ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡಿನಲ್ಲಿ ಮುಂದುವರಿದ ಕಾರ್ತಿಕ ದೀಪೋತ್ಸವ ವಿವಾದ; ಸುಪ್ರೀಂ ಕೋರ್ಟ್‌ ಆದೇಶದ ಹೊರತಾಗಿಯೂ ದೀಪತೂನ್‌ನಲ್ಲಿ ಜ್ಯೋತಿ ಬೆಳಗದ ವಿಜಯ್‌ ಸರ್ಕಾರ

Karthigai Deepam Row: ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಮಧುರೈ ಜಿಲ್ಲೆಯ ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿರುವ ದೀಪತೂನ್ (ಕಲ್ಲಿನ ಸ್ತಂಭ) ಬಳಿ ದೀಪ ಬೆಳಗಿಸಲು ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ನಿರಾಕರಿಸಿದೆ. ಆ ಮೂಲಕ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸಾಂದರ್ಭಿಕ ಚಿತ್ರ

ಚೆನ್ನೈ, ನ. 24: ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ತಮಿಳುನಾಡಿನಲ್ಲಿ ಕಾರ್ತಿಕ ದೀಪೋತ್ಸವ ವಿವಾದ ಮುಂದುವರಿದಿದೆ (Karthigai Deepam Row). ಮಧುರೈ ಜಿಲ್ಲೆಯ ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿರುವ (Thiruparankundram hill) ದೀಪತೂನ್ (ಕಲ್ಲಿನ ಸ್ತಂಭ) ಬಳಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಆದೇಶವನ್ನು ಉಲ್ಲಂಘಿಸಿ ಉಚ್ಚಿ ಪೆರಿಯಾರ್‌ ದೇಗುಲದ ಬಳಿ ದೀಪ ಬೆಳಗಿದೆ. ಆ ಮೂಲಕ ವಿಜಯ್‌ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

ಮಂಗಳವಾರ (ನವೆಂಬರ್‌ 24) ತಮಿಳುನಾಡು ಸರ್ಕಾರ ಎಂದಿನಂತೆ ಉಚ್ಚಿ ಪೆರಿಯಾರ್‌ ದೇಗುಲದ ಬಳಿ ಕಾರ್ತಿ ದೀಪ (Karthigai Deepam) ಬೆಳಗಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿರುವ ದರ್ಗಾದ ಸಮೀಪದ ದೀಪತೂಣ್‌ನಲ್ಲಿ ದೀಪ ಬೆಳಗುವಂತೆ ಆದೇಶ ಹೊರಡಿಸಿತ್ತು.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ವಿಜಯ್‌ ಸರ್ಕಾರ:



ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಜಾರಿಗೊಳಿಸಲು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದ ಜಿಲ್ಲಾಧಿಕಾರಿ ನೇತೃತ್ವದ ಮಧುರೈ ಜಿಲ್ಲಾಡಳಿತವು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ತಿಳಿಸಿತ್ತು. ಆದರೆ ಇದನ್ನು ಉಲ್ಲಂಘಿಸಲಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿ ದೀಪತೂಣ್‌ ಬದಲು ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ಬೆಳಗಿದ ಕಾರ್ತಿಕ ದೀಪ

ಬೆಟ್ಟದ ಮೇಲಿರುವ ಕಂಬದ ಬಳಿ ದೀಪವನ್ನು ಬೆಳಗಿಸದಿರುವ ಕಾರಣದ ಕುರಿತು ಆಡಳಿತಾರೂಢ ಟಿವಿಕೆ ಸರ್ಕಾರವಾಗಲೀ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಾಗಲಿ ಇದುವರೆಗೂ ಯಾವುದೇ ವಿವರಣೆ ನೀಡಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಸರ್ಕಾರ ಮತ್ತು ಅದಕ್ಕೆ ಜವಾಬ್ದಾರರಾದ ಅಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದರಲ್ಲೂ ಮದ್ರಾಸ್ ಹೈಕೋರ್ಟ್‌ನ ನಿರ್ದೇಶನಗಳನ್ನು ಈ ಹಿಂದೆ ಪಾಲಿಸದಿದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ನಿಂದನೆ ಅರ್ಜಿಯೊಂದು ಬಾಕಿ ಇರುವಾಗಲೇ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ.

