ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಂಗಾಳಕೊಲ್ಲಿಯಲ್ಲಿ 'ಅಕ್ವಾನ್' ಚಂಡಮಾರುತದ ಭೀತಿ: ಎಲ್ಲೆಲ್ಲಿ ಹೈ ಅಲರ್ಟ್? ಈ ಹೆಸರಿನ ಅರ್ಥವೇನು?

Cyclone Akvan: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಕ್ವಾನ್ ಚಂಡಮಾರುತ ಈಗ ಆಂಧ್ರಪ್ರದೇಶ ಕರಾವಳಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಲಭಿಸಿದೆ. ಈ ಚಂಡಮಾರುತಕ್ಕೆ 'ಅಕ್ವಾನ್' ಎಂದು ಹೆಸರಿಸಲಾಗಿದ್ದು, ಈ ಚಂಡಮಾರುತದ ಹೆಸರಿನ ಅರ್ಥ ಮತ್ತು ಮೂಲದ ಕುರಿತು ಇದೀಗ ಭಾರಿ ಕುತೂಹಲ ಮೂಡಿದೆ.

ಬಂಗಾಳಕೊಲ್ಲಿಯಲ್ಲಿ 'ಅಕ್ವಾನ್' ಚಂಡಮಾರುತದ ಭೀತಿ

ಬೆಂಗಳೂರು, ನ.17: ಬಂಗಾಳಕೊಲ್ಲಿಯಲ್ಲಿ (Bay of Bengal) ಎದ್ದಿರುವ ಹೊಸ ಚಂಡಮಾರುತವು ಕರಾವಳಿ ತೀರದತ್ತ ವೇಗವಾಗಿ ಚಲಿಸುತ್ತಿದ್ದು, ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿ ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದ್ದು, ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನವೆಂಬರ್ 17ರ ಸಂಜೆ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ನವೆಂಬರ್ 19ರ ವೇಳೆಗೆ ಅತಿ ತೀವ್ರ ಸೈಕ್ಲೋನ್ ಆಗಿ ರೂಪಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ 16ರ ರಾತ್ರಿ 11.30ರ ವೇಳೆಗೆ ಚಂಡಮಾರುತವು ದಕ್ಷಿಣ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ ಬಹುತೇಕ ಒಂದೇ ಸ್ಥಳದಲ್ಲಿ ಸ್ಥಿರವಾಗಿತ್ತು. ಚೆನ್ನೈನಿಂದ ಸುಮಾರು 610 ಕಿ.ಮೀ. ಪೂರ್ವಕ್ಕೆ, ಮಚಲಿಪಟ್ಟಣಂನಿಂದ 660 ಕಿ.ಮೀ. ಆಗ್ನೇಯಕ್ಕೆ ಹಾಗೂ ವಿಶಾಖಪಟ್ಟಣಂನಿಂದ 670 ಕಿ.ಮೀ. ದಕ್ಷಿಣ-ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದಲ್ಲಿ ಹೈ ಅಲರ್ಟ್‌ ಘೋಷಣೆ

ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಒಡಿಶಾ ಸರ್ಕಾರವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದಕ್ಷಿಣ ಜಿಲ್ಲೆಗಳಲ್ಲಿನ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಈಗಾಗಲೇ ಚುರುಕುಗೊಳಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 74 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಆಂಧ್ರ ಕರಾವಳಿಗೆ ಅಪ್ಪಳಿಸಿದ ಮುರಸು ಚಂಡಮಾರುತ; ಭಾರೀ ಮಳೆ, ವಿಮಾನ ಹಾರಾಟ ರದ್ದು, ಶಾಲೆಗಳಿಗೆ ರಜೆ

