ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಕಾರು ಸ್ಫೋಟಕ್ಕೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ; ಇದು ಉಗ್ರರ ಕೃತ್ಯವೇ?

ರಾಷ್ಟ್ರ ರಾಜಧಾನಿ ದೆಹಲಿ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡು ಕನಿಷ್ಠ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಮಧ್ಯೆ ದೆಹಲಿ ಸಮೀಪದ ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು 350 ಕೆಜಿ ಸ್ಫೋಟಕದೊಂದಿಗೆ ಶಂಕಿತ ಉಗ್ರ ಸೆರೆಯಾಗಿದ್ದು, ಇದು ಭಯೋತ್ಪಾದಕರ ವಿದ್ವಂಸಕ ಕೃತ್ಯದ ಭಾಗವೇ ಎನ್ನುವ ಅನುಮಾನ ಹುಟ್ಟು ಹಾಕಿದೆ.

ದೆಹಲಿ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡಿದ್ದು, ಪೊಲೀಸರು ಪರಿಶೀಲನೆ ನಡೆಸಿದರು.

ದೆಹಲಿ, ನ. 10: ರಾಷ್ಟ್ರ ರಾಜಧಾನಿ ದೆಹಲಿ ಸೋಮವಾರ (ನವೆಂಬರ್‌ 10) ಕಾರು ಸ್ಫೋಟಕ್ಕೆ ಬೆಚ್ಚಿ ಬಿದ್ದಿದೆ (Delhi Blast). ಕೆಂಪು ಕೋಟೆ ಸಮೀಪ ಸಂಜೆ ಕಾರು ಸ್ಫೋಟಗೊಂಡು ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಕನಿಷ್ಠ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಈ ಮಧ್ಯೆ ದೆಹಲಿ ಸಮೀಪದ ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು 350 ಕೆಜಿ ಸ್ಫೋಟಕದೊಂದಿಗೆ ಶಂಕಿತ ಉಗ್ರ ಸೆರೆಯಾಗಿದ್ದು, ಇದು ಭಯೋತ್ಪಾದಕರ ವಿದ್ವಂಸಕ ಕೃತ್ಯದ ಭಾಗವೇ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಸದ್ಯ ಕಾರು ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಕಾರಿನ ಸಿಎನ್‌ಜಿ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ. ಅದಾಗ್ಯೂ ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಮಧ್ಯೆ ಉಗ್ರರ ನೆರಳು ಈ ಸ್ಫೋಟದ ಹಿಂದಿದ್ಯಾ ಎನ್ನುವ ಸಂಶಯ ಮೂಡತೊಡಗಿದೆ.

ದೆಹಲಿ ಸ್ಫೋಟದ ದೃಶ್ಯ:



ಹರಿಯಾಣದ ಫರಿದಾಬಾದ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದ್ದು ಅನುಮಾನಕ್ಕೆ ಕಾರಣ. ಪರಿಶೀಲನೆ ವೇಳೆ ಭದ್ರತಾ ಪಡೆಗಳು 360 ಕೆಜಿಯಷ್ಟು ಅಮೋನಿಯಂ ನೈಟ್ರೇಟ್, ಅಸಾಲ್ಟ್ ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಜತೆಗೆ ಈ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ವೈದ್ಯ ಡಾ. ಮುಜಮ್ಮಿಲ್ ಶಕೀಲ್ (35)ನನ್ನು, ಆತನಿಗೆ ನೆರವಾದ ವೈದ್ಯೆಯನ್ನೂ ಬಂಧಿಸಲಾಗಿದೆ. ಸೋಮವಾರ ಭದ್ರತಾ ಪಡೆಗಳು ವೈದ್ಯೆ ಡಾ. ಶಾಹೀನ್ ಶಾಹಿದ್‌ನನ್ನು ಬಂಧಿಸಿ ಆಕೆಗೆ ಸೇರಿದ ಕಾರಿನಿಂದ ಎ.ಕೆ. ಕ್ರಿಂಕೋವ್ ರೈಫಲ್ ಜತೆಗೆ 3 ಮ್ಯಾಗಜೀನ್‌ಗಳು, ಲೈವ್ ರೌಂಡ್‌ಗಳೊಂದಿಗೆ 1 ಪಿಸ್ತೂಲ್, 2 ಖಾಲಿ ಕಾರ್ಟ್ರಿಡ್ಜ್‌ಗಳು ಮತ್ತು 2 ಹೆಚ್ಚುವರಿ ಮ್ಯಾಗಜೀನ್‌ಗಳನ್ನು ವಶಪಡಿಸಿಕೊಂಡಿವೆ.

ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟದ ತೀವ್ರತೆ:



ಈ ಸುದ್ದಿಯನ್ನೂ ಓದಿ: Faridabad Arms Case: 350 ಕೆಜಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು; ಶಂಕಿತ ಉಗ್ರನ ಜತೆ ಕೈ ಜೋಡಿಸಿದ ವೈದ್ಯೆಯ ಬಂಧನ



ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ

ದೆಹಲಿಯಲ್ಲಿ ಕಾರು ಸ್ಫೋಟಗೊಳ್ಳುತ್ತಿದ್ದಂತೆ ದೇಶದ ಪ್ರಮುಖ ನಗರಗಳಾದ ಮುಂಬೈ, ಕೋಲ್ಕತ್ತಾ, ಉತ್ತರ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮುಂಬೈಯ ಎಲ್ಲ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಜಾಗರೂಕರಾಗಿರಲು ಸೂಚಿಸಲಾಗಿದೆ. ರೈಲ್ವೆ ನಿಲ್ದಾಣಗಳು, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳು ಸೇರಿದಂತೆ ಜನದಟ್ಟಣೆ ಮತ್ತು ಸೂಕ್ಷ್ಮ ವಲಯಗಳಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ನಿರ್ದೇಶನ ನೀಡಲಾಗಿದೆ.

ದಾಳಿಯ ನಂತರ ಉತ್ತರ ಪ್ರದೇಶ ಪೊಲೀಸರು ಕಟ್ಟೆಚ್ಚರದಲ್ಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಪೊಲೀಸರಿಗೆ ಎಚ್ಚರಿಕೆಯ ನಿರ್ದೇಶನಗಳನ್ನು ನೀಡಿದ್ದಾರೆ. ಎಲ್ಲ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರದಲ್ಲಿರುವಂತೆ ನಿರ್ದೇಶಿಸಲಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದ್ದು, ಪೊಲೀಸರು ಎಲ್ಲ ಘಟಕಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಗರದಾದ್ಯಂತ ನಾಕಾ ತಪಾಸಣೆಗಳು ಆರಂಭವಾಗಿವೆ.