ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಶನಿವಾರ (ಜೂ. 7) ಖಾಸಗಿ ಹೆಲಿಕಾಪ್ಟರ್ (Helicopter) ರಸ್ತೆಯ ಮಧ್ಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ (Emergency Landing) ಆಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಹೆಲಿಕಾಪ್ಟರ್ ರೆಕ್ಕೆ ತಾಗಿ ಪಕ್ಕದಲ್ಲಿ ನಿಲ್ಲಿಸಿದ್ದ ಕಾರನ್ನು ಪುಡಿಪುಡಿಯಾಗಿದೆ. ಕೇದರನಾಥ (Kedarnath) ದೇವಸ್ಥಾನಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ವೇಳೆ ಹೆಲಿಕಾಫ್ಟರ್‌ನಲ್ಲಿ 5 ಪ್ರವಾಸಿಗರಿದ್ದು, ಅವರಿಗೂ ಯಾವುದೂ ತೊಂದರೆಯಾಗಿಲ್ಲ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಹೆಲಿಕಾಪ್ಟರ್ ಮಧ್ಯಾಹ್ನ 12.52ಕ್ಕೆ ಬರಾಸು ನೆಲೆಯಿಂದ ಹೊರಟು 45-50 ನಿಮಿಷಗಳಲ್ಲಿ ಕೇದಾರನಾಥಕ್ಕೆ ತಲುಪಬೇಕಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪೈಲಟ್ ತಾಂತ್ರಿಕ ದೋಷ ಗುರುತಿಸಿದ್ದರು. ಹೀಗಾಗಿ ಅವರು ಹೆಲಿಪ್ಯಾಡ್ ಪಕ್ಕದ ರಸ್ತೆಯಲ್ಲಿ ಹೆಲಿಕಾಪ್ಟರ್ ಇಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Helicopter crash: ಹೆಲಿಕಾಪ್ಟರ್ ಪತನ; 5 ಪ್ರವಾಸಿಗರು ದುರಂತ ಸಾವು
ಕೇದಾರನಾಥ ಹೆಲಿ ಸೇವಾ ನೋಡಲ್ ಅಧಿಕಾರಿ ರಾಹುಲ್ ಚೌಬೆ ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿ, ಈ ಘಟನೆಯು ಕೇದರನಾಥ ದೇವಾಲಯದ ಹೆಲಿಕಾಪ್ಟರ್ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಹೆದ್ದಾರಿಯಲ್ಲಿ ಸಿಲುಕಿಕೊಂಡಿರುವ ಹೆಲಿಕಾಪ್ಟರ್ ಅನ್ನು ತೆಗೆಯಲು ಪ್ರಯತ್ನ ನಡೆಯುತ್ತಿದೆ.
ಹೆಲಿಕಾಪ್ಟರ್ ಡಿಕ್ಕಿ ಹೊಡೆದ ವೇಳೆ ಕಾರಿನೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಹೆಲಿಕಾಪ್ಟರ್ ಪತನವಾಗಿ 6 ಮಂದಿ ಅಸುನೀಗಿದ್ದರು
ಕಳೆದ ತಿಂಗಳು ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನವಾಗಿ 6 ಮಂದಿ ಅಸುನೀಗಿದ್ದರು. ಆ ಘಟನೆ ಮಾಸುವ ಮುನ್ನವೇ ಈ ದುರಂತ ನಡೆದಿದೆ. ಮೇ 8ರಂದು ಗಂಗೋತ್ರಿಗೆ ಯಾತ್ರಾರ್ಥಿಗಳನ್ನು ಕರೆಯೊಯ್ಯುತ್ತಿದ್ದ ಹೆಲಿಕಾಪ್ಟರ್ ಉತ್ತರಕಾಶಿ ಜಿಲ್ಲೆಯ ಗಂಗನಾನಿಯಲ್ಲಿ ಪತನವಾಗಿತ್ತು. ಈ ವೇಳೆ ಐವರು ಮಹಿಳೆಯರು, ಪೈಲಟ್ ಸೇರಿ 6 ಮಂದಿ ಅಸು ನೀಗಿದ್ದರು. ಒಬ್ಬ ಪ್ರಯಾಣಿಕ ಪವಾಡಸದೃಶವಾಗಿ ಪಾರಾಗಿದ್ದ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಂಚಿಕೊಂಡು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದರು.
ಇನ್ನು ಮೇ 12ರಂದು ಬದರಿನಾಥದಿಂದ ಸೆರ್ಸಿಗೆ ಯಾತ್ರಿಕರೊಂದಿಗೆ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್ ಅನ್ನು ಉಖಿಮತ್‌ನ ಶಾಲಾ ಆಟದ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಮಂಜು ಮುಸುಕಿದ ವಾತಾವರಣದಿಂದಾಗಿ ಹಾದಿ ಸ್ಪಷ್ಟವಾಗಿ ಗೋಚರಿಸದೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಎಲ್ಲ ಯಾತ್ರಿಕರು ಸುರಕ್ಷಿತವಾಗಿದ್ದರು. ಹವಾಮಾನ ತಿಳಿಯಾದ ಬಳಿಕ ಸುಮಾರು ಒಂದು ಗಂಟೆಯ ನಂತರ ಹೆಲಿಕಾಪ್ಟರ್ ಮತ್ತೆ ಪ್ರಯಾಣ ಮುಂದುವರಿಸಿತ್ತು.
ಮೇ 17ರಂದು ರಿಷಿಕೇಶ ಏಮ್ಸ್‌ನ ಹೆಲಿ ಅಂಬ್ಯುಲೆನ್ಸ್ ಉತ್ತರಾಖಂಡದ ಕೇದಾರನಾಥ ಹೆಲಿಪ್ಯಾಡ್ ಬಳಿ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಮೂವರು - ವೈದ್ಯರು, ಪೈಲಟ್ ಮತ್ತು ವೈದ್ಯಕೀಯ ಸಿಬ್ಬಂದಿ - ಯಾವುದೇ ಹಾನಿ ಇಲ್ಲದೆ ಪಾರಾಗಿದ್ದರು.