ನವದೆಹಲಿ, ನ.11: ರಾಜಧಾನಿಯ ಕೆಂಪು ಕೋಟೆ (red fort car blast) ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟ (Delhi Car Blast) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟಗೊಂಡ ಹುಂಡೈ ಐ20 ಕಾರಿನ ಅದಕ್ಕೂ ಹಿಂದಿನ ಓಡಾಟದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 3 ಗಂಟೆಗಳ ಕಾಲ ಈ ಕಾರು ನಿಂತಲ್ಲೇ ನಿಂತಿತ್ತು ಎನ್ನುವ ವಿಚಾರ ಬಯಲಾಗಿದೆ.
ದೆಹಲಿಯಲ್ಲಿ ಸ್ಫೋಟಗೊಂಡ ಕಾರು ಮಧ್ಯಾಹ್ನ 3:19ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳ ಪ್ರವೇಶಿಸಿದೆ. 3 ಗಂಟೆಗಳ ಕಾಲ ಅದೇ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಕಾರು, ಸಂಜೆ 6:48ಕ್ಕೆ ಅಲ್ಲಿಂದ ಹೊರಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಕಾರು ಸಬ್ಜಿ ಮಂಡಿ ಮತ್ತು ದರಿಯಾಗಂಜ್ ರಸ್ತೆಯ ಮೂಲಕ ತೆರಳಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ಅನ್ನು ತಲುಪಿದ್ದು, ಕೆಲ ನಿಮಿಷಗಳಲ್ಲೇ ಸ್ಪೋಟ ಸಂಭವಿಸಿದೆ.
ತನಿಖಾ ಸಂಸ್ಥೆಗಳು ಪಡೆದ ದೃಶ್ಯಗಳ ಪ್ರಕಾರ, ಕಾರು ಸುಮಾರು ಮೂರು ಗಂಟೆಗಳ ಕಾಲ ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿತ್ತು. ಆ ಸಮಯದಲ್ಲಿ ವಾಹನದ ಬಳಿ ಯಾರೂ ಇರಲಿಲ್ಲ ಎನ್ನಲಾಗುತ್ತಿದೆ. ಸಂಜೆ ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದಾಗ, ಆ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಇತ್ತು ಎಂಬುದು ದೃಶ್ಯಗಳಿಂದ ಗೊತ್ತಾಗುತ್ತಿದೆ. ಅದಕ್ಕಾಗಿಯೇ ಕಾರು ನಿಧಾನವಾಗಿ ಚಲಿಸಿತು ಮತ್ತು ಕೆಲವು ನಿಮಿಷಗಳ ನಂತರ ಸ್ಫೋಟದ ಸ್ಥಳಕ್ಕೆ ಬಂದಿದೆ.
ಸ್ಫೋಟಕ್ಕೂ ಮುನ್ನ ಸುತ್ತಾಟ
ದೆಹಲಿ ಪೊಲೀಸರ ಪ್ರಕಾರ ದರಿಯಾಗಂಜ್, ಕೆಂಪು ಕೋಟೆ ಪ್ರದೇಶ, ಕಾಶ್ಮೀರಿ ಗೇಟ್ ಮತ್ತು ಸುನೇಹ್ರಿ ಮಸೀದಿ ಪ್ರದೇಶದಲ್ಲೂ ಕಾರು ಕಾಣಿಸಿಕೊಂಡಿದೆ. ಈ ಎಲ್ಲಾ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಯಾವ ಟೋಲ್ ಪ್ಲಾಜಾಗಳ ಮೂಲಕ ಕಾರು ಹಾದುಹೋಗಿದೆ, ಯಾವ ಸಿಗ್ನಲ್‌ನಲ್ಲಿ ಅದು ಎಷ್ಟು ಸಮಯ ನಿಂತಿತು, ಪಾರ್ಕಿಂಗ್ ಸ್ಥಳದಿಂದ ಹೊರಬಂದ ನಂತರ ಎಲ್ಲಿ ಕಾಣಿಸಿಕೊಂಡಿತು ಎಂಬುದನ್ನು ಒಳಗೊಂಡಂತೆ ಇಡೀ ಮಾರ್ಗದ ಟೈಮ್‌ಲೈನ್ ಅನ್ನು ರಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Delhi Blast: ದೆಹಲಿಯಲ್ಲಿ ಸ್ಫೋಟಿಸಿದ ಕಾರಿಗೆ ಕಾಶ್ಮೀರದ ಪುಲ್ವಾಮಾ ನಂಟು ಪತ್ತೆ!
ದೆಹಲಿ ಬ್ಲಾಸ್ಟ್ ಆತ್ಮಹತ್ಯಾ ದಾಳಿಯೋ ಅಥವಾ ಕಾರಿನಲ್ಲಿ ಸ್ಫೋಟಕಗಳನ್ನು ಮೊದಲೇ ಇರಿಸಲಾಗಿತ್ತೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರ ವಿಶೇಷ ಘಟಕ, ಅಪರಾಧ ವಿಭಾಗ ಮತ್ತು NIA ತಂಡಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ. ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮಾತನಾಡಿ, ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಇದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದಿದ್ದಾರೆ. ಸ್ಫೋಟದ ನಂತರ ವಾಹನವು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಡಿಎನ್ಎ ಮತ್ತು ಗುರುತಿಸುವಿಕೆ ಕಷ್ಟಕರವಾಗಿದೆ.
ಸ್ಫೋಟದಲ್ಲಿ ಬಳಸಲಾದ ಹುಂಡೈ i20 (ಸಂಖ್ಯೆ HR-26) ಗುರುಗ್ರಾಮ್ ವಾಹನ. ಇದು ಕಾಶ್ಮೀರದ ಪುಲ್ವಾಮಾ ಮೂಲದ ಮೊಹಮ್ಮದ್ ಸಲ್ಮಾನ್ ಎಂಬ ವ್ಯಕ್ತಿಗೆ ನೋಂದಣಿಯಾಗಿದೆ. ಗುರುಗ್ರಾಮ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಓಖ್ಲಾ ನಿವಾಸಿ ದೇವೇಂದ್ರ ಎಂಬವರಿಗೆ ಕಾರನ್ನು ಮಾರಾಟ ಮಾಡಿದ್ದಾಗಿ ಸಲ್ಮಾನ್ ಬಹಿರಂಗಪಡಿಸಿದ್ದಾನೆ.
ದೆಹಲಿ ಸ್ಪೋಟದ ಇಂಚಿಂಚು ಮಾಹಿತಿಯನ್ನ ಗೃಹ ಸಚಿವ ಅಮಿತ್ ಶಾ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸಭೆಯಲ್ಲಿ ತನಿಖೆ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನೂ ಓದಿ: Delhi Blast: ದೆಹಲಿ ಕಾರು ಸ್ಫೋಟ ಹಫೀಜ್ ಸಯೀದ್ ಕೃತ್ಯ? ಆಪರೇಶನ್ ಸಿಂಧೂರ್‌ಗೆ ಪ್ರತೀಕಾರದ ಶಂಕೆ