ದೆಹಲಿ, ನ. 3: ಕೇಂದ್ರ ಮತ್ತು ವಿಪಕ್ಷಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಎಸ್ಐಆರ್ ವಿರೋಧಿಸಿ, ಮತಕಳವು ಆರೋಪಿಸಿ ವಿಪಕ್ಷಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಈ ಹೋರಾಟದಲ್ಲಿ ಹಿಂದಿನಿಂದಲೂ ಸಕ್ರಿಯವಾಗಿರುವ ವಿದ್ಯಾರ್ಥಿ ನಾಯಕಿ ನೇಹಾ ಬೋರಾ (Neha Bora) ಅವರ ಹಿಂದೂ ವಿರೋಧಿ ಹೇಳಿಕೆ ವಿರೋಧಿಸಿ ಇದೀಗ ಬಿಜೆಪಿ (BJP) ತೀವ್ರ ವಾಗ್ದಾಳಿ ನಡೆಸಿದೆ. ಅವರು ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದೆ. ಮಹಿಳೆಯರಿಗೆ ಬ್ರಾಹ್ಮಣಶಾಹಿ ವ್ಯವಸ್ಥೆಯಿಂದ ರಕ್ಷಣೆಯ ಅಗತ್ಯವಿದೆ ಮತ್ತು ದೇವಾಲಯಗಳ ಒಳಗೆ ಅರ್ಚಕರು ಅತ್ಯಾಚಾರಗಳನ್ನು ಎಸಗುತ್ತಾರೆ ಎಂದು ನೇಹಾ ಬೋರಾ ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ನ ಹಿಂದೂ ವಿರೋಧಿ ನಿಲುವಿನ ಪ್ರತಿಧ್ವನಿ ಎಂದು ಬಿಜೆಪಿ ದೂರಿದೆ.
ನೇಹಾ ಬೋರಾ ಅವರ ಅಭಿಪ್ರಾಯವನ್ನು ರಾಹುಲ್ ಗಾಂಧಿ ಅವರ ಹೇಳಿಕೆಯೊಂದಿಗೆ ಹೋಲಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದಾರೆ. ನೇಹಾ ಅವರ ಈ ಹೇಳಿಕೆಯು ಸನಾತನ ಧರ್ಮದ ವಿರುದ್ಧದ ಸೈದ್ಧಾಂತಿಕ ಅಭಿಯಾನವನ್ನು ಪ್ರತಿಬಿಂಬಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರ ಎಕ್ಸ್ ಪೋಸ್ಟ್:
ಪ್ರದೀಪ್ ಭಂಡಾರಿ ಹೇಳಿದ್ದೇನು?
ಎನ್ಡಿಟಿವಿಯೊಂದಿಗೆ ಮಾತನಾಡಿದ ಪ್ರದೀಪ್ ಭಂಡಾರಿ, ʼʼನೇಹಾ ಅವರ ಈ ಹೇಳಿಕೆ ರಾಹುಲ್ ಗಾಂಧಿ ಅವರ ಮಾತಿನಿಂದ ಸ್ಫೂರ್ತಿ ಪಡೆದಿದೆ. ಹಿಂದೆ ರಾಹುಲ್ ಗಾಂಧಿ ಇದೇ ರೀತಿಯ ಹೇಳಿಕೆ ನೀಡಿದ್ದರು. ದೇವಸ್ಥಾನದೊಳಗೆ ಹುಡುಗಿಯರು ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದಿದ್ದರುʼʼ ಎಂಬುದಾಗಿ ತಿಳಿಸಿದ್ದಾರೆ.
ʼʼಮೋದಿ ಪ್ರಧಾನಿಯಾಗಿದ್ದು ವಿದೇಶಿ ನೆರವಿನಿಂದ; ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿʼʼ: ರಾಹುಲ್ ಗಾಂಧಿ ಸವಾಲು
2014ರಲ್ಲಿ ರಾಹುಲ್ ಗಾಂಧಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, "ದೇವಿಯರನ್ನು ಪೂಜಿಸಲು ದೇವಾಲಯಗಳಿಗೆ ಹೋಗುವವರೇ ಬಸ್ಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವನ್ನೂ ನಡೆಸುತ್ತಾರೆ" ಎಂದು ಹೇಳಿದ್ದರು. ಇತ್ತೀಚೆಗೆ, ಮಹಿಳಾ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬಿಜೆಪಿ ಸೈದ್ಧಾಂತಿಕ ಮಾರ್ಗದರ್ಶಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜತೆ ಸಂಘರ್ಷಕ್ಕಿಳಿದಿದ್ದರು. ಈ ವೇಳೆ ಅವರು ಸಾಮಾಜಿಕ ಜಾಲತಾಣದಲ್ಲಿ ಆರ್ಎಸ್ಎಸ್ ಅನ್ನು "ಸಂಪೂರ್ಣವಾಗಿ ಪುರುಷರನ್ನು ಮಾತ್ರ ಒಳಗೊಂಡಿರುವ, ಸಂವಿಧಾನ ವಿರೋಧಿ ಪಂಥ" ಎಂದು ಬಣ್ಣಿಸಿದ್ದರು.
