ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಕೆಂಪು ಕೋಟೆ ಸಮೀಪ ಕಾರು ಸ್ಫೋಟ; 8 ಮಂದಿ ಸಾವು

Delhi Red Fort Car Explosion: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಕಾರೊಂದು ಸ್ಫೋಟಗೊಂಡಿದ್ದು, 8 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್‌ 10ರ ಸಂಜೆ ಕೆಂಪು ಕೋಟೆ ಮೆಟ್ರೋ ಸ್ಟೇಷನ್‌ ಗೇಟ್‌ 1ರ ಸಮೀಪ ಕಾರು ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡಿದೆ.

ನವದೆಹಲಿ, ನ. 10: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಕಾರೊಂದು ಸ್ಫೋಟಗೊಂಡಿದ್ದು, ಹಲವು ವಾಹನಗಳಿಗೆ ಬೆಂಕಿ ತಗುಲಿದೆ (Delhi Red Fort Car Explosion). ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 11 ಮಂದಿ ಗಾಯಗೊಂಡಿದ್ದಾರೆ. ನವೆಂಬರ್‌ 10ರ ಸಂಜೆ ಕೆಂಪು ಕೋಟೆ ಮೆಟ್ರೋ ಸ್ಟೇಷನ್‌ ಗೇಟ್‌ 1ರ ಸಮೀಪ ಕಾರು ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. 3 ವಾಹನಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳದಲ್ಲಿ ಸುರಕ್ಷತೆ ಹೆಚ್ಚಿಸಲಾಗಿದ್ದು, ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.

ಹಲವು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಂಜೆ ಸುಮಾರು 6:55ರ ವೇಳೆಗೆ ಕಾರು ಸ್ಫೋಟಗೊಂಡು, ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಸ್ತಳಕ್ಕೆ ಧಾವಿಸಿದ್ದಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಜತೆಗೆ ಕೂಡಲೇ ಸ್ಥಳಕ್ಕೆ 15 ಆಂಬುಲೆನ್ಸ್‌ ವಾಹನಗಳು ಧಾವಿಸಿವೆ. ಸದ್ಯ ಬೆಂಕಿಯನ್ನು ನಂದಿದಲಾಗಿದೆ.

ದೆಹಲಿಯ ಕೆಂಪು ಕೋಟೆ ಸಮೀಪ ವಾಹನ ಹೊತ್ತಿ ಉರಿಯುತ್ತಿರುವ ದೃಶ್ಯ:



ಸ್ಫೋಟದ ರಭಸಕ್ಕೆ ಸಮೀಪದ ಬೀದಿ ದೀಪಗಳೆಲ್ಲ ಪುಡಿಪುಡಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಧಿ ವಿಜ್ಞಾನ ತಂಡ ಸ್ಫೋಟಕ್ಕೆ ವೇನು ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ.

ದೆಹಲಿಯ ಸಂಸತ್ ಭವನ, ಇಂಡಿಯಾ ಗೇಟ್ ಸುತ್ತ ಹೈ ಅಲರ್ಟ್ ಘೋಷಿಸಲಾಗಿದ್ದು, ಚಾಂದನಿಚೌಕ್ ಮಾರ್ಕೆಟ್, ಕೆಂಪು ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್​ ಮಾಡಿದ್ದಾರೆ. ಸದ್ಯ ಕಾರು ಸ್ಫೋಟಗೊಂಡು ಬೆಂಕಿ ವ್ಯಾಪಿಸುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ʼʼನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಬಂದಿದ್ದು, ನಂತರ ಹತ್ತಿರದ 3ರಿಂದ 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ತಕ್ಷಣವೇ ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆʼʼ ಎಂದು ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಿಎಸ್‌ಜಿ ಸಿಲಿಂಡರ್‌ ಸ್ಫೋಟ?

ಸಿಎನ್ಜಿ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ ನಿಖರ ಕಾರಣ ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಲಿದೆ. ಸದ್ಯ ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ʼʼಮನೆಯ ಬಾಲ್ಕನಿಯಲ್ಲಿ ನಿಂತುಕೊಂಡಿದ್ದಾಗ ದೊಡ್ಡ ಬೆಂಕಿಯ ಉಂಡೆಯನ್ನು ನೋಡಿದೆ. ಜತೆಗ ಭಾರಿ ಶಬ್ದವೂ ಕೇಳಿಸಿತು. ಸ್ಫೋಟದ ರಭಸಕ್ಕೆ ನಾವು ನಿಂತಿದ್ದ ಕಟ್ಟಡವೂ ಕಂಪಿಸಿತುʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ʼʼಘಟನೆ ನಡೆದಾಗ ನಾವು ಗುರುದ್ವಾರದಲ್ಲಿದ್ದೆವು. ಏನಾಯಿತೆಂದು ಆ ಕ್ಷಣ ಗೊತ್ತಾಗಲಿಲ್ಲ. ಭಾರಿ ಶಬ್ದ ಆತಂಕವನ್ನುಂಟು ಮಾಡಿತುʼʼ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.