ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿ ರಾಮ್‌ಲೀಲಾ ಮೈದಾನದಲ್ಲಿ ರ‍್ಯಾಲಿ ನಡೆಸಲು ಕಾಂಗ್ರೆಸ್‌ಗೆ ಸಿಕ್ತು ಅನುಮತಿ; ಕಂಡಿಷನ್ಸ್‌ ಅಪ್ಲೈ

Ramlila Protest Rally: ಜ್ಞಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸಬೇಕೆಂದು ಪಟ್ಟು ಹಿಡಿದು ನವೆಂಬರ್‌ 1ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟ ಆಯೋಜಿಸಿರುವ ಬೃಹತ್‌ ರ‍್ಯಾಲಿಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಜತೆಗೆ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

ಸಾಂದರ್ಭಿಕ ಚಿತ್ರ

ದೆಹಲಿ, ಅ. 27: ವಿಪಕ್ಷಗಳ ಎಸ್‌ಐಆರ್‌, ಮತಕಳವು ಆರೋಪ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ (Gyanesh Kumar) ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆ ಈಗಾಗಲೇ ವಿಫಲವಾಗಿದ್ದು, ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ. ಜ್ಞಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸಬೇಕೆಂದು ಪಟ್ಟು ಹಿಡಿದು ನವೆಂಬರ್‌ 1ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಆಯೋಜಿಸಿರುವ ಈ ಬೃಹತ್‌ ರ‍್ಯಾಲಿಗೆ (Ramlila Protest Rally) ಇದೀಗ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಜತೆಗೆ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

ಇಂಡಿಯಾ ಮೈತ್ರಿಕೂಟಕ್ಕೆ ದೆಹಲಿ ಪೊಲೀಸರಿಂದ ಅನುಮತಿ ಪತ್ರ (NOC) ಲಭಿಸಿದೆ. ಈ ಅನುಮತಿಯು ಜನಸಂದಣಿ ನಿರ್ವಹಣೆ, ಸಿಸಿಟಿವಿ ಕ್ಯಾಮರಾ ಕಣ್ಗಾವಲು, ಸಾರಿಗೆ ವ್ಯವಸ್ಥೆ ಹಾಗೂ ಕಾರ್ಯಕ್ರಮ ಮುಗಿದ ನಂತರ ಜನರು ಸ್ಥಳದಿಂದ ತೆರಳಬೇಕಾದ ಸಮಯದ ಮಿತಿಯಂತಹ ಹಲವು ಷರತ್ತುಗಳನ್ನು ಒಳಗೊಂಡಿದೆ.

ಕಾಂಗ್ರೆಸ್‌ ಎಕ್ಸ್‌ ಪೋಸ್ಟ್‌:



ಯಾಕಾಗಿ ಈ ಬೃಹತ್‌ ರ‍್ಯಾಲಿ?

ಮತಕಳವು ವಿರೋಧಿಸಿ ಬೃಹತ್‌ ರ‍್ಯಾಲಿಗೆ ಆಯೋಜಿಸಲು ಇದೀಗ ವಿಪಕ್ಷ ಸಜ್ಜಾಗಿದೆ. ಈ ರ‍್ಯಾಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೊಣೆಗಾರಿಕೆಯನ್ನು ಜ್ಞಾನೇಶ್ ಕುಮಾರ್ ಹೊತ್ತುಕೊಳ್ಳಬೇಕೆಂದು ಆಗ್ರಹಿಸಲಾಗುತ್ತದೆ. ಜತೆಗೆ ಅವರ ರಾಜೀನಾಮೆಗೂ ಪಟ್ಟು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಈ ಹೋರಾಟಕ್ಕೆ 10 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು, ಭಾಗವಹಿಸುವಂತೆ ದೇಶಾದ್ಯಂತ ಇರುವ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಕರೆ ನೀಡಿದೆ. ರ‍್ಯಾಲಿಯು ನವೆಂಬರ್ 1ರ ಬೆಳಗ್ಗೆ 10ರಿಂದ ಸಂಜೆ 5ರ ತನಕ ನಡೆಯಲಿದೆ.

ಎಸ್‌ಐಆರ್‌ ವಿರುದ್ಧ ಕಾಂಗ್ರೆಸ್‌ ಹೋರಾಟ ತೀವ್ರ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆಗೆ ಖರ್ಗೆ ಆಗ್ರಹ

