ಮುಂಬೈ, ನ. 24: ಬಾಲಿವುಡ್ ಹೀ ಮ್ಯಾನ್ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಮೃತಪಟ್ಟಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ 89 ವರ್ಷದ ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್ ಕ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು (Dharmendra No More). ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್ ಮಾಡಲಾಗಿತ್ತು. ಆದರೆ ಇದೀಗ ಅವರು ಮೃಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಇಡಿ ಚಿತ್ರರಂಗವೇ ಕಂಬನಿ ಮಿಡಿದಿದೆ.
1935ರ ಡಿಸೆಂಬರ್ 8ರಂದು ಪಂಜಾಬ್‌ನ ನಸ್ರಾಲಿಯಲ್ಲಿ ಜನಿಸಿದ ಧರ್ಮೇಂದ್ರ 1960ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನು ಅಭಿಮಾನಿಗಳು ಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿ ಅನೇಕ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಎಎನ್‌ಐ ಸುದ್ದಿಸಂಸ್ಥೆಯ ಎಕ್ಸ್ ಪೋಸ್ಟ್:
1960ರಲ್ಲಿ ರಿಲೀಸ್ ಆದ ʼದಿಲ್ ಬಿ ತೇರ ಹಮ್ ಬಿ ತೇರೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಧರ್ಮೇಂದ್ರ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಬರೋಬ್ಬರಿ 6 ದಶಕಗಳಿಂದ ಹೆಚ್ಚು ಕಾಲ ಅಭಿನಯಿಸುತ್ತಲೇ ಬಂದಿದ್ದಾರೆ. ಹಿಂದಿ ಜತೆಗೆ ಪಂಜಾಬಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅದರಲ್ಲಿಯೂ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ʼಶೋಲೆʼಯಲ್ಲಿನ ಅವರ ನಟನೆಯನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
ನಟ ಧರ್ಮೇಂದ್ರ ಬಳಿ ಎಷ್ಟು ಮೊತ್ತದ ಆಸ್ತಿ ಇದೆ ಗೊತ್ತಾ? ಇಲ್ಲಿದೆ ಡಿಟೇಲ್ಸ್
ಸದ್ಯ ಧರ್ಮೇಂದ್ರ ಕಾಣಿಸಿಕೊಂಡ ʼಇಕ್ಕೀಸ್ʼ ಹಿಂದಿ ಚಿತ್ರ ರಿಲೀಸ್‌ಗೆ ರೆಡಿ ಇದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಧರ್ಮೇಂದ್ರ ಮುಖ್ಯ ಪಾತ್ರ ನಿರ್ವಹಿಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಕಥೆಯನ್ನು ಇದು ಹೊಂದಿದೆ.