ಚಂಡೀಗಢ, ನ. 22: ಹರಿಯಾಣದಲ್ಲಿ ವರ ದಕ್ಷಿಣೆ ಭೂತಕ್ಕೆ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ನಡೆದಿದೆ. ವಧುವಿನ ಮನೆಯವರು ಬೇಡಿಕೆ ಇಟ್ಟಷ್ಟು ಹಣ, ಕಾರ್ ಕೊಟ್ಟಿಲ್ಲವೆಂದು ಸೋನಿಪತ್ನಲ್ಲಿ ಕಾನ್ಸ್ಟೇಬಲ್ ಶನಿವಾರ (ನವೆಂಬರ್ 22) ಮದುವೆ ರದ್ದುಪಡಿಸಿದ್ದಾನೆ. ದೆಹಲಿ ಮೂಲದ ಪೊಲೀಸ್ ಕಾನ್ಸ್ಟೇಬಲ್ ವರದಕ್ಷಿಣೆಯಾಗಿ ದುಬಾರಿ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟು, ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ವಧುವಿನ ಕುಟುಂಬವು ಮದುವೆಗಾಗಿ ಮಾಡಿದ ಖರ್ಚಿನಿಂದಾಗಿ ಭಾರಿ ವೆಚ್ಚದ ಹೊರೆಗೆ ಸಿಲುಕಿದೆ. ಈ ಸಂಬಂಧ ವಧುವಿನ ಕುಟುಂಬವು ಸೆಕ್ಟರ್ 27 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮದುವೆ ಸಿದ್ಧತೆಗಳಿಗಾಗಿ ಖರ್ಚು ಮಾಡಿದ ಹಣವನ್ನು ಮರಳಿಸುವಂತೆ ಕೋರಿದೆ. ಮತ್ತೊಂದೆಡೆ, ಈ ವಿವಾದವನ್ನು ಬಗೆಹರಿಸಲು ಪಂಚಾಯತ್ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ.
ಸದ್ಯ ಈ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿದ್ದು, ಕಾನೂನು ಪಾಲಿಸಬೇಕಾದ ಅಧಿಕಾರಿಯೇ ಹಣದ ದಾಹಕ್ಕೆ ಬಲಿಯಾಗಿದ್ದು ವಿಪರ್ಯಾಸ. ಸದ್ಯ ಪಂಚಾಯತ್ ಸಭೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮದುವೆ ರದ್ದುಪಡಿಸಿದ ಪೊಲೀಸ್:
ಪೊಲೀಸರು ಹೇಳಿದ್ದೇನು?
ʼʼಈ ಪ್ರಕರಣದ ಸಂಬಂಧ ಪಂಚಾಯತ್ ಸಭೆ ನಡೆಯುತ್ತಿದೆ. ಈಗಾಗಲೇ ವಧುವಿನ ಕುಟುಂಬ ದೂರು ನೀಡಿದೆ. ಅದಾಗ್ಯೂ ಸಂಧಾನದ ಪ್ರಕರಣ ಇತ್ಯರ್ಥ ಪಡಿಸಲು ಶ್ರಮಿಸಲಾಗುತ್ತಿದೆ. ಹೀಗಾಗಿ ಪೊಲೀಸರು ಸದ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದುʼʼ ಎಂದು ಸೋನಿಪತ್ ಡಿಸಿಪಿ ಜಿತೇಂದರ್ ಗೆಹ್ಲಾವತ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಸೋನಿಪತ್ನ 20 ವರ್ಷದ ಹೀನಾ ಅವರ ವಿವಾಹವನ್ನು ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಕುಲ್ದೀಪ್ ಜತೆ 6 ತಿಂಗಳ ಹಿಂದೆ ನಿಶ್ವಯಿಸಲಾಗಿತ್ತು. ಅದರಂತೆ ನವೆಂಬರ್ 21ರಂದು ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಮದುವೆಗೂ ಆಗಮಿಸಿದ ಕುಲ್ದೀಪ್ ಬಳಿಕ ವರದಕ್ಷಿಣೆ ಸಾಲದು ಎಂದು ಕಿರಿಕ್ ತೆಗೆದು ಮದುವೆಯನ್ನೇ ರದ್ದುಗೊಳಿಸಿದ್ದು ವಧುವಿನ ಮನೆಯವರಿಗೆ ಆಘಾತ ತಂದಿತ್ತಿದೆ.
