ಕೋಲ್ಕತ್ತಾ, ನ. 28: ಗೋವಾ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಬಿಸ್ಲೇರಿ (Bisleri) ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮುಂದಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಗುಣಮಟ್ಟದ ವಿಚಾರದಲ್ಲಿ ಕಂಡುಬಂದಿರುವ ಈ ಲೋಪವು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬಂಗಾಳದ ಸ್ಯಾಂಪಲ್‌ನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾದ ಬೆನ್ನಲ್ಲೇ ಬಿಸ್ಲೇರಿ ಸಂಸ್ಥೆಯು ಸ್ಪಷ್ಟನೆ ನೀಡಿದ್ದು, ಸಂಬಂಧಿತ ಸ್ಯಾಂಪಲ್ ಈಗಾಗಲೇ ಮಾರುಕಟ್ಟೆಯಿಂದ ರಿಕಾಲ್ ಮಾಡಿದ (ಹಿಂಪಡೆದ) ಬ್ಯಾಚ್‌ಗೆ ಸೇರಿದ್ದಾಗಿದೆ ಎಂದು ತಿಳಿಸಿದೆ. ಪರೀಕ್ಷೆಯಲ್ಲಿ ಅನುಸರಿಸಿದ ವಿಧಾನವನ್ನು ಮರುಪರಿಶೀಲಿಸುವಂತೆ FSSAIಗೆ ಮನವಿ ಸಲ್ಲಿಸಿದೆ.
ಬಿಸ್ಲೇರಿ ನೀರು ಕುಡಿಯುವ ಮುನ್ನ ಮತ್ತೊಮ್ಮೆ ಯೋಚಿಸಿ; ಶುದ್ಧತೆ ಪರೀಕ್ಷೆಯಲ್ಲಿ ವಿಫಲ: ಕ್ಯಾನ್ಸರ್‌ಕಾರಕ ಅಂಶ ಪತ್ತೆ
ಗೋವಾ ಬೆನ್ನಲ್ಲೇ ಬಂಗಾಳದಲ್ಲೂ ಬ್ಯಾಕ್ಟೀರಿಯಾ ಆತಂಕ
ಗೋವಾದಲ್ಲಿ ಎದುರಾದ ಸಮಸ್ಯೆಯ ಬೆನ್ನಲ್ಲೇ ಈಗ ಬಂಗಾಳದಲ್ಲೂ ಬಿಸ್ಲೇರಿ ನೀರಿನ ಸ್ಯಾಂಪಲ್‌ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ಇದರಿಂದಾಗಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಆತಂಕ ಮೂಡಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ FSSAI ಸಿದ್ಧತೆ ನಡೆಸಿದೆ.
FSSAI ಪ್ರಕಾರ ಗೋವಾ ಘಟಕದಿಂದ ಸಂಗ್ರಹಿಸಲಾದ ಮಾದರಿಯು ನಿಗದಿತ ಬ್ರೋಮೆಟ್ ಮಿತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು ಮತ್ತು ಆಹಾರ ಸುರಕ್ಷಾ ಕಾಯ್ದೆಯಡಿ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಕಂಪನಿಯ ಮೇಲ್ಮನವಿಯ ಮೇರೆಗೆ ಮಾದರಿಯನ್ನು ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಪತ್ತೆಯಾದ ಕಾರಣ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಯಿತು. ಇದರ ಆಧಾರದ ಮೇಲೆ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿತ್ತು.
ಕಂಪನಿ ಸ್ಪಷ್ಟನೆ, FSSAIಗೆ ಮರುಪರೀಕ್ಷೆ ಮನವಿ
ತಮ್ಮ ಸಂಸ್ಥೆಯ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸ್ಲೇರಿ, ಬ್ಯಾಕ್ಟೀರಿಯಾ ಪತ್ತೆಯಾದ ಬ್ಯಾಚ್ ಅನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ಹೇಳಿದೆ. ಇದರ ಜೊತೆಗೆ, ಸ್ಯಾಂಪಲ್ ಪರೀಕ್ಷಾ ವಿಧಾನದ ಕುರಿತು FSSAI ಮರುಪರಿಶೀಲನೆ ನಡೆಸಬೇಕು ಎಂದು ಕಂಪನಿ ಒತ್ತಾಯಿಸಿದೆ.