ದೇವಾಲಯದ ಆಡಳಿತ ಮಂಡಳಿ ಮುಖ್ಯ ದೇವತೆಯ ಗರ್ಭಗುಡಿಯ ನೇರ ಮೇಲ್ಭಾಗದಲ್ಲಿರುವ ಬೆಟ್ಟದ ಮೇಲಿನ ಉಚ್ಚಿ ಪಿಳ್ಳೈಯಾರ್ ದೇವಾಲಯದ ಬಳಿಯ ದೀಪ ಮಂಟಪದಲ್ಲಿ ಕಾರ್ತಿಕ ಮಹಾ ದೀಪವನ್ನು ಬೆಳಗಿಸಲಾಯಿತು ಎಂದು ತಿಳಿಸಿದೆ. ಪ್ರಾಚೀನ ಸಂಪ್ರದಾಯಗಳ ಪ್ರಕಾರ ಇದನ್ನು ನೆರವೇರಿಸಲಾಗಿದೆ ಎಂದು ಹೇಳಿದೆ.

ವಿವಾದದ ಮೂಲ

ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ದರ್ಗಾ ಸಮೀಪವಿರುವ ಕಲ್ಲಿನ ಕಂಬವೊಂದರ ಮೇಲೆ ಕಾರ್ತಿಕ ದೀಪ ಬೆಳಗಿಸಬೇಕು ಎನ್ನುವುದು ಹಿಂದೂಗಳ ವಾದ. ಅವರು ಈ ಕಂಬವನ್ನು ದೀಪತೂಣ್ ಎಂದು ಕರೆದಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು 2025ರ ಡಿಸೆಂಬರ್ 1ರಂದು ನೀಡಿದ ತೀರ್ಪಿನಲ್ಲಿ, ಉಚ್ಚಿ ಪಿಳ್ಳೈಯಾರ್ ದೇವಾಲಯದ ಬಳಿ ಇರುವ ಸಾಂಪ್ರದಾಯಿಕ ಸ್ಥಳದ ಜತೆಗೆ ಬೆಟ್ಟದ ತುದಿಯಲ್ಲಿರುವ ಈ ಕಂಬದ ಮೇಲೆಯೂ ದೀಪವನ್ನು ಬೆಳಗಿಸುವಂತೆ ನಿರ್ದೇಶನ ನೀಡಿತು. ದರ್ಗಾ ಇರುವ ಪ್ರದೇಶ, ಅಲ್ಲಿಗೆ ಹೋಗುವ ಮೆಟ್ಟಿಲುಗಳು ಮತ್ತು ನೆಲ್ಲಿತೋಪು ಪ್ರದೇಶವನ್ನು ಹೊರತುಪಡಿಸಿ, ಉಳಿದ ಬೆಟ್ಟವು ದೇವಾಲಯಕ್ಕೆ ಸೇರಿದ್ದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅಲ್ಲದೆ, ಈ ಕಂಬವನ್ನು ದೀಪಗಳನ್ನು ಬೆಳಗಿಸುವುದಕ್ಕಾಗಿಯೇ ನಿರ್ಮಿಸಲಾಗಿದೆ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯವು ಅಂಗೀಕರಿಸಿತು.

ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಡಿಎಂಕೆ ಸರ್ಕಾರವು, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಈ ನಿರ್ದೇಶನವನ್ನು ಜಾರಿಗೊಳಿಸಲಿಲ್ಲ. ಉಚಿ ಪಿಳ್ಳೈಯಾರ್ ದೇವಾಲಯದ ಬಳಿ ದೀಪವನ್ನು ಬೆಳಗಿಸುವುದು ದೀರ್ಘಕಾಲದ ಸಂಪ್ರದಾಯವಾಗಿದ್ದು, ಇದು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಪ್ರತಿಪಾದಿಸಿತು.

