ, ಮತ್ತೊಂದು ವಿಶ್ವ ದಾಖಲೆ: ಅಯೋಧ್ಯೆಯಲ್ಲಿ 10ನೇ ವೈಭವದ ದೀಪೋತ್ಸವ; ತೇತ್ರಾಯುಗಕ್ಕೆ ತೆರಳಿದ ಭಕ್ತರು

Ayodhya Deepotsav 2026: ದೀಪಾವಳಿ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ 10ನೇ ಆವೃತ್ತಿಯ ದೀಪೋತ್ಸವ ನಡೆಸಲಾಗಿದ್ದು, ಬರೋಬ್ಬರಿ 30 ಲಕ್ಷ ಹಣತೆ ಅಯೋಧ್ಯೆಯ ಸರಯೂ ನದಿ ದಂಡೆಯ 56 ಘಾಟ್‌ಗಳಲ್ಲಿ ಬೆಳಗಿದವು. ಆ ಮೂಲಕ ಅತೀ ಹೆಚ್ಚು ಹಣತೆ ಬೆಳಗಿದ ಮತ್ತೊಂದು ವಿಶ್ವ ದಾಖಲೆ ಅಯೋಧ್ಯೆ ದೀಪೋತ್ಸವದ ಪಾಲಾಯ್ತು.

ಅಯೋಧ್ಯೆಯಲ್ಲಿ ಬೆಳಗಿದ ಹಣತೆ

ಲಖನೌ, ನ. 7: ವಿಶ್ವಾದ್ಯಂತ ದೀಪಾವಳಿ (Deepavali 2026) ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಬೆಳಕಿನ ಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಆಚರಿಸಲಾಗುತ್ತಿದೆ. ಶನಿವಾರ (ನವೆಂಬರ್‌ 7) 10ನೇ ದೀಪೋತ್ಸವ ನಡೆಸಲಾಗಿದ್ದು, ಬರೋಬ್ಬರಿ 30 ಲಕ್ಷ ಹಣತೆ ಅಯೋಧ್ಯೆಯ ಸರಯೂ ನದಿ ದಂಡೆಯ 56 ಘಾಟ್‌ಗಳಲ್ಲಿ ಬೆಳಗುವ ಮೂಲಕ ತೇತ್ರಾಯುಗದ ರಾಜ ವೈಭವವನ್ನು ನೆನಪಿಸಿದೆ (Ayodhya Deepotsav 2026). ಸಾವಿರಾರು ಸ್ವಯಂಸೇವಕರು, ವಿದ್ಯಾರ್ಥಿಗಳು ಏಕಕಾಲಕ್ಕೆ ಹಣತೆ ಬೆಳಗುವ ಮೂಲಕ ಸ್ವರ್ಗವೇ ಧರೆಗಿಳಿದ ಅನುಭೂತಿ ಮೂಡಿಸಿದರು. ವಿಶೇಷ ಎಂದರೆ ಅತೀ ಹೆಚ್ಚು ಹಣತೆ ಬೆಳಗಿದ ಮತ್ತೊಂದು ವಿಶ್ವ ದಾಖಲೆ ಅಯೋಧ್ಯೆ ದೀಪೋತ್ಸವದ ಪಾಲಾಯ್ತು. ವಿಶೇಷ ಎಂದರೆ ಇದು ಅಯೋಧ್ಯೆಯಲ್ಲಿ ದಾಖಲಾಗುವ 9ನೇ ವಿಶ್ವ ದಾಖಲೆ.

ದೀಪೋತ್ಸವದ ಸಂಭ್ರಮ ಸಂಜೆಯಿಂದಲೇ ಕಂಡುಬಂತು. ಘಾಟ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ʼರಾಮಾಯಣʼ ನಾಟಕ ಭಕ್ತಿ ಭಾವದಲ್ಲಿ ಮಿಂದೇಳುವಂತೆ ಮಾಡಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಾಯಕತ್ವದಲ್ಲಿ ನಡೆಯುವ ಈ ದೀಪೋತ್ಸವ ಭಾರತದ ಉದಾತ್ತ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಅಯೋಧ್ಯೆ ದೀಪೋತ್ಸವ:



ಜಗದ್ಗುರು ಸ್ವಾಮಿ ಸತೀಶಾಚಾರ್ಯ ಜಿ ಮಹಾರಾಜ್‌ ಅಯೋಧ್ಯೆಗೆ ಆಗಮಿಸಿ ದೀಪೋತ್ಸವದ ಸಿದ್ಧತೆ ಪರಿಶೀಲಿಸಿದರು. ʼʼತೇತ್ರಾಯುಗದಲ್ಲಿ ಪ್ರಭು ಶ್ರೀರಾಮ ಚಂದ್ರನಿಂದ ಅಯೋಧ್ಯೆ ದೀಪದ ಬೆಳಕಿನಲ್ಲಿ ಬೆಳಗಿದಂತೆ ಇಂದು ಯೋಗಿ ಆದಿತ್ಯನಾಥ್‌ ಅವರ ಪ್ರಯತ್ನದಿಂದ ಮತ್ತೊಮ್ಮೆ ಅಂತಹದ್ದೇ ವೈಭವ ಮರುಕಳಿಸಿದೆʼʼ ಎಂದು ಅವರು ಬಣ್ಣಿಸಿದರು.

