ನವ ದೆಹಲಿ, ನ.10: ದೇಶ ರಾಜಧಾನಿಯ ಕೆಂಪುಕೋಟೆ ಬಳಿ ಭಾರಿ ಸ್ಫೋಟ ನಡೆದ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಗಾಯಾಳುಗಳನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ಸ್ಫೋಟದ ನಂತರದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೆಂಪುಕೋಟೆ ಮುಂಭಾಗದ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ 10ಕ್ಕೂ ಹೆಚ್ಚು ಕಾರುಗಳು ಧ್ವಂಸವಾಗಿದ್ದು, ಕೆಲವರ ದೇಹಗಳು ಛಿದ್ರ ಛಿದ್ರವಾಗಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿವೆ. ಏಕಾಏಕಿ ಸ್ಫೋಟದಿಂದ ಆತಂಕಗೊಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಮಾತ್ರವಲ್ಲದೆ ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಎನ್‌ಐಎ, ಎನ್‌ಎಸ್‌ಜಿ ತಂಡಗಳು ತೆರಳಿ ಪರಿಶೀಲಿಸುತ್ತಿದ್ದು, ಘಟನೆ ಹಿಂದೆ ಉಗ್ರರ ಕೈವಾಡ ಇದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿ ಮಾತನಾಡಿದ್ದು, "ನನ್ನ ಜೀವನದಲ್ಲಿ ಇಷ್ಟು ದೊಡ್ಡ ಸ್ಫೋಟವನ್ನು ನಾನು ಎಂದಿಗೂ ಕೇಳಿಲ್ಲ. ಇದರ ಪರಿಣಾಮದಿಂದ ನಾನು ಮೂರು ಬಾರಿ ಬಿದ್ದೆ. ನಾವೆಲ್ಲರೂ ಸಾಯುತ್ತೇವೆಯೇನೋ ಎಂಬಂತೆ ಭಾಸವಾಯಿತು ಎಎನ್‌ಐಗೆ ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Delhi Blast: ಕಾರು ಸ್ಫೋಟಕ್ಕೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ; ಇದು ಉಗ್ರರ ಕೃತ್ಯವೇ?
"ನನ್ನ ಮನೆಯಿಂದ ಜ್ವಾಲೆಗಳನ್ನು ನೋಡಿದೆ ಮತ್ತು ನಂತರ ಏನಾಯಿತು ಎಂದು ನೋಡಲು ಕೆಳಗೆ ಇಳಿದೆ. ಜೋರಾದ ಸ್ಫೋಟ ಸಂಭವಿಸಿದೆ. ನಾನು ಹತ್ತಿರದಲ್ಲಿ ವಾಸಿಸುತ್ತಿದ್ದೇನೆ," ಎಂದು ಸ್ಥಳೀಯ ನಿವಾಸಿ ರಾಜಧರ್ ಪಾಂಡೆ ಹೇಳಿದರು.
"ರಸ್ತೆಯ ಮೇಲೆ ಒಬ್ಬರ ಕೈಯನ್ನು ನೋಡಿದಾಗ, ನಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇವೆ. ನಾನು ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ," ಎಂದು ಮತ್ತೊಬ್ಬ ಸ್ಥಳೀಯರು ಎಎನ್‌ಐಗೆ ತಿಳಿಸಿದ್ದಾರೆ.