ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

6 ವರ್ಷಗಳ ಬಳಿಕ ಒಂದಾದ ಬಿಜೆಪಿ-ಶಿರೋಮಣಿ ಅಕಾಲಿ ದಳ: ಮೈತ್ರಿಯಲ್ಲಿ ಅಕಾಲಿ ದಳವೇ 'ಬಡಾ ಭಾಯ್', ಸಿಎಂ ಹುದ್ದೆಯೂ ಅವರಿಗೇ ಎಂದ ಅಮಿತ್ ಶಾ

Punjab assembly election: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸುಮಾರು ಆರು ವರ್ಷಗಳ ಬಳಿಕ ಭಾರತೀಯ ಜನತಾ ಪಾರ್ಟಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ ಮಾಡಿಕೊಂಡಿವೆ. ಮೈತ್ರಿಯಲ್ಲಿ ಅಕಾಲಿ ದಳವೇ ದೊಡ್ಡಣ್ಣ ಆಗಿರಲಿದ್ದು, ಮುಖ್ಯಮಂತ್ರಿ ಹುದ್ದೆಯೂ ಅಕಾಲಿ ದಳಕ್ಕೇ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಪಂಜಾಬ್‌ನಲ್ಲಿ ಬಿಜೆಪಿ-ಅಕಾಲಿ ದಳ ಮೈತ್ರಿ

ಚಂಡೀಗಢ, ನ. 24: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ (Punjab assembly election) ಮುನ್ನ ರಾಜ್ಯ ರಾಜಕೀದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಸುಮಾರು ಆರು ವರ್ಷಗಳ ಬಳಿಕ ಭಾರತೀಯ ಜನತಾ ಪಾರ್ಟಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ ಮಾಡಿಕೊಂಡಿವೆ. ಮೈತ್ರಿಯಲ್ಲಿ ಅಕಾಲಿ ದಳವೇ 'ದೊಡ್ಡಣ್ಣ' ಆಗಿರಲಿದ್ದು, ಮುಖ್ಯಮಂತ್ರಿ ಹುದ್ದೆಯೂ ಅಕಾಲಿ ದಳಕ್ಕೇ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಸೇರಿ ಉಭಯ ಪಕ್ಷಗಳ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಹೇಳಿದರು. ಮೈತ್ರಿಯಲ್ಲಿ ಅಖಾಲಿ ದಳವು ದೊಡ್ಡಣ್ಣನ ಪಾತ್ರ ನಿರ್ವಹಿಸಲಿದೆ. ಅಕಾಲಿ ದಳ ಮತ್ತು ಬಿಜೆಪಿ ಪಂಜಾಬ್‌ನ ಎಲ್ಲ 117 ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ಸ್ಪರ್ಧಿಸಲಿವೆ. ಎರಡೂ ಪಕ್ಷಗಳು ಜಂಟಿಯಾಗಿ ಚುನಾವಣೆ ಎದುರಿಸಲಿವೆ. ಈ ಮೈತ್ರಿಯಲ್ಲಿ ಅಕಾಲಿ ದಳ ದೊಡ್ಡಣ್ಣನ ಸ್ಥಾನದಲ್ಲಿರಲಿದೆ ಎಂದರು.

ಉಭಯ ಪಕ್ಷಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿ ವಿಡಿಯೊ:



ಮುಖ್ಯಮಂತ್ರಿ ಸ್ಥಾನ ಅಖಾಲಿ ದಳಕ್ಕೆ

ಇದೇ ವೇಳೆ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಪಂಜಾಬ್‌ನ ಮುಂದಿನ ಮುಖ್ಯಮಂತ್ರಿ ಅಕಾಲಿ ದಳದಿಂದಲೇ ಇರಲಿದ್ದಾರೆ ಎಂಬ ಸುಳಿವು ನೀಡಿದರು. ಮೈತ್ರಿಯಲ್ಲಿ ದೊಡ್ಡಣ್ಣನ ಪಾತ್ರ ವಹಿಸುವ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಯಾರು ದೊಡ್ಡಣ್ಣನಾಗಿರುತ್ತಾರೋ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾ ಸ್ಪಷ್ಟಪಡಿಸಿದರು.

ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ-ಶಿರೋಮಣಿ ಅಕಾಲಿ ದಳ ಮೈತ್ರಿ

2029ರೊಳಗೆ ಪಂಜಾಬ್ ‘ಮಾದಕವಸ್ತು ಮುಕ್ತ’ವಾಗಲಿದೆ: ಅಮಿತ್ ಶಾ

ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ ಮತ್ತು ಪ್ರಕಾಶ ಸಿಂಗ್‌ ಬಾದಲ್‌ ಅವರ ಕಾಲದಿಂದಲೂ ಎನ್‌ಡಿಎಯ ಅತ್ಯಂತ ಹಳೆಯ ಮಿತ್ರಪಕ್ಷವಾಗಿದ್ದ ಅಕಾಲಿ ದಳ ಮರಳಿರುವುದರಿಂದ ಎನ್‌ಡಿಎ ಈಗ ಪೂರ್ಣಗೊಂಡಿದೆ ಎಂದು ಅಮಿತ್‌ ಶಾ ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಸುಖ್‌ಬೀರ್‌ ಬಾದಲ್‌ ಹಾಗೂ ನಿತಿನ್‌ ನಬಿನ್‌ ಅವರಿಗೆ ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ ಎಂದು ತಿಳಿಸಿದರು. 2029ರ ಡಿಸೆಂಬರ್‌ 31ರೊಳಗೆ ಪಂಜಾಬ್‌ ಅನ್ನು ಸಂಪೂರ್ಣ ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡುವುದು, ಗ್ಯಾಂಗ್‌ಸ್ಟರ್‌ಗಳ ಮಟ್ಟಹಾಕುವುದು, ರೈತರ ಕಲ್ಯಾಣ ಹಾಗೂ ಹಿಂದೂ-ಸಿಖ್‌ ಏಕತೆಯನ್ನು ಬಲಪಡಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಶಾ ಭರವಸೆ ನೀಡಿದರು.

2020ರಲ್ಲಿ ಮುರಿದಿದ್ದ 23 ವರ್ಷಗಳ ಸಂಬಂಧ

1997ರಿಂದ ಸುಮಾರು 23 ವರ್ಷಗಳ ಕಾಲ ಜತೆಯಾಗಿದ್ದ ಬಿಜೆಪಿ ಮತ್ತು ಅಕಾಲಿ ದಳ, 2020ರಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೇರ್ಪಟ್ಟಿದ್ದವು. ಅಂದು ಕೇಂದ್ರ ಸಚಿವೆಯಾಗಿದ್ದ ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿ ಎನ್‌ಡಿಎಯಿಂದ ಹೊರಬಂದಿದ್ದರು. ಬಳಿಕ 2022ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎರಡೂ ಪಕ್ಷಗಳು ಆಮ್ ಆದ್ಮಿ ಪಕ್ಷದ ಅಲೆಯ ಮುಂದೆ ತೀವ್ರ ಹಿನ್ನಡೆ ಅನುಭವಿಸಿದ್ದವು. ಇದೀಗ ಪಂಜಾಬ್ ಅನ್ನು ಉಳಿಸಲು ಮತ್ತೆ ಒಂದಾಗಿರುವುದಾಗಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದ್ದು, ಬಿಜೆಪಿ ಸುಮಾರು 40 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.