ದೆಹಲಿ, ನ. 28: ಸದ್ಯ ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ, ಚರ್ಚೆಗೆ ಗ್ರಾಸವಾಗಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆ (Delimitation Bill) ಅಖಂಡ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲಿದೆ. ಹೌದು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಪಾಕಿಸ್ತಾನದ ಅಧೀನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶವು ಸ್ವತಂತ್ರಗೊಂಡ ನಂತರ ಅಲ್ಲಿನ ವಿಧಾನಸಭಾ ಕ್ಷೇತ್ರಗಳನ್ನು ಮರುವಿಂಗಡಿಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ (Election Commission) ವಹಿಸಿದೆ. ಈ ಮಸೂದೆಯಲ್ಲಿನ ಒಂದು ನಿಬಂಧನೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆ, 2026ರ ಸೆಕ್ಷನ್ 3(4) ಪಾಕಿಸ್ತಾನದ ಅಧೀನದಲ್ಲಿರುವ ಪ್ರದೇಶದಲ್ಲಿನ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತಿದೆ. ಅದರ ಪ್ರಕಾರ ಭಾರತದ ವಶಕ್ಕೆ ಸಿಕ್ಕ ನಂತರ ಕ್ಷೇತ್ರ ಮರುವಿಂಗಡಣೆಯ ಜವಾಬ್ದಾರಿಯನ್ನು ಸ್ವತಃ ಚುನಾವಣಾ ಆಯೋಗವೇ ವಹಿಸಿಕೊಳ್ಳಲಿದೆ. ಈ ಮಸೂದೆಯಲ್ಲಿ ಎಲ್ಲೂ PoK ಎಂಬ ಪದವನ್ನು ಬಳಸಿಲ್ಲ ಎನ್ನುವುದು ಗಮನಾರ್ಹ.
ಚುನಾವಣಾ ಆಯೋಗಕ್ಕೆ ಜವಾಬ್ದಾರಿ
ಪಾಕಿಸ್ತಾನದ ಅಧೀನದಲ್ಲಿರುವ ಪ್ರದೇಶದ ಕ್ಷೇತ್ರ ವಿಂಗಡಣೆಯ ಜವಾಬ್ದಾರಿ ನೇರವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ ಈ ನಿಬಂಧನೆಯು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮಾತ್ರ ಸೀಮಿತ. ಇದು ಆ ಪ್ರದೇಶದಲ್ಲಿರುವ ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವುದಿಲ್ಲ ಎಂದು ಸ್ಪಷ್ಪವಾಗಿ ನಮೂದಿಸಲಾಗಿದೆ. ವಿಶೇಷ ಎಂದರೆ ಈ ಮಸೂದೆಯು ಆ ಪ್ರದೇಶಕ್ಕಾಗಿ ದೀರ್ಘಕಾಲದಿಂದ ಮೀಸಲಿಡಲಾದ 24 ವಿಧಾನಸಭಾ ಸ್ಥಾನಗಳ ಬಗ್ಗೆಯಾಗಲಿ ಅಥವಾ ಪ್ರಸ್ತಾವಿತ ಶೇಕಡಾ 50ರಷ್ಟು ಸ್ಥಾನಗಳ ಹೆಚ್ಚಳವು ಈ ಕ್ಷೇತ್ರಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆಯೇ ಎಂಬುದರ ಬಗ್ಗೆಯಾಗಲಿ ತಿಳಿಸಿಲ್ಲ.
2029ರಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಸೂದೆಗಳನ್ನು ಏಪ್ರಿಲ್ನಲ್ಲಿ ಮಂಡಿಸಲಾಗಿತ್ತು. ಆದರೆ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಾದಷ್ಟು ಸಂಖ್ಯಾಬಲ ಇಲ್ಲದ ಕಾರಣ ಲೋಕಸಭೆಯಲ್ಲಿ ಅಂಗೀಕಾರಗೊಂಡಿರಲಿಲ್ಲ. ಇದೀಗ ಮತ್ತೆ ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿದೆ.
ನ. 30ರ ಸಂಸತ್ ಅಧಿವೇಶನದತ್ತ ಜನರ ಚಿತ್ತ
ಇದೀಗ ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ ಅಧಿವೇಶನದತ್ತ ಜನರ ಕಣ್ಣು ನೆಟ್ಟಿದೆ. ಈ ವೇಳೆ ಲೋಕಸಭಾ ಕ್ಷೇತ್ರಗಳ ತಿದ್ದುಪಡಿ ಮಸೂದೆ ಹಾಗೂ ಸಂಸತ್ತಿನಲ್ಲಿ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಮಸೂದೆಯನ್ನು ಸರ್ಕಾರ ಮಂಡಿಸಲಿದೆ.
ಕೇಂದ್ರದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ
ಸೋಮವಾರದ ಟೆಸ್ಟ್ನಲ್ಲಿ ಕೇಂದ್ರ ಪಾಸ್ ಆಗುತ್ತಾ?
ತಿದ್ದುಪಡಿ ಮಸೂದೆ ಹಾಗೂ ಸಂಸತ್ಪಾಸ್ ಆಗಲು ಸಾಂವಿಧಾನಿಕ ತಿದ್ದುಪಡಿಯಾಗಬೇಕಿದ್ದು, ಇದಕ್ಕೆ 2/3ರಷ್ಟು ಹುಮತದ ಅಗತ್ಯವಿದೆ. ಈ ಸಂಖ್ಯಾ ಬಲದ ಆಟದಲ್ಲಿ ಕೇಂದ್ರ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರಸ್ತುತ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ ಇದ್ದು, ಸಂಖ್ಯಾ ಬಲ 540ಕ್ಕೆ ಕುಸಿದಿದೆ. ಹೀಗಾಗಿ 3ನೇ 2 ಬಹುಮತಕ್ಕೆ 360 ಸ್ಥಾನ ಬೇಕು. ಸದ್ಯ ಎನ್ಡಿಎ ಬಳಿ 320 ಸ್ಥಾನಗಳಿವೆ. ವಿವಿಧ ಪಕ್ಷಗಳು ಬೆಂಬಲಿಸುವ ಭರವಸೆ ನೀಡಿದ್ದು, ಕೇಂದ್ರ ಸರ್ಕಾರ 40 ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.