"ಇದೇ ಕಾಂಗ್ರೆಸ್ 'ಹಿಂದೂ ಭಯೋತ್ಪಾದನೆ'ಯಂತಹ ಪದಗಳನ್ನು ಬಳಸಿದೆ. ಬಾಂಗ್ಲಾದೇಶದ ಇಸ್ಲಾಮಿಸ್ಟ್ಗಳಿಂದ ಪ್ರೇರಣೆಗೊಂಡ ನೇಹಾ ಬೋರಾಳ ಉದಾಹರಣೆಯನ್ನೂ ಗಮನಿಸಿ. ಅವರೂ ಇದಕ್ಕಿಂತ ಭಿನ್ನವೇನಲ್ಲ. ಕಾಂಗ್ರೆಸ್ನ ಸಂಪೂರ್ಣ ಸಿದ್ಧಾಂತ ಮತ್ತು ಚಿಂತನೆಯು ಭಾರತದ ಏಕತೆ ಹಾಗೂ ಅಖಂಡತೆಗೆ ವಿರುದ್ಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಕ್ಷ ಸನಾತನ ಧರ್ಮವನ್ನು ದೂಷಿಸುತ್ತಿದೆ ಮತ್ತು ಹಿಂದೂ ನಂಬಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು ಪಕ್ಷದ ಕೋಮುವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್ ಡಿಎನ್ಎ ಹಿಂದೂ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸನಾತನ ವಿರೋಧಿ ಎಂಬುದನ್ನು ಇದು ಮತ್ತಷ್ಟು ದೃಢಪಡಿಸುತ್ತದೆ" ಎಂದು ಭಂಡಾರಿ ಹೇಳಿದ್ದಾರೆ.
ನೇಹಾ ಬೋರಾ ವಿವಾದಾತ್ಮಕ ಹೇಳಿಕೆ
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧದ ನಿರ್ಣಯವನ್ನು ಬೆಂಬಲಿಸುವ ಸಂದರ್ಭದಲ್ಲಿ ಎಡ ಪಂಥೀಯ ನಾಯಕಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನ (AISA) ಬೋರಾ ನೀಡಿದ್ದ ಹೇಳಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದ ಬೋರಾ, "ಮತದ ಪಾವಿತ್ರ್ಯತೆಯನ್ನು ಛಿದ್ರಗೊಳಿಸಲಾಗಿದೆ" ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಅವರು ಜಾತಿ ಮತ್ತು ಧಾರ್ಮಿಕ ಸಂಸ್ಥೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಬಾಂಗ್ಲಾದೇಶ ಜೆನ್ಝೀ ಹೋರಾಟ ನಮಗೆ ಸ್ಫೂರ್ತಿ: ನೇಹಾ ಬೋರಾ ವಿವಾದ
"ಬ್ರಾಹ್ಮಣೀಯ ವ್ಯವಸ್ಥೆಯಿಂದಲೇ ರಕ್ಷಣೆ ಬೇಕಾಗಿದೆ. ಬಡವರು, ದಮನಿತರು, ಪ್ರಾಣಿಗಳು ಮತ್ತು ಮಹಿಳೆಯರು - ಇವರೆಲ್ಲರೂ ದಬ್ಬಾಳಿಕೆ ಹಾಗೂ ದುರುಪಯೋಗಕ್ಕೆ ಗುರಿಯಾಗಲು ಅರ್ಹರು ಎಂದು ಪ್ರತಿಪಾದಿಸುವ ವ್ಯವಸ್ಥೆ ಇದಾಗಿದೆ. ಇದೇ ವ್ಯವಸ್ಥೆಯ ಅಡಿಯಲ್ಲಿ ಬ್ರಾಹ್ಮಣ ಮಹಿಳೆಯರೇ ಸಹ ಸುರಕ್ಷಿತವಾಗಿಲ್ಲ ಮತ್ತು ಅವರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ದೇವಾಲಯಗಳ ಒಳಗಡೆಯೇ ಅರ್ಚಕರು ಅತ್ಯಾಚಾರಗಳನ್ನು ಎಸಗುತ್ತಾರೆ. ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ" ಎಂದು ಬೋರಾ ಹೇಳಿದ್ದರು. ಈ ಹೇಳಿಕೆ ಬಾರಿ ಸಂಚಲನ ಸೃಷ್ಟಿಸಿತ್ತು ಮತ್ತು ಮೋರಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹೇಳಿಕೆಯನ್ನು ಪ್ರದೀಪ್ ಭಂಡಾರಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.