ವಧುವಿನ ತಂದೆ ಸುಭಾಷ್ ಕುಮಾರ್ ಅವರ ಪ್ರಕಾರ, ಆರಂಭದಲ್ಲಿ ವರನ ಕಡೆಯವರು 9.5 ಲಕ್ಷ ರೂಪಾಯಿಯ ಹ್ಯುಂಡೈ ಔರ (Hyundai Aura) ಕಾರ್ಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದೀಗ ಕುಲ್ದೀಪ್ ಕಾರ್ನ ವಿಚಾರದಲ್ಲಿ ತಗಾದೆ ತೆಗೆದಿದ್ದು, 13 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬ್ರೀಝಾ (Maruti Brezza) ಕಾರ್ಗಾಗಿ ಬೇಡಿಕೆ ಇಟ್ಟಿದ್ದಾನೆ. ʼʼಈಗಾಗಲೇ ಹ್ಯುಂಡೈ ಔರ ಕಾರ್ಗೆ ವ್ಯವಸ್ಥೆ ಮಾಡಿದ್ದೇವೆ. ಇದ್ದಕ್ಕಿದ್ದಂತೆ ಕಾರ್ ಬದಲಾಯಿಸಬೇಕು ಎಂದರೆ ಸಾಧ್ಯವಿಲ್ಲʼʼ ಎಂದು ತಿಳಿಸಿದ್ದಾರೆ.
ಅಲ್ಲದೆ ಸಂಬಂಧ ಕುದುರಿಸುವಾಗ ಮಾಡಿದ ಮಾತುಕತೆಗಿಂತ ಅಧಿಕ ಆಭರಣಕ್ಕೆ ವರನ ಕಡೆಯವರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ವಧುವಿನ ಕಡೆಯವರು ನೂತನ ಜೋಡಿಗೆ ಪೀಠೋಪಕರಣ, ಎಲೆಕ್ಟ್ರಿಕ್ ವಸ್ತುಗಳನ್ನು ಖರೀದಿಸಿತ್ತು. ಜತೆಗೆ ಮದುವೆಗಾಗಿ ಹಾಲ್ನಲ್ಲಿ 1,200 ಅತಿಥಿಗಳಿಗಾಗಿ ಆಹಾರವನ್ನು ತಯಾರಿಸಿತ್ತು. ಹೀಗಾಗಿ ಇದ್ದಕ್ಕಿದ್ದಂತೆ ಮದುವೆ ಮುರಿದು ಬಿದ್ದಾಗ ವಧುವಿನ ಮನೆಯವರು ಕಂಗಾಲಾದರು. ಬ್ರೀಝಾ ಕಾರ್ ಬರದೆ ತಾಳಿ ಕಟ್ಟುವುದಿಲ್ಲ ಎಂದು ವರ ಕುಲ್ದೀಪ್ ಪಟ್ಟು ಹಿಡಿದು ಕೂತು ಬಿಟ್ಟಿದ್ದಾನೆ ಎನ್ನಲಾಗಿದೆ.
"ನನ್ನ ಮಗಳು ವಧುವಿನಂತೆ ಅಲಂಕರಿಸಿಕೊಂಡು ಮದುವೆಗೆ ರೆಡಿಯಾಗಿದ್ದಳು. ವರನ ಮನೆಯವರನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದೆವು. ಮದುವೆಗಾಗಿ ನಾವು ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದೆವು. ಆದರೆ ಮದುವೆ ನಡೆಯಲಿಲ್ಲ. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಮದುವೆ ಮಂಟಪ ಮತ್ತು ಊಟಕ್ಕಾಗಿ ಖರ್ಚು ಮಾಡಿದ ಹಣವನ್ನು ನಮಗೆ ಹಿಂತಿರುಗಿಸಬೇಕು" ಎಂದು ಸುಭಾಷ್ ಕುಮಾರ್ ಹೇಳಿದ್ದಾರೆ.