ʼʼಅಯೋಧ್ಯೆಯಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ದೇವತೆಗಳ ಹೆಸರು ಮತ್ತು ಸಂಖ್ಯೆಗೆ ಅನುಗುಣವಾಗಿ ದೀಪಗಳನ್ನು ಬೆಳಗಿಸುವ ಈ ಸಂಪ್ರದಾಯವು ಶ್ರದ್ಧೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಪ್ರತಿಬಿಂಬಿಸಿದೆ. ಅಯೋಧ್ಯೆಯ ಈ ಭವ್ಯ ನೋಟವು ಭಾರತೀಯ ಸಂಸ್ಕೃತಿ ಮತ್ತು ಸನಾತನ ಪರಂಪರೆಗಳ ಜೀವಂತ ಅಭಿವ್ಯಕ್ತಿ" ಎಂದು ಅವರು ಹೇಳಿದರು. 10ನೇ ಆವೃತ್ತಿಯ ಅಯೋಧ್ಯೆ ದೀಪೋತ್ಸವ ವೇಳೆ 2,100 ಡ್ರೋನ್‌ ಬಳಸಲಾಗಿದ್ದು, ಲೇಸರ್‌ ಶೋ ಕೂಡ ಆಯೋಜಿಸಲಾಯಿತು. 2,500 ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ವಿಶ್ವ ದಾಖಲೆ ಬರೆದ ಅಯೋಧ್ಯೆ ದೀಪೋತ್ಸವ:



ವಿಶ್ವ ದಾಖಲೆ

ಕಳೆದ ಬಾರಿ 26 ಲಕ್ಷ ಹಣತೆ ಬೆಳಗುವ ಮೂಲಕ ಗಿನ್ನೆಸ್‌ ದಾಖಲೆ ಮಾಡಿದ್ದ ಉತ್ತರ ಪ್ರದೇಶ ಸರ್ಕಾರ ಈ ಬಾರಿ 30 ಲಕ್ಷ ಹಣತೆ ಹಚ್ಚುವ ಮೂಲಕ ಅದನ್ನು ಮೀರಿ ಮತ್ತೊಂದು ಇತಿಹಾಸ ಬರೆದಿದೆ. ಇದಕ್ಕೆ 35,000 ವಿದ್ಯಾರ್ಥಿಗಳು ಸೇರಿ ಹಲವು ಸ್ವಯಂಸೇವಕರು ಕೈಜೋಡಿಸಿದರು.

2,100 ಡ್ರೋನ್‌ಗಳು ಆಗಸದಲ್ಲಿ ರಾಮಾಯಣ ಕಥಾನಕವನ್ನು ಚಿತ್ರಸಿದವು. ಕಳೆದ ವರ್ಷ 1,100 ಡ್ರೋನ್‌ಗಳನ್ನು ಬಳಸಲಾಗಿತ್ತು. ಇನ್ನು ಸರಯೂ ನದಿ ತೀರದಲ್ಲಿ ವೈಭವದ ಆರತಿ ಬೆಳಗಲಾಯಿತು. ಇದರಲ್ಲಿ ಮಹಿಳಾ ಸಶಕ್ತೀಕರಣ, ಸಾಮಾಜಿಕ ಸಾಮರಸ್ಯದ ಸಂದೇಶ ಸಾರಲಾಯಿತು.

ಅಯೋಧ್ಯೆಯಲ್ಲಿ ಬೆಳಗಿದ 26 ಲಕ್ಷ ಹಣತೆಗಳು; ಯೋಗಿ ಸರ್ಕಾರದಿಂದ ಹೊಸ ದಾಖಲೆ

ಇತಿಹಾಸದ ಪುಟ ಸೇರಿದ ದೀಪೋತ್ಸವ

2017ರಲ್ಲಿ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವ ನಡೆಸಲಾಯಿತು. ಆಗ 1.71 ಲಕ್ಷ ಹಣತೆ ಬೆಳಗಿದ್ದವು. 2018ರಲ್ಲಿ 3.01 ಲಕ್ಷ, 2019ರಲ್ಲಿ 4.04 ಲಕ್ಷ, 2020ರಲ್ಲಿ 6.06 ಲಕ್ಷ, 2021ರಲ್ಲಿ 9.41 ಲಕ್ಷ, 2022ರಲ್ಲಿ 15 ಲಕ್ಷ, 2023ರಲ್ಲಿ 22 ಲಕ್ಷ, 2024ರಲ್ಲಿ 25 ಲಕ್ಷ ಮತ್ತು 2025ರಲ್ಲಿ 26.17 ದೀಪಗಳು ರಾಮನಗರಿಯನ್ನು ಹೊಳೆಯುವಂತೆ ಮಾಡಿದವು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author