ಲಖನೌ, ನ. 25: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (UP Election 2027) ಇನ್ನೂ ಸಮಯವಿರುವಾಗಲೇ, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುರಿತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ (Keshav Prasad Maurya) ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಜೌನ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ಬಿಜೆಪಿಯ ಮುಖ ಕಮಲದ ಹೂವು ಆಗಿರುತ್ತದೆ ಹೊರತು ಯಾವುದೇ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ. "ಭವಿಷ್ಯದಲ್ಲಿ ಯೋಗಿ ಆದಿತ್ಯನಾಥ್ ಅವರು ಸಿಎಂ ಆಗುತ್ತಾರೋ ಅಥವಾ ಬೇರೊಬ್ಬರು ಆಗುತ್ತಾರೋ ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ" ಎಂದು ಮೌರ್ಯ ಹೇಳಿರುವುದು ಕುತೂಹಲ ಮೂಡಿಸಿದೆ.
ಕೇಶವ ಪ್ರಸಾದ್ ಮೌರ್ಯ ನೀಡಿರುವ ಹೇಳಿಕೆ ವಿಡಿಯೋ ನೋಡಿ
ಕಮಲದ ಹೂವೇ ನಮ್ಮ ಚುನಾವಣಾ ಮುಖ
2027ರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿ ಬಿಜೆಪಿ ಕಣಕ್ಕಿಳಿಯಲಿದೆಯೇ ಎಂಬ ಪ್ರಶ್ನೆಗೆ ಮೌರ್ಯ ನೇರವಾಗಿ ಪ್ರತಿಕ್ರಿಯಿಸಿದರು. "ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಮುಖ ಕಮಲದ ಹೂವಾಗಿರುತ್ತದೆ ಮತ್ತು ಕಮಲದ ಚಿಹ್ನೆಯ ಆಧಾರದ ಮೇಲೆಯೇ ನಾವು ಚುನಾವಣೆ ಎದುರಿಸುತ್ತೇವೆ" ಎಂದು ಅವರು ತಿಳಿಸಿದರು. ಪಕ್ಷವು ಎಲ್ಲ ರಾಜ್ಯಗಳಲ್ಲೂ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಕಮಲ ಅರಳಿದ ಬಳಿಕ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿಯ ಮುಖ್ಯಮಂತ್ರಿಯೇ ಅಧಿಕಾರಕ್ಕೆ ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬ್ನಲ್ಲಿ ಮತ್ತೆ ಬಿಜೆಪಿ-ಶಿರೋಮಣಿ ಅಕಾಲಿ ದಳ ಮೈತ್ರಿ
ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮ ನಿರ್ಧಾರ
ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯನ್ನು ವಿವರಿಸಿದ ಕೇಶವ ಪ್ರಸಾದ್ ಮೌರ್ಯ, "ಚುನಾವಣೆ ಮುಗಿದು ಶಾಸಕರು ಆಯ್ಕೆಯಾದ ನಂತರ, ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಆ ಸಭೆಯಲ್ಲಿ ಸರ್ವಾನುಮತದಿಂದ ಯಾರನ್ನು ಆಯ್ಕೆ ಮಾಡಲಾಗುತ್ತದೆಯೋ ಅವರೇ ರಾಜ್ಯವನ್ನು ಮುನ್ನಡೆಸಲಿದ್ದಾರೆ" ಎಂದರು. ಪ್ರಸ್ತುತ ಯೋಗಿ ಆದಿತ್ಯನಾಥ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರಿಗೆ ನನ್ನ ಬೆಂಬಲವಿದೆ ಎಂದು ಮೌರ್ಯ ಇದೇ ವೇಳೆ ಸ್ಪಷ್ಟಪಡಿಸಿದರು.
ಯೋಗಿ ಜೊತೆ ಭಿನ್ನಾಭಿಪ್ರಾಯವಿಲ್ಲ ಎಂದ ಡಿಸಿಎಂ
ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಲು ಹಿಂಜರಿಯುತ್ತಿದ್ದೀರಾ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಕೇಶವ ಪ್ರಸಾದ್ ಮೌರ್ಯ, "ಪ್ರಸ್ತುತ ಯೋಗಿ ಆದಿತ್ಯನಾಥ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರಿಗೆ ನನ್ನ ಬೆಂಬಲವಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ವಿರೋಧ ಪಕ್ಷಗಳು ಇಲ್ಲಸಲ್ಲದ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿವೆ" ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಕುರಿತು ಟೀಕಿಸಿದ ಮೌರ್ಯ, 2027ರ ವಿಧಾನಸಭಾ ಚುನಾವಣೆಯಲ್ಲೂ ಉತ್ತರ ಪ್ರದೇಶದಲ್ಲಿ ಕಮಲ ಅರಳಲಿದ್ದು, ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಶವ ಪ್ರಸಾದ ಹೇಳಿಕೆಗೆ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ, ವಿಡಿಯೋ ನೋಡಿ:
'ಯಾರು ಏನು ಎಂಬುದು ಎಲ್ಲರಿಗೂ ಗೊತ್ತಿದೆ' ಎಂದ ಯೋಗಿ ಆದಿತ್ಯನಾಥ್
ಎಬಿಪಿ ಶಿಖರ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 2027ರ ಚುನಾವಣೆಯಲ್ಲಿ ಕಮಲದ ಚಿಹ್ನೆಯೇ ಸಿಎಂ ಮುಖವಾಗಿರಲಿದೆ ಎಂಬ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದರು. "ಕಮಲದ ಚಿಹ್ನೆಯ ಮೇಲೆಯೇ ಪ್ರತಿಯೊಬ್ಬರೂ ಚುನಾವಣೆ ಎದುರಿಸಬೇಕು. ನಾನೂ ಕೂಡ ಕಮಲದ ಚಿಹ್ನೆಯ ಮೇಲೆಯೇ ಸ್ಪರ್ಧಿಸುತ್ತೇನೆ" ಎಂದು ಅವರು ಹೇಳಿದರು.
"ನಮ್ಮ ಪಾಲಿಗೆ ಕಮಲದ ಹೂವೇ ಸರ್ವಸ್ವ, ಇನ್ನು ಯಾರು ಏನು ಎಂಬುದು ಎಲ್ಲರಿಗೂ ತಿಳಿದಿದೆ" ಎಂದು ಮಾರ್ಮಿಕವಾಗಿ ನುಡಿದರು. ಈ ಮೂಲಕ ಚುನಾವಣಾ ನಾಯಕತ್ವ ಮತ್ತು ಪಕ್ಷದ ಸಂಘಟನೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.