ದೆಹಲಿ, ಮಾರ್ಚ್ 13: ಅಮೆರಿಕ-ಇಸ್ರೇಲ್-ಇರಾನ್ ಯುದ್ಧ (US-Israel-Iran War) ಮುಂದುವರಿದಿದ್ದು, ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟು (LPG Crisis) ತಲೆದೋರಿದೆ. ಕರ್ನಾಟಕ ಸೇರಿ ದೇಶದ ಬಹುತೇಕ ಕಡೆ ವಾಣಿಜ್ಯ ಸಿಲಿಂಡರ್ ಸಮಸ್ಯೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದುವರೆಗೆ ಗೃಹ ಬಳಕೆಯ ಎಲ್‌ಪಿಜಿ ವಿತರಣೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಿದ್ದರೂ ದೇಶಾದ್ಯಂತ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿದ್ದಾರೆ. ಎಲ್‌ಪಿಜಿ ಖಾಲಿಯಾಗಬಹುದೆಂಬ ಆತಂಕದಲ್ಲಿ ಬಹುತೇಕರು ಬುಕ್ ಮಾಡುತ್ತಿದ್ದು, ಒಮ್ಮಿಂದೊಮ್ಮೆಲೇ ಬೇಡಿಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಕೇಂದ್ರ ಸರ್ಕಾರವು ದೇಶೀಯ ಎಲ್‌ಪಿಜಿ ಉತ್ಪಾದನೆಯಲ್ಲಿ ಶೇ. 30ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದು, ಯಾವುದೇ ರೀತಿಯ ಭಯ ಬೇಡ ಎಂದು ಭರವಸೆ ನೀಡಿದೆ. ಗೃಹ ಬಳಕೆಯ ಎಲ್‌ಪಿಜಿ ಸರಬರಾಜು ಎಂದಿನಂತೆ ಸರಾಗವಾಗಿ ನಡೆಯುತ್ತಿದೆ ಎಂದು ಹೇಳಿದೆ. ಜತೆಗೆ ವದಂತಿಗೆ ಕಿವಿಗೊಡದಂತೆಯೂ ಮನವಿ ಮಾಡಿದೆ.
ʼʼಯುದ್ಧಕ್ಕಿಂತ ಮೊದಲು ಎಲ್‌ಪಿಜಿ ಬುಕಿಂಗ್ ಪ್ರತಿದಿನ ಸರಾಸರಿ 55.7 ಲಕ್ಷ ಆಗಿದ್ದರೆ, ಈಗ ಅದು 75.7 ಲಕ್ಷಕ್ಕೆ ತಲುಪಿದೆʼʼ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ. ʼʼಗ್ರಾಹಕರು ಬೆಚ್ಚಿಬಿದ್ದು ಬುಕಿಂಗ್ ಮಾಡುತ್ತಿರುವುದರಿಂದ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆʼʼ ಎಂದು ಅವರು ವಿವರಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಬಗ್ಗೆ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರಿಂದ ಮಾಹಿತಿ:
ಕೊರತೆ ಇಲ್ಲ; ಭಯ ಬೇಡ
''ಗೃಹ ಬಳಕೆಯ ಎಲ್‌ಪಿಜಿ ವಿಚಾರದಲ್ಲಿ ಯಾವುದೇ ಭಯ ಬೇಡ. ನಮ್ಮಲ್ಲಿ ಸಾಕಷ್ಟು ದಾಸ್ತಾನಿದೆ. ಜತೆಗೆ ದೇಶೀಯ ಎಲ್‌ಪಿಜಿ ಉತ್ಪಾದನೆ ಶೇ. 30ರಷ್ಟು ಏರಿಕೆಯಾಗಿದೆ. ಯಾವುದೇ ವದಂತಿಯನ್ನು ನಂಬಬೇಡಿʼʼ ಎಂದಿದ್ದಾರೆ.
ಇಂಧನ ಕೊರತೆ ನೀಗಲು ಭಾರತ ಕೈಗೊಂಡ ಕ್ರಮಗಳು ಏನೇನು?
ಸುಜಾತಾ ಶರ್ಮಾ ಹೇಳಿದ್ದೇನು?
ಎಲ್‌ಪಿಜಿ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದ ಅವರು, "ಮನೆಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸಲಾಗಿದೆ. ಅದೇ ರೀತಿ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಎಲ್‌ಪಿಜಿ ಸರಬರಾಜು ಪೂರೈಸಲಾಗುತ್ತಿದೆ. ಶುಕ್ರವಾರದಿಂದ (ಮಾರ್ಚ್ 13) ದೇಶೀಯ ಎಲ್‌ಪಿಜಿ ಉತ್ಪಾದನೆಯು ಶೇ. 30ರಷ್ಟು ಹೆಚ್ಚಾಗಿದೆ. ಮಾರ್ಚ್ 5ಕ್ಕೆ ಹೋಲಿಸಿದರೆ ನಮ್ಮ ಸಂಸ್ಕರಣಾಗಾರಗಳು ಪ್ರಸ್ತುತ ಶೇ. 30ರಷ್ಟು ಹೆಚ್ಚಿನ ಎಲ್‌ಪಿಜಿಯನ್ನು ಉತ್ಪಾದಿಸುತ್ತಿವೆ. ಆದ್ಯತೆಯ ಮಾನದಂಡಗಳನ್ನು ನಿರ್ಧರಿಸಲು ಮತ್ತು ವಾಣಿಜ್ಯ ಸಿಲಿಂಡರ್‌ಗಳು ಉದ್ದೇಶಿತ ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳಲು ನಾವು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದೇವೆʼʼ ಎಂದು ಮಾಹಿತಿ ನೀಡಿದ್ದಾರೆ.
ಕಚ್ಚಾ ತೈಲದ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ. ʼʼಭಾರತವು ಈಗ 40 ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿರುವುದರಿಂದ, ಒಳಹರಿವು ದೈನಂದಿನ ಅಗತ್ಯವಾದ 550 ಕೋಟಿ ಬ್ಯಾರೆಲ್ ಮೀರುತ್ತಿದೆʼʼ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ಭಾರತದ ಹಡಗುಗಳಿಗೆ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಲಾಗಿದೆ ಎಂಬ ವರದಿಯನ್ನು ಇರಾನ್ ತಳ್ಳಿ ಹಾಕಿದೆ.
ಎಲ್‌ಪಿಜಿ ಕೊರತೆ ನಡುವೆಯೂ ಗುಡ್‌ನ್ಯೂಸ್ ಹಂಚಿಕೊಂಡ ಕೇಂದ್ರ; ಉತ್ಪಾದನೆ ಶೇಕಡಾ 25ರಷ್ಟು ಏರಿಕೆ
ಯಾಕಾಗಿ ಈ ಭಯ?
ಭಾರತಕ್ಕೆ ಬೇಕಾದ ಎಲ್ಪಿಜಿಯ ಪೈಕಿ ಶೇ. 60ರಷ್ಟನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲಿ ಶೇ. 90ರಷ್ಟು ಇರಾನ್‌ನ ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಸದ್ಯ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಯುದ್ಧ ಮುಂದುವರಿದಿರುವುದರಿಂದ ಪೂರೈಕೆ ಜಾಲದ ಮೇಲೆ ಪರಿಣಾಮ ಬೀರಬಹುದೆಂಬ ಆತಂಕದಲ್ಲಿ ಗ್ರಾಹಕರು ಈಗಲೇ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡಿದ್ದು, ವಾಣಿಜ್ಯ ಬಳಕೆಯ ಸಿಲಂಡರ್‌ಗೆ ಕೊರತೆ ಎದುರಾಗಿದೆ.