ಲಖನೌ: ಆರ್ಥಿಕ ಸಂಕಷ್ಟ ಮತ್ತು ವಿಪರೀತ ಸಾಲದ ಸುಳಿಗೆ ಸಿಲುಕಿದ ದಂಪತಿ ತಮ್ಮ ನಾಲ್ಕು ತಿಂಗಳ ಮಗುವಿಗೆ ವಿಷ ಉಣಿಸಿ, ನಂತರ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ದಂಪತಿ ಮತ್ತು ಮಗುವಿನ ಮೃತದೇಹ ಮನೆಯ ಕೋಣೆಗಳಲ್ಲಿ ಪತ್ತೆಯಾಗಿದೆ. ವ್ಯವಹಾರದಲ್ಲಿ ನಷ್ಟ ಹಾಗೂ ಆರ್ಥಿಕ ಆದಾಯದ ಕೊರತೆಯಿಂದ ದಂಪತಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹ್ಯಾಂಡ್‌ಲೂಮ್ ವ್ಯಾಪಾರಿಯಾಗಿದ್ದ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಹಾಗೂ ತಮ್ಮ ನಾಲ್ಕು ತಿಂಗಳ ಮಗು ಫತೇಹ್ ಜತೆ ವಾಸವಾಗಿದ್ದರು. ದಂಪತಿ ತಮ್ಮ 4 ತಿಂಗಳ ಮಗುವಿಗೆ ಮೊದಲು ವಿಷ ನೀಡಿ ನಂತರ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗುವಿನ ದೇಹ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ ಮನೆಯ ಸಂಬಂಧಿಕರು ಪ್ರತ್ಯೇಕ ಕೊಠಡಿಗಳಲ್ಲಿ ಮೂವರ ಶವಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಡೆತ್‌ನೋಟ್ ಸಿಕ್ಕಿದ್ದು ಅದರಲ್ಲಿ ಸಚಿನ್, "ನಾನು ಸಾಲದ ಕಾರಣ ತೀವ್ರ ಆತಂಕದಲ್ಲಿದ್ದೇನೆ. ನನ್ನ ಕುಟುಂಬದ ಬಗ್ಗೆ ಯಾವುದೇ ದೂರುಗಳಿಲ್ಲ. ಅವರೆಲ್ಲರೂ ನನಗೆ ಬೆಂಬಲ ನೀಡಿದ್ದಾರೆʼʼ ಎಂದು ಉಲ್ಲೇಖ ಮಾಡಿದ್ದಾರೆ.
ಇದನ್ನು ಓದಿ:Crime News: ಜಾಮೀನಿನ ಮೇಲೆ ಬಂದು ಕೊಲೆ ಆರೋಪಿ ಅತ್ತಿಗೆಯನ್ನು ಕೊಂದ; ಕಾರಣವೇನು?
ಪತ್ರದಲ್ಲಿ "ದಯವಿಟ್ಟು ನಮ್ಮ ಕಾರು ಮತ್ತು ಮನೆಯನ್ನು ಮಾರಿ ಸಾಲ ತೀರಿಸಿ. ಇದರಿಂದ ನಮ್ಮ ಸಾಲ ತೀರಿಸಿಲ್ಲ ಎಂದು ಯಾರೂ ಹೇಳದಂತೆ ನೋಡಿಕೊಳ್ಳಿ" ಎಂದು ಬರೆದಿದ್ದಾರೆ. ಸಚಿನ್ ಅವರ ತಾಯಿ, ಮಂಗಳವಾರ ಸಂಜೆ ಸಚಿನ್ ಐದು ಲಕ್ಷ ರೂ. ಬ್ಯಾಂಕಿಗೆ ಕಟ್ಟ ಬೇಕಾಗಿತ್ತು. ಕೇವಲ 3 ಲಕ್ಷ ರೂ. ಮಾತ್ರ ಹೊಂದಿಸಲು ಸಾಧ್ಯವಾಗಿತ್ತು. ಇದರಿಂದ ಅವರು ತೀವ್ರವಾಗಿ ನೊಂದಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ದಂಪತಿ ತಮ್ಮ ಮಗುವಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ಮೂಲಕ ತಿಳಿದು ಬಂದಿದೆ.