ಹೈದರಾಬಾದ್, ನ.16: ತೆಲಂಗಾಣದ ಹೈದರಾಬಾದ್ನಲ್ಲಿ ಕಾಂಗ್ರೆಸ್ ಸರ್ಕಾರ ಆಯೋಜಿಸಿದ್ದ 'ಭಾರತ್ ಶೃಂಗಸಭೆ 2026' (Bharat Summit 2026) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಟಲಿಯ ರಾಜಕಾರಣಿ ಹಾಗೂ ಯುರೋಪಿಯನ್ ಸೋಷಿಯಲಿಸ್ಟ್ ಪಾರ್ಟಿಯ (PES) ಪ್ರಧಾನ ಕಾರ್ಯದರ್ಶಿ ಗಿಯಾಕೊಮೊ ಫಿಲಿಬೆಕ್ (Giacomo Filibeck) ಅವರು ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯ ವಿರುದ್ಧ ವಿವಾದಾತ್ಮಕ ಘೋಷಣೆ ಕೂಗುವ ಮೂಲಕ ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ.
ಶನಿವಾರ ಹೈದರಾಬಾದ್ನಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ನಡೆದ ಭಾರತ ಶೃಂಗಸಭೆ 2026 ವೇದಿಕೆಯಲ್ಲಿ ಮಾತನಾಡಿದ ಗಿಯಾಕೊಮೊ ಫಿಲಿಬೆಕ್, "ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ, ಅದನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬೇಕು" ಎಂದು ಹೇಳಿದರಲ್ಲದೆ, ವಿಪಕ್ಷಗಳ ರಾಜಕೀಯ ಘೋಷಣೆಯಾದ ʼʼಮತಗಳ್ಳ, ಕುರ್ಚಿ ಬಿಡುʼʼ (ವೋಟ್ ಚೋರ್, ಗದ್ದಿ ಛೋಡ್) ಎಂದು ಕೂಗಿದ್ದಾರೆ. ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ವೇಳೆ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿ
ವೀಸಾ ನಿಯಮಗಳ ಸ್ಪಷ್ಟ ಉಲ್ಲಂಘನೆ
ಈ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗಿಯಾಕೊಮೊ ಫಿಲಿಬೆಕ್ ಅವರು ಇ-ವೀಸಾ ಪೋರ್ಟಲ್ ಮೂಲಕ 'ಕಾನ್ಫರೆನ್ಸ್ ವೀಸಾ' ಪಡೆದು ಭಾರತಕ್ಕೆ ಆಗಮಿಸಿದ್ದರು. ಭಾರತದ ವೀಸಾ ನಿಯಮಗಳ ಪ್ರಕಾರ, ಯಾವುದೇ ವೀಸಾದಡಿ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳು ದೇಶದ ಆಂತರಿಕ ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಹಾಗೂ ರಾಜಕೀಯ ಪ್ರೇರಿತ ಘೋಷಣೆಗಳನ್ನು ಕೂಗುವಂತಿಲ್ಲ. ಇಟಲಿ ನಾಯಕನ ಈ ನಡೆ ವೀಸಾ ನಿಯಮಗಳ ನೇರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ
ವಿದೇಶಿ ಗಣ್ಯರೊಬ್ಬರು ಭಾರತದ ನೆಲದಲ್ಲಿ ನಿಂತು ದೇಶದ ಪ್ರಜಾಪ್ರಭುತ್ವ ಮತ್ತು ಸರ್ಕಾರ ವಿರುದ್ಧ ಘೋಷಣೆ ಕೂಗಿರುವುದಕ್ಕೆ ಬಿಜೆಪಿ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದು, ಅವರ ಸಹಾಯದಿಂದ ಭಾರತದಲ್ಲಿ ಆಡಳಿತ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, "ಅಂತರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಹೆಸರಿಗೆ ಮಸಿ ಬಳಿಯುತ್ತಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ನಿರಂತರವಾಗಿ ಮೋದಿ ಅವರನ್ನು ಮತ್ತು ದೇಶವನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದ ಷಾ, "ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ನಿಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಮತ್ತು ನಮ್ಮ ಹಳ್ಳಿಗಳಿಗೆ ಭೇಟಿ ನೀಡಲು ಆರಂಭಿಸಿ. ಆಗ ಮಾತ್ರ ಮುಂದೊಂದು ದಿನ ನಿಮ್ಮ ಸರದಿ ಬಂದರೂ ಬರಬಹುದು" ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಮ್ಮ ಎಕ್ಸ್ ಖಾತೆಯಲ್ಲಿ, "ವಿದೇಶಿಗನೊಬ್ಬ ಭಾರತವನ್ನು ಅವಮಾನಿಸುತ್ತಿದ್ದರೆ ಅದನ್ನು ನೋಡಿ ಯಾರಾದರೂ ನಗುವುದನ್ನು ನೀವು ನೋಡಿದ್ದೀರಾ?" ಎಂದು ಬರೆದುಕೊಂಡಿದ್ದಾರೆ.
ಇಟಲಿ ಪ್ರಧಾನಿ ಆಪ್ತೆಯಿಂದ ಫಿಲಿಬೆಕ್ಗೆ ತಿರುಗೇಟು
ಇದೇ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಪ್ತೆ ಮತ್ತು ಶಾಸಕಿ ಡೆಬೊರಾ ಬರ್ಗಾಮಿನಿ, "97 ಕೋಟಿ ಮತದಾರರನ್ನು ಹೊಂದಿರುವ ಭಾರತಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಯುರೋಪಿಯನ್ನರು ಉಪನ್ಯಾಸ ನೀಡುವ ಅಗತ್ಯವಿಲ್ಲ. ಭಾರತ ತನ್ನದೇ ಆದ ಬಲಿಷ್ಠ ರಾಜಕೀಯ ಸಂಸ್ಥೆಗಳು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ವಿಶೇಷ ಕಾರ್ಯತಂತ್ರದ ಪಾಲುದಾರ ದೇಶವಾದ ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ" ಎಂದು ಅವರು ಖಡಕ್ ತಿರುಗೇಟು ನೀಡಿದ್ದಾರೆ.