ದೀಪತೂಣ್‌ ಎಂದು ಕರೆಯಲ್ಪಡುವ ಕಲ್ಲಿನ ಸ್ತಂಭ ಕೇವಲ ಒಂದು ಸರ್ವೆ ಕಲ್ಲು ಹೊರತು ದೀಪಗಳನ್ನು ಬೆಳಗಿಸಲು ಅದನ್ನು ಬಳಸಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ ಎಂದು ವಾದಿಸಿತು. ಧಾರ್ಮಿಕ ದೀಪವನ್ನು ಎಲ್ಲಿ ಬೆಳಗಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ. ಇಂತಹ ನಿರ್ಧಾರಗಳು ಧಾರ್ಮಿಕ ಮತ್ತು ಆಗಮ ಶಾಸ್ತ್ರದ ಪದ್ಧತಿಗಳ ಆಧಾರದ ಮೇಲೆ ನಡೆಯಬೇಕೆಂದು ಹೇಳಿತು. ಬೆಟ್ಟದ ತುದಿಯಲ್ಲಿ ದರ್ಗಾ ಇರುವುದು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಸಮರ್ಥನೆ ನೀಡಿತು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ದೀಪತೂಣ್‌ನಲ್ಲಿ ಜ್ಯೊತಿ ಬೆಳಗಿಸಲು ಅನುಮತಿ ನೀಡಿದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿದೆ. ಈ ವರ್ಷದ ನವೆಂಬರ್ 20ರಂದು ನೀಡಿದ ತನ್ನ ಮಧ್ಯಂತರ ಆದೇಶದಲ್ಲಿ ನವೆಂಬರ್ 24ರಂದು ಬೆಟ್ಟದ ತುದಿಯಲ್ಲಿರುವ ಕಲ್ಲಿನ ಕಂಬದ ಬಳಿ ಒಮ್ಮೆ ಮಾತ್ರ ದೀಪವನ್ನು ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಈ ಅನುಮ ಆ ನಿರ್ದಿಷ್ಟ ಸಂದರ್ಭಕ್ಕೆ ಮಾತ್ರ ಸೀಮಿತವಾಗಿದ್ದು, ಇದು ಯಾವುದೇ ಶಾಶ್ವತ ಪದ್ಧತಿ, ಧಾರ್ಮಿಕ ಹಕ್ಕು ಅಥವಾ ಮಾಲೀಕತ್ವದ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಸೂಚಿಸಿತು. ಇದಕ್ಕೆ ತಮಿಳುನಾಡು ಸರ್ಕಾರ ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಮಂಗಳವಾರ ಸುಪ್ರೀಂ ಕೋರ್ಟ್‌ ಅದನ್ನು ವಿಚಾರಣೆಗೆ ಎತ್ತಿಕೊಂಡಿರಲಿಲ್ಲ.

ತಮಿಳುನಾಡಿನ ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಬಿಜೆಪಿ ಕಿಡಿ

ವಿಜಯ್‌ ನೇತೃತ್ವದ ಸರ್ಕಾರದ ವಿರುದ್ಧ ಇದೀಗ ಬಿಜೆಪಿ ಕೆಂಡಾಮಂಡಲವಾಗಿದೆ. ಬಿಜೆಪಿ ನಾಯಕ ಹಾಗೂ ಪಕ್ಷದ ರಾಜ್ಯ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಪ್ರತಿಕ್ರಿಯಿಸಿ, "ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ ಟಿವಿಕೆ ಸರ್ಕಾರ ಪರಿಣಾಮವನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು. ಸದ್ಯ ಈ ವಿವಾದ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಬದಲಾಗಿ ಮತ್ತೊಂದು ಸುತ್ತಿನ ರಾಜಕೀಯ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author