ಷರತ್ತುಗಳು

ರ‍್ಯಾಲಿಗೆ ಅನುಮತಿ ನೀಡಿದ ದೆಹಲಿ ಪೊಲೀಸರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ. ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ವೇದಿಕೆ, ರಾಮ್‌ಲೀಲಾ ಮೈದಾನದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಆಸನ ವ್ಯವಸ್ಥೆ ಇರುವ ಸ್ಥಳಗಳು ಸೇರಿ ಪ್ರಮುಖ ಕಡೆಗಳಲ್ಲಿ ಹೈ-ಡೆಫನಿಷನ್ (HD) ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಲಾಗಿದೆ. ಈ ಕಣ್ಗಾವಲು ವ್ಯವಸ್ಥೆಯಲ್ಲಿ ದೃಶ್ಯಗಳನ್ನು ದಾಖಲಿಸುವ ಸೌಲಭ್ಯ, ಕನಿಷ್ಠ ಐದು ಪರದೆಗಳನ್ನು ಹೊಂದಿರುವ ಮೇಲ್ವಿಚಾರಣಾ ವ್ಯವಸ್ಥೆ ಮತ್ತು ಪ್ರತ್ಯೇಕ ಸಿಸಿಟಿವಿ ನಿಯಂತ್ರಣ ಕೊಠಡಿ ಇರಬೇಕು ಎಂದು ತಿಳಿಸಿದೆ.

ಆಯೋಜಕರು ಸಾಕಷ್ಟು ನೀರಿನ ಟ್ಯಾಂಕರ್‌ಗಳು ಮತ್ತು ಶೌಚಾಲಯ ಘಟಕಗಳನ್ನು ಒದಗಿಸಬೇಕು. ಇದರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸೌಲಭ್ಯಗಳಿರಬೇಕು. ಅಲ್ಲದೆ, ಜನಸಂದಣಿಯನ್ನು ನಿರ್ವಹಿಸಲು ಅಗತ್ಯ ಸಂಖ್ಯೆಯ ಸ್ವಯಂಸೇವಕರನ್ನು ನಿಯೋಜಿಸಬೇಕು. ಸ್ವಯಂಸೇವಕರನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಒಂದೇ ರೀತಿಯ ಉಡುಪು ಅಥವಾ ಬ್ಯಾಡ್ಜ್‌ಗಳನ್ನು ಹೊಂದಿರಬೇಕು.

ನವೆಂಬರ್ 1ರಂದು ಸಂಜೆ 5 ಗಂಟೆಗೆ ರ‍್ಯಾಲಿಯು ಕೊನೆಗೊಳ್ಳಬೇಕು ಮತ್ತು ಆ ನಂತರ ಎಲ್ಲರೂ ಅಲ್ಲಿಂದ ತೆರಳಬೇಕು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮದ ಅವಧಿಯನ್ನು ವಿಸ್ತರಿಸಲು ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ ರ‍್ಯಾಲಿಗೆ ಅನುಮತಿ:



ರ‍್ಯಾಲಿಯ ಮೊದಲು ಅಥವಾ ನಂತರ ಭಾಗವಹಿಸುವವರು ರಾಮ್‌ಲೀಲಾ ಮೈದಾನದಲ್ಲಿ ರಾತ್ರಿ ಯಾವುದೇ ಕಾರಣಕ್ಕೂ ಉಳಿಯಬಾರದು. ಇದನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು. ಎಲ್ಲ ಬಸ್‌, ಕಾರ್‌, ಟೆಂಪೋಗಳು ಮತ್ತು ಇತರ ವಾಹನಗಳನ್ನು ಸಂಚಾರ ಪೊಲೀಸರು ನಿಗದಿಪಡಿಸಿದ ಸ್ಥಳಗಳಲ್ಲಿಯೇ ನಿಲ್ಲಿಸಬೇಕು.

ರ‍್ಯಾಲಿಯು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಹಾಗೂ ಭಾಗವಹಿಸುವವರು ಯಾವುದೇ ರೀತಿಯ ಗದ್ದಲ ಅಥವಾ ಅಶಿಸ್ತಿನ ವರ್ತನೆಯಲ್ಲಿ ತೊಡಗದಂತೆ ನೋಡಿಕೊಳ್ಳಬೇಕೆಂದು ಪೊಲೀಸರು ಆಯೋಜಕರಿಗೆ ಸೂಚಿಸಿದ್ದಾರೆ. ರಾಮ್‌ಲೀಲಾ ಮೈದಾನವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದ ಕಡೆಗೆ ಮೆರವಣಿಗೆ ನಡೆಸುವುದನ್ನು ಪೊಲೀಸರು ನಿಷೇಧಿಸಿದ್ದಾರೆ.

ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಕೇಂದ್ರ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆಶಿ ಒತ್ತಾಯ

ವ್ಯಾಪಾರಿಗಳಿಂದ ವಿರೋಧ

ದೀಪಾವಳಿಯ ವ್ಯಾಪಾರ ನಡೆಯುತ್ತಿರುವ ಸಂದರ್ಭದಲ್ಲೇ ಈ ರ‍್ಯಾಲಿ ಆಯೋಜಿಸಿರುವುದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಶಾಪಿಂಗ್‌ ಋತುವಿನಲ್ಲೇ ನಡೆಯುವ ಈ ಪ್ರತಿಭಟನೆಯಿಂದ ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂದು ವ್ಯಾಪಾರಿಗಳ ಸಂಘ ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author