ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅನ್ಸಾರ್ ಘಜ್ವತ್-ಉಲ್-ಹಿಂದ್ ಸಂಘಟನೆ ಬಲಪಡಿಸಲು ದೆಹಲಿ ಸ್ಫೋಟ; ವಿಚಾರಣೆ ವೇಳೆ ಬಯಲಾಯ್ತು ಉಗ್ರ ರಹಸ್ಯ: ಹೇಗಿತ್ತು ಪ್ಲ್ಯಾನ್‌?

Delhi Red Fort Blast: ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೇ ರಹಸ್ಯ ಹೊರ ಬೀಳುತ್ತಿದೆ. ಈ ಕೃತ್ಯದ ಹಿಂದೆ ನಿಷೇಧಿತ ಉಗ್ರ ಸಂಘಟನೆ ಅನ್ಸಾರ್ ಘಜ್ವತ್-ಉಲ್-ಹಿಂದ್‌ನ ಸಿದ್ಧಾಂತ ಪ್ರಚಾರ ನಡೆಸುವ ಉದ್ದೇಶ ಹೊಂದಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್‌ ಸ್ಫೋಟ ನಡೆದ ದೆಹಲಿಯ ಕೆಂಪು ಕೋಟೆ ಸಮೀಪದ ಪಾರ್ಕಿಗ್‌ ಏರಿಯಾ (ಸಂಗ್ರಹ ಚಿತ್ರ)

ದೆಹಲಿ, ಜ. 19: ದೇಶವನ್ನೇ ಬೆಚ್ಚಿ ಬೀಳಿಸಿದ, ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ (Delhi Red Fort Blast) ವಿಚಾರಣೆ ಮುಂದುವರಿದಿದ್ದು, ಉಗ್ರರ ಸಂಚು ಒಂದೊಂದಾಗಿಯೇ ಹೊರ ಬೀಳುತ್ತಿದೆ. ಆತ್ಮಹತ್ಯಾ ಬಾಂಬರ್‌ ಉಮರ್‌ ನಬಿ (Umar Nabi) ಕಾರು ಚಲಾಯಿಸಿ ಕೆಂಪು ಕೋಟೆ ಮೆಟ್ರೋ ಸ್ಟೇಷನ್‌ ಬಳಿ ಸ್ಫೋಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ನಿಷೇಧಿತ ಉಗ್ರ ಸಂಘಟನೆ ಅನ್ಸಾರ್ ಘಜ್ವತ್-ಉಲ್-ಹಿಂದ್‌ನ (Ansar Ghazwat Ul Hind-AGH) ಸಿದ್ಧಾಂತ ಪ್ರಚಾರ ನಡೆಸುವ ಉದ್ದೇಶ ಹೊಂದಲಾಗಿತ್ತು ಎಂದು ಹೇಳಿದ್ದಾರೆ. ತನಿಖೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಫೋಟವು ಉಗ್ರಗಾಮಿ ಜಾಲಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸಿದ್ಧಾಂತವನ್ನು ಪ್ರಚಾರ ನಡೆಸುವ ಗುರಿ ಹೊಂದಿತ್ತು ಎಂದು ವಿವರಿಸಿದ್ದಾರೆ.

ಉಮರ್ ನಬಿ ಮತ್ತು ಆತನ ಸಹಚರರು ಪಿತೂರಿಯ ಭಾಗವಾಗಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು. ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ದೊಡ್ಡ ಪ್ರಮಾಣದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನುವ ವಿಚಾರವೂ ತನಿಖೆ ವೇಳೆ ಬಯಲಿಗೆ ಬಂದಿದೆ.

