ರಾಂಚಿ: ಜಾರ್ಖಂಡ್‌ನ ಗುಡ್ಡಗಾಡು ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಸ್ಫೋಟದಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದು, ಪ್ಯಾರಾಮಿಲಿಟರಿ ಸಿಬ್ಬಂದಿ ಗಾಯಗೊಂಡಿದ್ದಾರೆ. ರಾಜ್ಯದ ಗುಡ್ಡಗಾಡು ಪ್ರದೇಶ ಚೈಬಾಸಾದಲ್ಲಿ ಮಾವೋವಾದಿಗಳು ಇರಿಸಿದ್ದ ಸುಧಾರಿತ ಸ್ಫೋಟಕ ವಸ್ತು (IED) ಸ್ಫೋಟಗೊಂಡ ಪರಿಣಾಮ ಪೊಲೀಸ್ ಅಧಿಕಾರಿ ಸುನಿಲ್ ಧನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಪ್ಯಾರಾಮಿಲಿಟರಿ ಸಿಬ್ಬಂದಿ ವಿಷ್ಣು ಸೈನಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ʼʼಚೈಬಾಸಾ ಪ್ರದೇಶದಲ್ಲಿ ನಡೆಸಿದ್ದ ತಪಾಸಣೆ ವೇಳೆ ಮಾವೋವಾದಿಗಳು ಇರಿಸಿದ್ದ ಸುಧಾರಿತ ಐಇಡಿ ಸ್ಫೋಟಗೊಂಡು ಪೊಲೀಸ್ ಅಧಿಕಾರಿ ಸುನಿಲ್ ಧನ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಕೋಬ್ರಾ ಘಟಕದ ವಿಷ್ಣು ಸೈನಿ ಕೂಡ ಗಾಯಗೊಂಡಿದ್ದರು. ಇಬ್ಬರನ್ನು ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ನಲ್ಲಿ ರಾಜ್ಯ ರಾಜಧಾನಿ ರಾಂಚಿಗೆ ಕರೆದೊಯ್ಯಲಾಯಿತು. ಆದರೆ ಈ ವೇಳೆ ಗಂಭೀರ ಗಾಯಗೊಂಡಿದ್ದ ಸುನಿಲ್ ಧನ್ ಮೃತಪಟ್ಟಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.
ಎಎನ್‌ಐ ಸುದ್ದಿಸಂಸ್ಥೆಯ ಎಕ್ಸ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Naxal Encounter: ಭದ್ರತಾ ಪಡೆಗಳ ಭರ್ಜರಿ ಬೇಟೆ: ಗುಂಡಿನ ಚಕಮಕಿಯಲ್ಲಿ 31 ನಕ್ಸಲರ ಎನ್‌ಕೌಂಟರ್!
ʼʼಘಟನೆಯಲ್ಲಿ ಕೋಬ್ರಾ 203 ಬೆಟಾಲಿಯನ್ ಮತ್ತು ಜಾರ್ಖಂಡ್ ಜಾಗ್ವಾರ್‌ನ ಇಬ್ಬರು ಜವಾನರೂ ಗಾಯಗೊಂಡಿದ್ದಾರೆ. ಇಬ್ಬರನ್ನೂ ಉತ್ತಮ ಚಿಕಿತ್ಸೆಗಾಗಿ ರಾಂಚಿಗೆ ಕರೆದೊಯ್ಯಲಾಗಿದೆʼʼ ಎಂದು ಕೊಲ್ಹಾನ್ ಡಿಐಜಿ ಮನೋಜ್ ರತನ್ ಚೋಥೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ʼʼಈ ಪ್ರದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಭದ್ರತಾ ಪಡೆಗಳು ಹಲವು ಐಇಡಿಗಳನ್ನು ನಿಷ್ಕ್ರಿಯಗೊಳಿಸಿವೆʼʼ ಎಂದು ಚೋಟೆ ಮಾಹಿತಿ ನೀಡಿದ್ದಾರೆ.
ಎನ್‌ಕೌಂಟರ್‌ನಲ್ಲಿ 2 ನಕ್ಸಲರು ಫಿನೀಶ್; ಯೋಧ ಹುತಾತ್ಮ
ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿಇಬ್ಬರು ಶಂಕಿತ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿತ್ತು. ಇನ್ನು ಈ ಕಾರ್ಯಾಚರಣೆ ವೇಳೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಒಬ್ಬ ಸೈನಿಕ ಹುತಾತ್ಮರಾಗಿದ್ದರು. ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ನಡೆದಿದ್ದು, ಗಂಗಲೂರು ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಹತರಾದ ನಕ್ಸಲರಿಂದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇನ್ನು ಮಾ. 9ರಂದು ಬಿಜಾಪುರದಲ್ಲಿ 11 ಮಹಿಳೆಯರು ಸೇರಿದಂತೆ ಕನಿಷ್ಠ 31 ಶಂಕಿತ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿತ್ತು. ಅವರಲ್ಲಿ ಕೇವಲ ಐವರ ಗುರುತು ಪತ್ತೆಯಾಗಿತ್ತು. ಎನ್‌ಕೌಂಟರ್ ನಡೆದ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ 1 ಎಕೆ - 47 ರೈಫಲ್, 1 ಎಸ್‌ಎಲ್‌ಆರ್ ರೈಫಲ್, 1 ಐಎನ್‌ಎಸ್‌ಎಎಸ್ ರೈಫಲ್, 1 .303 ರೈಫಲ್, 1 .315 ಬೋರ್ ರೈಫಲ್, 1 ಸ್ಟ್ಯಾಂಡ್‌ನೊಂದಿಗೆ 1 ಬಿಜಿಎಲ್ ರಾಕೆಟ್ ಲಾಂಚರ್ (ದೊಡ್ಡದು), 6 ಬಿಜಿಎಲ್ ಲಾಂಚರ್‌ಗಳು ಮತ್ತು ಲೇಸರ್ ಪ್ರಿಂಟರ್‌ಗಳು ಸೇರಿದ್ದವು.