ಅಕ್ವಾನ್ ಸೋಮವಾರ ಸಂಜೆ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ನವೆಂಬರ್ 16 ರಿಂದ 21ರವರೆಗೆ ಸಮುದ್ರಕ್ಕೆ ಇಳಿಯದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಿದೆ. ಕಳೆದ ಒಂದು ತಿಂಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ 3ನೇ ಚಂಡಮಾರುತ ಇದಾಗಿದ್ದು, ಅನರ್ಬ್ ಮತ್ತು ಮುರಸು ಹೆಸರಿನ ಚಂಡಮಾರುತಗಳು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದವು. ಈಗ ಅಕ್ವಾನ್ ಕೂಡ ಅಪ್ಪಳಿಸಿದರೆ 1987 ನಂತರ 28 ದಿನಗಳಲ್ಲಿ ಮೂರು ಚಂಡಮಾರುತಗಳನ್ನು ಎದುರಿಸಿದ ಮೊದಲ ರಾಜ್ಯ ಆಂಧ್ರಪ್ರದೇಶವಾಗುತ್ತದೆ.

'ಅಕ್ವಾನ್' ಹೆಸರಿನ ಅರ್ಥವೇನು?

'ಅಕ್ವಾನ್' ಎಂಬುದು ಪರ್ಷಿಯನ್ ಭಾಷೆಯ ಪದವಾಗಿದ್ದು, ಪ್ರಾಚೀನ ಇರಾನಿನ ಪುರಾಣ ಮತ್ತು ಮಹಾಕಾವ್ಯ 'ಶಾಹನಾಮೆ'ಯಲ್ಲಿ ಬರುವ ಪ್ರಮುಖ ಪಾತ್ರದ ಹೆಸರಾಗಿದೆ. ಇರಾನಿನ ದಂತಕಥೆಗಳ ಪ್ರಕಾರ, ಅಕ್ವಾನ್ ಎಂಬುದು ದೈತ್ಯ ಶಕ್ತಿಯನ್ನು ಹೊಂದಿರುವ ಹಾಗೂ ವಿಧ್ವಂಸಕ ಸ್ವಭಾವದ ಒಂದು ಪೌರಾಣಿಕ ರಾಕ್ಷಸ ಪಾತ್ರವಾಗಿದೆ. ಚಂಡಮಾರುತದ ಅಗಾಧ ಶಕ್ತಿ ಮತ್ತು ತೀವ್ರತೆಯನ್ನು ಬಿಂಬಿಸುವ ಉದ್ದೇಶದಿಂದ ಇರಾನ್ ಈ ಹೆಸರನ್ನು ಆಯ್ಕೆ ಮಾಡಿದೆ.

Viral Video: ಅರ್ನಾಬ್‌ ಚಂಡಮಾರುತದ ಪ್ರಭಾವ; ಛತ್ತೀಸ್‌ಗಢದಲ್ಲಿ ಕೆಂಪಾದ ಆಕಾಶ

ಬಂಗಾಳಕೊಲ್ಲಿಯ ಚಂಡಮಾರುತಕ್ಕೆ ಇರಾನ್ ಹೆಸರಿಟ್ಟಿದ್ದೇಕೆ?

ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಗಳಿಗೆ ಹೆಸರಿಡಲು ವಿಶ್ವ ಹವಾಮಾನ ಸಂಸ್ಥೆ ಮತ್ತು ESCAP ಸಮಿತಿಯು 13 ಸದಸ್ಯ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಕತಾರ್, ಸೌದಿ ಅರೇಬಿಯಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್ ಈ 13 ದೇಶಗಳು ಸರದಿಯಂತೆ ಚಂಡಮಾರುತಗಳಿಗೆ ಹೆಸರನ್ನು ಸೂಚಿಸುತ್ತವೆ. ಈ ಬಾರಿಯ ಸರದಿ ಇರಾನ್ ದೇಶದ್ದಾಗಿದ್ದರಿಂದ, ಅದು ಮೊದಲೇ ಸೂಚಿಸಿದ್ದ ಪಟ್ಟಿಯಲ್ಲಿದ್ದ 'ಅಕ್ವಾನ್' ಹೆಸರನ್ನು ಈ ಚಂಡಮಾರುತಕ್ಕೆ ಇಡಲಾಗಿದೆ.