ನವದೆಹಲಿ: ದೆಹಲಿಯ ಕೆಂಪು ಕೋಟೆಯ (Delhi red fort car blast) ಬಳಿ ನ.10ರಂದು ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟ (Delhi blast) ಸಂಭವಿಸಿರುವ ಕಾರಿನ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದು ಇದಕ್ಕೂ ಕಾಶ್ಮೀರದ ಪುಲ್ವಾಮಾಗೂ (Pulwama) ನಂಟು ಇರುವುದು ಪತ್ತೆಯಾಗಿದೆ. ಪುಲ್ವಾಮಾದಲ್ಲಿ 2019ರಲ್ಲಿ ಭಯೋತ್ಪಾದಕರ ಭೀಕರ ಆತ್ಮಹತ್ಯಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಸ್ಫೋಟಗೊಂಡ ಕಾರು ಹರ್ಯಾಣದ ನೋಂದಣಿ ಫಲಕ ಹೊಂದಿದ್ದ ಹುಂಡೈ i20 ಕಾರು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಈ ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಎಂಬಾತನಾಗಿದ್ದು, ನಂತರ ಅದನ್ನು ತಾರಿಕ್ ಎಂಬವರಿಗೆ ಮಾರಾಟ ಮಾಡಿದ್ದರು. ತಾರಿಕ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ನಿವಾಸಿಯಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಸದ್ಯ, ಸಲ್ಮಾನ್ ಅವರನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ, ದೆಹಲಿ ಪೊಲೀಸ್ ವಿಶೇಷ ಘಟಕ, ಎನ್‌ಐಎ ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳದಲ್ಲಿದ್ದು, ಸಂಪೂರ್ಣ ತನಿಖೆ ನಡೆಸುತ್ತಿವೆ. ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪೊಲೀಸರು ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಮಾಡಿದ್ದಾರೆ. ಈ ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ದೆಹಲಿ ಪೊಲೀಸರು ಬಹುತೇಕ ಖಚಿತಪಡಿಸಿದ್ದಾರೆ. ತನಿಖಾ ಸಂಸ್ಥೆಗಳು ಪ್ರತಿಯೊಂದು ಕೋನದಿಂದಲೂ ಸುಳಿವುಗಳನ್ನು ಹುಡುಕುತ್ತಿವೆ. ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಂದು ಬೆಳಿಗ್ಗೆಯಷ್ಟೇ, ಫರಿದಾಬಾದ್‌ನ ಬಾರಿ ಮಾತಾದಲ್ಲಿ ಆರ್‌ಡಿಎಕ್ಸ್ ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ವರದಿಗಳು ಕೇಳಿಬಂದಿದ್ದವು. ಗುಜರಾತ್‌ನಿಂದ ಉತ್ತರ ಪ್ರದೇಶದವರೆಗಿನ ಪೊಲೀಸರು ಹಲವು ಶಂಕಿತರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Delhi Blast: ದೆಹಲಿ ಕಾರು ಸ್ಫೋಟ ಹಫೀಜ್ ಸಯೀದ್ ಕೃತ್ಯ? ಆಪರೇಶನ್ ಸಿಂಧೂರ್‌ಗೆ ಪ್ರತೀಕಾರದ ಶಂಕೆ
ನ. 10ರಂದು ಬೆಳಗ್ಗೆ ಹರಿಯಾಣದ ಫರಿದಾಬಾದ್‌ನಲ್ಲಿ ಎರಡು ವಸತಿ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದ ಭದ್ರತಾ ಪಡೆಗಳು, ಸುಮಾರು 3,000 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನ. 10ರಂದು ಬಂಧನವಾಗಿದ್ದ ವೈದ್ಯನೊಬ್ಬ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ಫರಿದಾಬಾದ್‌ನಲ್ಲಿ ಸ್ಫೋಟಕಗಳನ್ನು ವಶಕಪಡಿಸಿಕೊಂಡ ಬೆನ್ನಲ್ಲೇ ನವದೆಹಲಿಯಲ್ಲಿ ಸ್ಫೋಟ ಸಂಭವಿಸಿರುವುದು ತನಿಖಾಧಿಕಾರಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾಗಿ, ಫರಿದಾಬಾದ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಬಂಧಿತರಾಗಿರುವ ವ್ಯಕ್ತಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಶ್ರೀನಗರದಲ್ಲಿ ಬಂಧಿತನಾಗಿರುವ ವೈದ್ಯ ಯಾರು?
ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಬೆಂಬಲ ಸೂಚಿಸಿ ಶ್ರೀನಗರದಲ್ಲಿ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಆದಿಲ್ ರಹದಾರ್ ಎಂಬ ವೈದ್ಯನನ್ನು ಭಾನುವಾರ ಬಂಧಿಸಲಾಗಿತ್ತು. ತನಿಖೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಮತ್ತೊಬ್ಬ ವೈದ್ಯ, ಮುಝಮ್ಮಿಲ್ ಶಕೀಲ್, ಫರಿದಾಬಾದ್‌ನ ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆಸ್ಪತ್ರೆಯ ದಾಖಲೆಗಳ ಪ್ರಕಾರ, ಅವನು ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದ. ಆದರೆ, ಪೊಲೀಸರು ಅವನಿಗೆ ಸಂಬಂಧಿಸಿದ ಎರಡು ಹೊರಗಿನ ಮನೆಗಳನ್ನು ಪತ್ತೆಹಚ್ಚಿದ್ದರು. ಈ ಮನೆಗಳ ಮೇಲೆ ದಾಳಿ ನಡೆಸಿದಾಗ, 12 ಸೂಟ್‌ಕೇಸ್‌ಗಳಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತುಂಬಿರುವುದು ಕಂಡುಬಂದಿತ್ತು. ಡಿಟೋನೇಟರ್‌ಗಳು ಮತ್ತು ಟೈಮರ್‌ಗಳಂತಹ ಸ್ಫೋಟಕ ಸಾಧನಗಳಿಗೆ ಸಂಬಂಧಿಸಿದ ವಸ್ತುಗಳೂ ಪತ್ತೆಯಾಗಿವೆ.
ಇದನ್ನೂ ಓದಿ: Delhi Blast: ದೆಹಲಿ ಕಾರು ಸ್ಫೋಟ ಪ್ರಕರಣ; ಇಬ್ಬರ ಬಂಧನ: ಆಸ್ಪತ್ರೆಗೆ ಅಮಿತ್ ಶಾ ಭೇಟಿ