ಕಾಶ್ಮೀರ ಮೂಲದ ವೈದ್ಯ ಉಮರ್‌ ಹರಿಯಾಣದ ಅಲ್‌-ಫಲಾಹ್‌ ವಿಶ್ವವಿದ್ಯಾನಿಲಯದಲ್ಲಿ ಕಾರ್ಯ ನಿರ್ವಹಿಸುತ್ತ ತೆರೆ ಮರೆಯಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಆತನಿಗೆ ಸೇರಿದ ಕಾರ್‌ನಲ್ಲಿ ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದ್ದು, ವ್ಯವಸ್ಥಿತ ದಾಳಿಗೆ ಸಂಚು ರೂಪಿಸಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಉಗ್ರ ಉಮರ್‌ ನಬಿ ವಿಡಿಯೊ ರಿಲೀಸ್‌; ದೆಹಲಿ ಸ್ಫೋಟದ ಬಗ್ಗೆ ಈ ಪಾಪಿ ಹೇಳಿದ್ದೇನು?

ಹಲವು ಸಿಮ್‌ ಖರೀದಿ

ತನ್ನ ಕೃತ್ಯ ಸುಲಭವಾಗಿ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಉಮರ್‌ ಹಲವು ಸಿಮ್‌ಗಳನ್ನು ಬಳಸಿರುವುದೂ ಗೊತ್ತಾಗಿದೆ. ಈ ಸಿಮ್‌ಗಳನ್ನು ಖರೀದಿಸಿದ ನಂತರ ಆತ ಉಗ್ರವಾದವನ್ನು ಪ್ರಸಾರ ಮಾಡುತ್ತಿದ್ದ ಮತ್ತು ಸಹಚರರೊಂದಿಗೆ ರಹಸ್ಯವಾಗಿ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದ. ಜತೆಗೆ ಎಜಿಎಚ್‌ನ ಸಿದ್ಧಾಂತವನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮರ್ ನಬಿಗೆ ಸಹಾಯ ಮಾಡಿದ ಡಾ. ಶಾಹೀನ್ ಸಯೀದ್, ಜಾಸಿರ್ ವಾನಿ ಸೇರಿದಂತೆ ಇತರ ಆರೋಪಿಗಳ ಪಾತ್ರವೂ ತನಿಖೆಯ ವೇಳೆ ಬಹಿರಂಗಗೊಂಡಿದೆ. ಇವರು ಸ್ಫೋಟಕಗಳು ಮತ್ತು ಐಇಡಿಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ನಿರಂತರ ವಿಚಾರಣೆಯ ಸಮಯದಲ್ಲಿ ಬಂಧಿತರು ಇತರ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಸ್ಫೋಟ ನಡೆಸಲು ಯಾವ ರೋತಿ ಸಂಚು ರೂಪಿಸಿದ್ದರು ಎನ್ನುವುದು ಕಂಡುಕೊಳ್ಳಲು ತನಿಖಾಧಿಕಾರಿಗಳು ಡಿಜಿಟಲ್ ಉಪಕರಣಗಳು ಮತ್ತು ದಾಖಲೆಗಳನ್ನು ಶೋಧಿಸುತ್ತಿದ್ದಾರೆ. ಒಟ್ಟಿನಲ್ಲಿ ಕೆಂಪು ಕೋಟೆ ಸಮೀಪ ನಡೆದ ಸ್ಫೋಟವು ಸಂಘಟಿತ ಭಯೋತ್ಪಾದಕ ಘಟಕಗಳ ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗ ಎನ್ನುವುದು ಬಯಲಾಗಿದೆ. ಅಲ್ಲದೆ ದಾಳಿ ನಡೆಸಲು ಡಿಜಿಟಲ್ ಉಪಕರಣಗಳ ಬಳಕೆ ಹೆಚ್ಚುತ್ತಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.

ಅನ್ಸಾರ್ ಘಜ್ವತ್-ಉಲ್-ಹಿಂದ್‌ ಸಂಘಟನೆಯ ಹಿನ್ನೆಲೆ

ಅನ್ಸಾರ್ ಘಜ್ವತ್-ಉಲ್-ಹಿಂದ್‌ ಎಂಬುದು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿದ ಇಸ್ಲಾಮಿಕ್ ಉಗ್ರಗಾಮಿ ಗುಂಪು. ಕಾಶ್ಮೀರದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವುದು ಇದರ ಪ್ರಮುಖ ಗುರಿ.